ಹೆಚ್ಚುಳಿದ ಚಪಾತಿಯನ್ನು ಇನ್ನಷ್ಟು ರುಚಿಯಾಗಿಸಲು ಇಲ್ಲಿದೆ ಟಿಪ್ಸ್

ನಮ್ಮ ಆಹಾರ ಪದ್ಧತಿಯಲ್ಲಿ ಚಪಾತಿಯೂ ಒಂದಾಗಿದೆ. ಚಪಾತಿ ಸೇವನೆಯಿಂದ ದೇಹದ ತೂಕ ನಿಯಂತ್ರಿಸಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುವ ಜೊತೆಗೆ ವಿಟಮಿನ್ಗಳು ಹಾಗೂ ಖನಿಜಾಂಶಗಳ ಕೊರತೆಯನ್ನು ನೀಗಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇವೆಲ್ಲದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ ಹಾಗೂ ಚರ್ಮದ ಆರೋಗ್ಯ ಕಾಪಾಡಲು ಸಹಾಯಕವಾಗಿದೆ. ಬಾಯಿಗೆ ರುಚಿಯಾದ ಇಷ್ಟೆಲ್ಲಾ ಉಪಯುಕ್ತವಾದ ಚಪಾತಿಯನ್ನು ಸಾಮಾನ್ಯವಾಗಿ ಇತ್ತೀಚೆಗೆ ಹಲವು ಕಡೆಗಳಲ್ಲಿ ದಿನವೂ ಮಾಡ್ತಾರೆ. ಆದರೆ ಆ ಚಪಾತಿ ಹೆಚ್ಚಿದ್ದರೆ ಏನು ಮಾಡಬೇಕು ಎಂಬುದು ಮಾತ್ರ ಗೊತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬರಬಹುದಾದ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.

  1. ಚಪಾತಿ ನ್ಯುಡಲ್ಸ್
    ಉಳಿದಿರುವ ಚಪಾತಿಯನ್ನು ನ್ಯುಡಲ್ಸ್ ನಂತೆ ತೆಳ್ಳಗೆ ಕತ್ತರಿಸಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಗೂ ಇತರೆ ತರಕಾರಿ ಸೇರಿಸಿ ಹುರಿಯಿರಿ ತರಕಾರಿಯೆಲ್ಲ ಬೆಂದ ನಂತರ ಚಿಟಿಕೆ ಉಪ್ಪು, ಸೋಯಾ ಸಾಸ್, ಚಿಲ್ಲಿ ಸಾಸ್ ಹಾಕಿ ಕತ್ತರಿಸಿದ ಚಪಾತಿ ಸೇರಿಸಿ 2 ನಿಮಿಷ ಹುರಿಯಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಸವಿಯಿರಿ.
  2. ಚಪಾತಿ ಒಗ್ಗರಣೆ
    ಉಳಿದ ಚಪಾತಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಜೀರಿಗೆ, ಇಂಗು, ಕಡಲೆಬೀಜ, ಕರಿಬೇವು ಸೇರಿಸಿ ನಂತರ ಹೆಚ್ಚಿದ ಈರುಳ್ಳಿ, ಚಿಟಿಕೆ ಉಪ್ಪು, ಅರಿಶಿನ, ಖಾರದಪುಡಿ ಬೆರೆಸಿ ಬಾಡಿಸಿಕೊಂಡು ಅದಕ್ಕೆ ಕತ್ತರಿಸಿದ ಚಪಾತಿ ಸೇರಿಸಿ 2 ನಿಮಿಷ ಹುರಿದು ಸವಿಯಿರಿ.
  3. ಚಪಾತಿ ಸ್ಯಾಂಡ್ವಿಚ್
    ತವಾ ಬಿಸಿಮಾಡಿ ಚಪಾತಿಇಟ್ಟು ಅದರ ಮೇಲೆ ಕೆಚಪ್ ಅಥವಾ ಹಸಿರು ಚಟ್ನಿ ಸವರಿಕೊಳ್ಳಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ತುರಿದ ಚೀಸ್ ಅಥವಾ ಬೇಯಿಸಿದ ಆಲೂಗಡ್ಡೆ ಸ್ಟಪ್ಪಿಂಗ್ ಜೊತೆಗೆ ಮಸಾಲೆ ಸೇರಿಸಿ ಇನ್ನೊಂದು ಚಪಾತಿಯಿಂದ ಮುಚ್ಚಿ ತುಪ್ಪ ಸವರಿ ಎರಡೂಕಡೆ ಸ್ವಲ್ಪ ಕೆಂಪಗಾಗುವ ವರೆಗೆ ತಿರುವಿ ನಂತರ ಸವಿಯಿರಿ.
  4. ಚಪಾತಿ ರೋಲ್
    ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕತ್ತರಿಸಿದ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ ನಂತರ ಕತ್ತರಿಸಿದ ಕ್ಯಾರೆಟ್, ಕ್ಯಾಪ್ಸಿಕಂ ಇನ್ನಿತರ ಬೇಕಾದ ತರಕಾರಿ ಸೇರಿಸಿ ಬೇಯಿಸಿಕೊಳ್ಳಿ ಅದಕ್ಕೆ ಉಪ್ಪು ಅರಿಶಿನ ಪುಡಿ ಇನ್ನಿತರ ಮಸಾಲೆ ಹಾಗೂ ಇಷ್ಟದ ಸಾಸ್ ಸೇರಿಸಿ ಚಪಾತಿ ಮಧ್ಯದಲ್ಲಿ ಈ ಸ್ಟಪ್ಪಿಂಗ್ ಹಾಕಿ ಚಪಾತಿಯನ್ನು ಬಿಗಿಯಾಗಿ ಸುತ್ತಿ ಸವಿಯಿರಿ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories