ತೆಂಗಿನಕಾಯಿಯ ಸಿಪ್ಪೆಯನ್ನು ಸೆಕೆಂಡುಗಳಲ್ಲಿ ತೆಗೆಯುವುದು ಹೇಗೆ?

ಈ ಸುಲಭವಾದ ವೈರಲ್ ಹ್ಯಾಕ್ ನ್ನು ಪ್ರಯತ್ನಿಸಿ.
ಈ ವೈರಲ್ ಕಿಚನ್ ಹ್ಯಾಕ್ ತೆಂಗಿನಕಾಯಿಯ ತಿರುಳನ್ನು ಅದರ ಚಿಪ್ಪಿನಿಂದ ಸುಲಭವಾಗಿ ಬೇರ್ಪಡಿಸುತ್ತದೆ.
ಇದರಿಂದಾಗಿ ಅಡುಗೆ ಮಾಡುವಾಗ ಬಹಳಷ್ಟು ಸಮಯವನ್ನು ಉಳಿಸಬಹುದಾಗಿದೆ ಹಾಗೆಯೇ ಚಟ್ನಿ , ಸಾಂಬಾರು, ಹುಳಿ ಹೀಗೆ ಮುಂತಾದವುಗಳಿಗೆ ಪರಿಪೂರ್ಣವಾದ ಕಾಯಿ ತುಂಡುಗಳನ್ನು ಸುಲಭವಾಗಿ ನೀಡುತ್ತದೆ.
ಅಡುಗೆ ಮಾಡುವಾಗ ಕಾಯಿಯನ್ನು ಅದರ ಚಿಪ್ಪಿನಿಂದ ಬೇರ್ಪಡಿಸುವುದು ಅದೊಂದು ಯುದ್ಧವೇ ಸರಿ. ಆದರೆ ಈಗ ಆನ್‌ಲೈನ್‌ನಲ್ಲಿ ಅಲೆಗಳನ್ನು ಸೃಷ್ಟಿಸುತ್ತಿರುವ ಒಂದು ಬುದ್ಧಿವಂತ ಅಡುಗೆ ಹ್ಯಾಕ್ ಈ ಕಠಿಣ ಕೆಲಸವನ್ನು ಆಶ್ಚರ್ಯಕರವಾಗಿ ಸುಲಭಗೊಳಿಸುತ್ತದೆ. ಇದಕ್ಕೆ ಬೇಕಾಗಿರುವುದು ಸ್ವಲ್ಪ ಶಾಖ ಹಾಗೂ ತಂಪು.
ಈ ತಂತ್ರದಿಂದ ಕಾಯಿಯ ಒಳ ಭಾಗವನ್ನು ತೆಗೆಯುವಾಗ ನಮ್ಮ ಬೆರಳುಗಳಿಗೆ ಆಗುವ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಬಹುದು. ಸ್ವಲ್ಪ ಸ್ವಲ್ಪ ಕಾಯಿಯನ್ನು ಕೆರೆದು ತೆಗೆಯುವುದಕ್ಕಿಂತ ಒಂದೇ ಸಲ ಕಾಯಿ ಹಾಗು ಚಿಪ್ಪು ಬೇರ್ಪಡಿಸಲು ಈ ವಿಧಾನವು ಬಹಳ ಉಪಯೋಗಕಾರಿಯಾಗಿದೆ ಎಂದು ಹೇಳಬಹುದು.
ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.
ಮೊದಲನೆಯದಾಗಿ ತೆಂಗಿನ ಕಾಯಿಯನ್ನು ಒಡೆದು ನೀರನ್ನು ಹೊರಹಾಕಿ. ನಂತರ ಚಿಪ್ಪನ್ನು ಸ್ವಚ್ಚಗೊಳಿಸಿ, ತೆಂಗಿನ ಕಾಯಿಯ ಬದಿಯನ್ನು ಮೇಲ್ಮುಖವಾಗಿಟ್ಟು ಕಡಿಮೆ ಉರಿಯಲ್ಲಿ ಸುಮಾರು 5-10 ನಿಮಿಷಗಳ ಕಾಲ ಇರಿಸಬೇಕು.
ಚಿಪ್ಪು ಸುಡದಂತೆ ಎಚ್ಚರ ವಹಿಸಬೇಕು. ನಿಧಾನವಾಗಿ ಬಿಸಿ ಮಾಡುವುದು ಅತ್ಯಗತ್ಯ. ನಿಮ್ಮಲ್ಲಿ ಮೈಕ್ರೋವೇವ್ ಇದ್ದರೆ 30 ಸೆಕೆಂಡುಗಳ ಕಾಲ ಬಿಸಿ ಮಾಡುವುದರಿಂದ ಕೆಲಸವೂ ಬೇಗ ಹಾಗು ಚೆನ್ನಾಗಿ ಆಗುತ್ತದೆ.
ನಂತರ ತೆಂಗಿನಕಾಯಿ ಬಿಸಿ ಆದಮೇಲೆ ಅದನ್ನು ತಣ್ಣನೆಯ ನೀರಿನಲ್ಲಿ ಅಥವಾ ಫ್ರೀಜರ್ ನಲ್ಲಿ ಕೆಲ ನಿಮಿಷಗಳ ಕಾಲ ಇರಿಸಬೇಕು. ಒಮ್ಮೆಲೆ ತಾಪಮಾನ ಬದಲಾವಣೆಯ ಕಾರಣ ಚಿಪ್ಪು ಮತ್ತು ಕಾಯಿಯ ಬಿಳಿ ಭಾಗದ ನಡುವಿನ ನಾರಿನ ಪದರವು ಸಡಿಲಗೊಳ್ಳುತ್ತದೆ.
ಈಗ ನೀವು ಚಮಚದ ಹಿಂಭಾಗದಿಂದ ಅಥವಾ ಚಾಕುವಿನಿಂದ ಚಿಪ್ಪನ್ನು ಟ್ಯಾಪ್ ಮಾಡಿದಾಗ ತೆಂಗಿನ ಕಾಯಿ ಸಲೀಸಾಗಿ ಹೊರಬರುತ್ತದೆ. ಯಾವುದೇ ಸ್ಕ್ರ್ಯಾಪಿಂಗ್ ( ಕೆರೆಯುವುದು ) ಇಲ್ಲ ಹಾಗೂ ಯಾವುದೇ ಗೊಂದಲವೂ ಇಲ್ಲ.
ಈ ಸಿಂಪಲ್ ಹ್ಯಾಕ್ ತುಂಬಾ ಜನರಿಗೆ ಸಹಾಯಕವಾಗಿದೆ. ಇದರಿಂದ ಬೇಗ ಅಡುಗೆ ಮಾಡಿ ಮುಗಿಸಬೇಕೆಂಬ ಸಂದರ್ಭದಲ್ಲಿ ತುಂಬಾ ಸಮಯ ಉಳಿತಾಯ ಮಾಡಬಹುದು. ಈ ಹ್ಯಾಕ್ ನ್ನು ತಪ್ಪದೆ ಟ್ರೈ ಮಾಡಿ.



