Suvidha Cabin : ಪೌರ ಕಾರ್ಮಿಕರ ಕಷ್ಟಕ್ಕೆ ಕಣ್ತೆರೆದ ಬಿಬಿಎಂಪಿ : ಕಾರ್ಮಿಕರಿಗೆ ಬರಲಿದೆ ಸುವಿಧಾ ಕ್ಯಾಬಿನ್

ಸಿಲಿಕಾನ್ ಸಿಟಿ, ಉದ್ಯಾನ ನಗರೀ ಎಂದೆಲ್ಲ ಕರೆಯಿಸಿಕೊಳ್ಳೋ ಬೆಂಗಳೂರಿನ‌ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡೋದು ಪೌರ ಕಾರ್ಮಿಕರು. ಆದರೆ ಈ ಪೌರ ಕಾರ್ಮಿಕರ ಸ್ವಚ್ಛತೆ ಹಾಗೂ ವಿಶ್ರಾಂತಿ ಮತ್ತು ತುರ್ತು ಅಗತ್ಯಕ್ಕೆ ರಸ್ತೆಯೇ ಗತಿ ಅನ್ನೋ ಸ್ಥಿತಿ ಇತ್ತು. ಆದರೆ ಈ ಪೌರ ಕಾರ್ಮಿಕರ ಬಹು ವರ್ಷದ ಬೇಡಿಕೆಗೆ ಕೊನೆಗೂ ಬಿಬಿಎಂಪಿ ಸ್ಪಂದಿಸಿದ್ದು, ಪೌರಕಾರ್ಮಿಕರಿಗಾಗಿ ಸುವಿಧಾ ಕ್ಯಾಬಿನ್ (Suvidha Cabin ) ನಿರ್ಮಾಣಕ್ಕೆ ಮುಂದಾಗಿದೆ. ಘೋಷಣೆಯಾಗಿದ್ದರೂ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಈಗ ಮತ್ತೆ ಕಾರ್ಯಗತವಾಗುತ್ತಿದೆ.

ಬೆಂಗಳೂರು ಬಿಬಿಎಂಪಿ ವಾರ್ಡ್ ಗಳ ವ್ಯಾಪ್ತಿಯಲ್ಲಿ 25,000 ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಶೇ.75ರಷ್ಟು ಮಹಿಳೆಯರು ರಸ್ತೆಗಳ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಪೌರಕಾರ್ಮಿಕರಿಗೆ ತಿಂಡಿ ತಿನ್ನಲು, ವಿಶ್ರಾಂತಿ ಪಡೆಯಲು ಹಾಗೂ ಕೆಲಸ ಮುಗಿದ ಬಳಿಕ ಸಮವಸ್ತ್ರವನ್ನು ಬದಲಾಯಿಸಲು ಸರಿಯಾದ ವ್ಯವಸ್ಥೆಯಿರಲಿಲ್ಲ. ಅಲ್ಲದೇ ಪುರುಷ ಹಾಗೂ ಮಹಿಳಾ ಪೌರಕಾರ್ಮಿಕರು ರಸ್ತೆಯಲ್ಲೇ ಊಟ,ವಿಶ್ರಾಂತಿ ಎಲ್ಲವನ್ನೂ ಪೊರೈಸುವ ಸ್ಥಿತಿ ಇತ್ತು. ಅಲ್ಲದೇ ಮಹಿಳಾ ಪೌರಕಾರ್ಮಿಕರು ತಿಂಗಳ ಅವಧಿಯ ತುರ್ತು ಅಗತ್ಯಕ್ಕೆ ಸರಿಯಾದ ವ್ಯವಸ್ಥೆ ಇಲ್ಲದೆ ರಜೆ ಹಾಕುತ್ತಿದ್ದರು. ಈ ಸಮಸ್ಯೆ ಅರಿತ ಬಿಬಿಎಂಪಿ ಸುವಿಧಾ ಕ್ಯಾಬಿನ್ ಯೋಜನೆ ಮೂಲಕ ಪರಿಹಾರ ಕೊಡಲು ಮುಂದಾಗಿದೆ.

ಸುವಿಧಾ ಕ್ಯಾಬಿನ್ ಬಟ್ಟೆ ಬದಲಾಯಿಸುವ ರೂಮ್, ಶೌಚಾಲಯ, ಮಗುವಿಗೆ ಹಾಲುಣಿಸಲು ಜಾಗ, ಶುದ್ಧ ಕುಡಿಯುವ ನೀರು, ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್‌ ಹೊಂದಿರುವ ಕೊಠಡಿಗಳನ್ನು ಸುವಿಧಾ ಕ್ಯಾಬಿನ್ ಒಳಗೊಂಡಿರಲಿದೆ. ಇನ್ನು ನಗರದ 221ಕಡೆಗಳಲ್ಲಿ ಸುವಿಧಾ ಕ್ಯಾಬೀನ್ ಮೊದಲ ಹಂತದಲ್ಲಿ ನಿರ್ಮಾಣವಾಗಲಿದೆ. ಇದಕ್ಕಾಗಿ ಒಟ್ಟು 12.15 ಕೋಟಿ ವೆಚ್ಚದಲ್ಲಿ ಕ್ಯಾಬಿನ್ ಆಳವಡಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಪ್ರಾರಂಭಗೊಂಡಿದೆ. ಮುಂದಿನ ಆರು ತಿಂಗಳೊಳಗಾಗಿ ಕ್ಯಾಬಿನ್ ಆಳವಡಿಕೆ ಕೆಲಸ ಪೂರ್ಣಗೊಳ್ಳಲಿದೆ.

ಈ ಕ್ಯಾಬಿನ್ ಗಳನ್ನು ಯಾವಾಗ ಎಲ್ಲಿ ಬೇಕಾದರೂ ಅಳವಡಿಸುವಂತೆ ಸಿದ್ಧಪಡಿಸಲಾಗಿದ್ದು, ಪೌರ ಕಾರ್ಮಿಕರ ಸಂಖ್ಯೆ ಆಧರಿಸಿ ಸುವಿಧಾ ಕ್ಯಾಬಿನ್ ಬಳಕೆಗೆ ಸಿಗಲಿದೆ. ಒಟ್ಟಿನಲ್ಲಿ ಪೌರ ಕಾರ್ಮಿಕರು ವರ್ಷಗಳಿಂದ ಕಾದು ಕುಳಿತಿದ್ದ ಈ ಸುವಿಧಾ ಕ್ಯಾಬಿನ್ ಯೋಜನೆ ಈಗ ಪೂರ್ಣಗೊಳ್ಳುವ ಭರವಸೆಯಲ್ಲಿದ್ದು, ಇದರಿಂದ ಪೌರ ಕಾರ್ಮಿಕರಿಗೂ ಕೆಲಸದ ವೇಳೆ ಕನಿಷ್ಠ ಮೂಲಭೂತ ಸೌಲಭ್ಯಗಳು ಸಿಕ್ಕಂತಾಗಲಿದೆ.

ಇದನ್ನೂ ಓದಿ : BESCOM : ಬೆಂಗಳೂರಿನಲ್ಲಿ ಸಾವಿನ ಸರಣಿ : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಇದನ್ನೂ ಓದಿ : ಬೆಂಗಳೂರು ಕರಗಕ್ಕೆ ಕ್ಷಣಗಣನೆ: ಲಕ್ಷಾಂತರ ಜನರು ಭಾಗಿಯಾಗೋ ನಿರೀಕ್ಷೆ

BBMP Introduce Suvidha Cabin for civic workers

Comments are closed.