Dingko Singh: ಭಾರತದ ಮಾಜಿ ಬಾಕ್ಸರ್ ಡಿಂಗ್ಕೋ ಸಿಂಗ್ ಸಾವು :ಮೊದಲ ಚಿನ್ನ ಗೆದ್ದ ಬಾಕ್ಸರ್ ಇನ್ನು ನೆನಪು ಮಾತ್ರ

ನವದೆಹಲಿ : ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟ ಖ್ಯಾತ ಮಾಜಿ ಬಾಕ್ಸರ್ ಡಿಂಗ್ಕೋ ಸಿಂಗ್ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

ಸುಮಾರು 16 ವರ್ಷಗಳ ಹಿಂದೆ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಡಿಂಗ್ಕೋ ಸಿಂಗ್ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ದೇಶದ ಹಲವಾರು ಬಾಕ್ಸರ್ ಗಳಿಗೆ ಪ್ರೇರಣೆಯಾಗಿದ್ದರು.

1979 ರಲ್ಲಿ ಮಣಿಪುರ ರಾಜ್ಯದ ಇಂಪಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದ ಡಿಂಗ್ಕೋ ಸಿಂಗ್, ಬಾಲ್ಯದಿಂದಲೂ ಬಾಕ್ಸಿಂಗ್ ನತ್ತ ಆಕರ್ಷಿತರಾಗಿದ್ದರು. ಕಿರಿಯರ ವಿಭಾಗ ಹಾಗೂ ಹಿರಿಯ ವಿಭಾಗದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿಯೂ ಪ್ರಖ್ಯಾತಿಯನ್ನು ಗಳಿಸಿದ್ದರು. ಡಿಂಗ್ಕೋ ಸಿಂಗ್ ಅವರ ಸಾಧನೆಗೆ ಅರ್ಜುನ್ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

2017 ರಿಂದಲೂ ಡಿಂಗ್ಕೋ ಸಿಂಗ್ ಪಿತ್ತ ಜನಕಾಂಗದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 42 ವರ್ಷದ ಡಿಂಗ್ಕೋ ಸಿಂಗ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪತ್ನಿ ಬಾಬಾಯಿ ನ್ಗಾಂಗೊಮ್, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.

ಬಾಕ್ಸರ್ ಡಿಂಗ್ಕೋ ಸಿಂಗ್ ಅವರ ದುಃಖದ ನಿಧನ‍‍ಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಡಿಂಗ್ಕೊ ಸಿಂಗ್ ಅವರು ಕ್ರೀಡಾ ಸೂಪರ್ ಸ್ಟಾರ್. ಅತ್ಯುತ್ತಮ ಬಾಕ್ಸರ್ ಆಗಿದ್ದರು ಮತ್ತು ಅವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದರು ಮತ್ತು ಬಾಕ್ಸಿಂಗ್ ಜನಪ್ರಿಯತೆಯನ್ನು ಹೆಚ್ಚಿಸಲು ಸಹಕರಿಸಿದರು. ಅವರು ತೀರಿಕೊಂಡಾಗ ದುಃಖವಾಯಿತು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸಿದ್ದಾರೆ.

Comments are closed.