Goa-Rajdhani Express : ಹಳಿತಪ್ಪಿದ ದೆಹಲಿ – ಗೋವಾ ರಾಜಧಾನಿ ಎಕ್ಸ್‌ಪ್ರೆಸ್ ರೈಲು : ತಪ್ಪಿದ‌‌‌ ಭಾರೀ ದುರಂತ, ಪ್ರಯಾಣಿಕರು ಸುರಕ್ಷಿತ

ಮುಂಬೈ :  ದೆಹಲಿಯಿಂದ ಗೋವಾಕ್ಕೆ ಚಲಿಸುತ್ತಿರುವ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸುರಂಗ ದೊಳಗೆ ಹಳಿ ತಪ್ಪಿದೆ. ಆದರೆ ಸಂಭವಿಸಲಿದ್ದ‌‌ ಭಾರೀ ದುರಂತವೊಂದು ತಪ್ಪಿದೆ.

ರೈಲು – 02414 – ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಗೋವಾದ ಮಡ್ಗಾಂವ್‌ಗೆ ಹೋಗುತ್ತಿದ್ದಾಗ ಮುಂಬೈನಿಂದ ಸುಮಾರು 325 ಕಿ.ಮೀ ದೂರದಲ್ಲಿರುವ ಕಾರ್ಬುಡೆ ಸುರಂಗದೊಳಗೆ  ಮುಂಜಾನೆ 4.15 ರ ಸುಮಾರಿಗೆ ಹಳಿ ತಪ್ಪಿದೆ. ಹಳಿಗಳ ಮೇಲೆ ಬೃಹದಾಕಾರದ ಬಂಡೆ ಉರುಳಿಬಿದ್ದಿರುವುದು ರೈಲು ಹಳಿತಪ್ಪಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

ಕೊಂಕಣ ರೈಲ್ವೆಯ ರತ್ನಾಗಿರಿ ಪ್ರದೇಶದ ಉಕ್ಷಿ ಮತ್ತು ಭೋಕ್ ನಿಲ್ದಾಣಗಳ ನಡುವೆ ಇರುವ ಕಾರ್ಬುಡೆ ಸುರಂಗದಲ್ಲಿ ರಾಜಧಾನಿ ಸೂಪರ್‌ ಫಾಸ್ಟ್ ರೈಲಿನ ಲೋಕೋಮೋಟಿವ್‌ನ ಮುಂಭಾಗದ ಚಕ್ರ ಹಳಿ ತಪ್ಪಿದೆ. ಇದೀಗ  ರೈಲ್ವೆ ನಿರ್ವಹಣಾ ವಾಹನ (ಆರ್‌ಎಂವಿ) ಸ್ಥಳಕ್ಕೆ ತಲುಪಿದ್ದು, ಮರು- ರೇಲಿಂಗ್ ಉಪಕರಣ ಗಳನ್ನು ಹೊಂದಿರುವ ಅಪಘಾತ ಪರಿಹಾರ ವೈದ್ಯಕೀಯ ವ್ಯಾನ್ (ಎಆರ್‌ಎಂವಿ) ಬಂಡೆ ತೆರವು ಕಾರ್ಯ ನಡೆಸಲಾಗುತ್ತಿದೆ.

ಕೊಂಕಣ ರೈಲ್ವೆ ಮುಂಬೈ ಬಳಿಯ ರೋಹಾ ಮತ್ತು ಮಂಗಳೂರು ಬಳಿಯ ತೋಕೂರ್ ನಡುವೆ 756 ಕಿ.ಮೀ ಉದ್ದದ ಮಾರ್ಗವನ್ನು ನಿರ್ವಹಿಸುತ್ತದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಎಂಬ ಮೂರು ರಾಜ್ಯಗಳಲ್ಲಿ ಹರಡಿರುವ ಈ ಮಾರ್ಗವು ಅನೇಕ ನದಿಗಳು, ಕಮರಿಗಳು ಮತ್ತು ಪರ್ವತಗಳನ್ನು ಹೊಂದಿರುವ ಸವಾಲಿನ ಭೂಪ್ರದೇಶಗಳಲ್ಲಿ ಒಂದಾಗಿದೆ.

Comments are closed.