Cylinder Blast : ಸಿಲಿಂಡರ್‌ ಸ್ಪೋಟ 9 ಮಂದಿ ದುರ್ಮರಣ

ಅಹಮದಾಬಾದ್: ಎಲ್‌ಪಿಜಿ ಅನಿಲ ಸೋರಿಕೆಯಾಗಿ ಗ್ಯಾಸ್‌ ಸಿಲಿಂಡರ್‌ ಸ್ಪೋಟಗೊಂಡು 9 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಅಹಮದಾಬಾದ್ ನಗರದ ಹೊರವಲಯದಲ್ಲಿ ನಡೆದಿದೆ.

ರಾಂಪ್ಯಾರಿ ಅಹಿರ್ವಾರ್ (56 ವರ್ಷ), ರಾಜುಭಾಯ್ ಅಹಿರ್ವಾರ್ (31 ವರ್ಷ), ಸೋನು ಅಹಿರ್ವಾರ್ (21 ವರ್ಷ ), ಸೀಮಾ ಅಹಿರ್ವಾರ್ (25 ವರ್ಷ), ಸರ್ಜು ಅಹಿರ್ವಾರ್ (22 ವರ್ಷ), ವೈಶಾಲಿ (7 ವರ್ಷ), ನಿತೇಶ್ (6 ವರ್ಷ), ಪಾಯಲ್ (4 ವರ್ಷ), ಆಕಾಶ್ (2ವರ್ಷ) ಎಂಬವರೇ ಮೃತ ದುರ್ದೈವಿಗಳಾಗಿದ್ದಾರೆ. ರಾತ್ರಿ ಮಲಗಿದ್ದ ವೇಳೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆ ಸ್ಫೋಟ ಮತ್ತು ಬೆಂಕಿಯನ್ನು ಉಂಟುಮಾಡಿದೆ, ಇದರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 10 ಜನರು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ಘಟನೆಯಲ್ಲಿ ಇದುವರೆಗೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ಮೃತಪಟ್ಟವರೆಲ್ಲರೂ ಕಾರ್ಮಿಕರಾಗಿದ್ದು ರಾಜಸ್ಥಾನದ ಕರೌಲಿಯ ಕುಡ್ಗಾಂವ್ ಮೂಲದವರಾಗಿದ್ದಾರೆ. ಕೆಲಸ ಮಾಡಿಕೊಂಡು ಅಹಮದಾಬಾದ್‌ ನಲ್ಲಿ ವಾಸವಾಗಿದ್ದರು. ಎಲ್ಲಾ ಕಾರ್ಮಿಕರು, ಸಣ್ಣ ಕೋಣೆಯಲ್ಲಿ ಮಲಗಿದ್ದರು. ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಲು ಪ್ರಾರಂಭಿಸಿದಾಗ ಕಾರ್ಮಿಕರಿಗೆ ಗೊತ್ತೇ ಆಗಿರಲಿಲ್ಲ. ಆದರೆ ನೆರೆಹೊರೆಯವರು ಮನೆ ಬಾಗಿಲು ಬಡಿದಾಗ ಮನೆಯವರು ಎದ್ದು ವಿದ್ಯುತ್‌ ಸ್ವಿಚ್‌ ಆನ್‌ ಮಾಡಿದ್ದಾರೆ. ಮನೆಯ ತುಂಬೆಲ್ಲಾ ಗ್ಯಾಸ್‌ ತುಂಬಿದ್ದು, ಬೆಳಕು ಹಾಕುತ್ತಿದ್ದಂತೆಯೇ ಗ್ಯಾಸ್‌ ಸ್ಪೋಟ ಸಂಭವಿಸಿದೆ.

ಗಾಯಗೊಂಡ 10 ಜನರಲ್ಲಿ ಕಾರ್ಮಿಕರನ್ನು ಎಚ್ಚರಿಸಲು ಬಂದ ನೆರೆಹೊರೆಯವರು ಸೇರಿದ್ದಾರೆ ಮತ್ತು ಅವರೆಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರ ಶವಗಳನ್ನು ಮಧ್ಯಪ್ರದೇಶದ ತಮ್ಮ ಗ್ರಾಮಕ್ಕೆ ಕಳುಹಿಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Comments are closed.