Hijab Row Opinion: ಬ್ರಾಹ್ಮಣ ಸಮುದಾಯದಂತೆ ಮುಸ್ಲಿಂ ಸಮುದಾಯ ‘ಓಪನ್ ಅಪ್’ ಆಗುವುದು ಯಾವಾಗ?

ಪ್ರಸ್ತುತ ಮುಸ್ಲಿಂ ಸಮುದಾಯದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುತ್ತವೆ. ಮುಸ್ಲಿಂ ಸಮುದಾಯದ ಪುರುಷರು ಮಹಿಳೆಯರನ್ನು ತಮ್ಮ ಬಿಗಿಮುಷ್ಠಿಯಲ್ಲಿ ಹಿಡಿದಿಟ್ಟಿಕೊಂಡ ನಗ್ನಸತ್ಯ ಹಿಜಾಬ್ ವಿವಾದದಲ್ಲಿ ಬೆತ್ತಲಾಗಿದೆ. ಎಲ್ಲರೂ ಅಲ್ಲ, ಕೆಲವೆ ಕೆಲವು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು (Karnataka Udupi Student’s Hijab Row) ತರಗತಿಯಲ್ಲೂ ಹಿಜಾಬ್‌ಗಾಗಿ ಹಕ್ಕಿನ ಹೆಸರಲ್ಲಿ ಧ್ವನಿ ಎತ್ತಿರುವುದು, ಸಮವಸ್ತ್ರ-ಶಿಕ್ಷಣಕ್ಕಿಂತ (Hijab Row Opinion) ಹಿಜಾಬ್ ಅಥವಾ ಧರ್ಮವೇ ತಮಗೆ ಬೇಕೆಂದು ವಾದಿಸುತ್ತಿರುವುದು ದುರಾದೃಷ್ಟಕರ. ಮನೆಯಿಂದ ಹೊರಬಂದು ಜಗುಲಿ, ಅಂಗಳ ಮತ್ತು ಸಮಾಜದಲ್ಲಿ ಬೆರೆಯಬೇಕಿದ್ದ ಮುಸ್ಲಿಂ ಸಮುದಾಯ ಸ್ತ್ರೀಯರನ್ನು ಹಿಜಾಬ್ ಹೆಸರಲ್ಲಿ ಮನೆಯ ಒಳಕೋಣೆಗೆ ತಳ್ಳುತ್ತಿರುವ ಸಾದೃಶ ಉದಾಹರಣೆಯಿದು. ಸ್ತ್ರೀವಾದಿಗಳು ತಮ್ಮ ತುಟಿಗೆ ಹೊಲಿಗೆ ಹಾಕಿ ಕುಳಿತಿರುವುದು ಅವರ ಇಬ್ಬಗೆ ನೀತಿಯನ್ನು ತೋರಿಸುವಂತಿದೆ.

ಪ್ರಾಚೀನ ಮನುಸ್ಮೃತಿಯ ನೆರಳಿನಿಂದ ಹಿಂದೂ ಸಮಾಜ ಮತ್ತು ಬ್ರಾಹ್ಮಣ ಸಮುದಾಯ ಹೊರಬಂದಿದೆ ಮತ್ತು ಕೆಲವೇ ಕೆಲವು ಅಂಶಗಳಿದ್ದರೂ ಅವುಗಳಿಂದ ಹೊರಬಂದು ‘ಓಪನ್ ಅಪ್’ ಆಗಲು ಪ್ರಯತ್ನಿಸುತ್ತಿದೆ. ಈಗ ಬ್ರಾಹ್ಮಣ ಸಮುದಾಯದಲ್ಲಿ ವಿಧವೆಯರು ಕೇಶ ಮುಂಡನ ಮಾಡಿಕೊಂಡು ಕೆಂಪು ಸೀರೆ ಉಡುವ ಸಂಪ್ರದಾಯ ಅಚರಣೆಯಲ್ಲಿಲ್ಲ. ಮನೆಯೊಳಗೇ ಹೊಕ್ಕಿ ಕೂರುವ ಜಾಯಮಾನವಿಲ್ಲ. ಮುಟ್ಟು ಮಡಿ ಮೈಲಿಗೆಗಳೂ ಹೆಸರಿಗಷ್ಟೇ ಇವೆ ಅಥವಾ ಇದ್ದರೂ ಇಲ್ಲದಂತಿವೆ. ಬ್ರಾಹ್ಮಣರ ಹುಡುಗ ಸಾಯಂ ಸಂಧ್ಯಾವಂದನೆಗಳನ್ನು ಮಾಡದಿದ್ದರೂ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಸಾರ್ವಜನಿಕ ನಡವಳಿಕೆ ಸಭ್ಯವಾಗಿಲ್ಲದಿದ್ದರೆ ಇಡೀ ಸಮಾಜವೇ ಅವನನ್ನು ಪ್ರಶ್ನಿಸುತ್ತದೆ. ಗದರುತ್ತದೆ. ಬ್ರಾಹ್ಮಣ ವ್ಯಕ್ತಿಯೋರ್ವನಿಂದ ಎಲ್ಲೆ ಜಾತಿ ತಾರತಮ್ಯವಾದರೂ ಇಡಿ ಸಮಾಜ ಒಕ್ಕೊರಲಿನಿಂದ ಆತನನ್ನು ಮಾತಿನಲ್ಲೆ ಮರಣ ದಂಡನೆ ವಿಧಿಸುತ್ತದೆ. ಅಷ್ಟರಮಟ್ಟಿಗೆ ಬ್ರಾಹ್ಮಣರು ಮತ್ತು ಹಿಂದೂ ಸಮಾಜ ಓಪನ್ ಅಪ್ ಆಗಿದೆ. ಇನ್ನೂ ಹಲವು ಬಗೆಯಲ್ಲಿ ಸಮಾಜಕ್ಕೆ ತೆರೆದುಕೊಳ್ಳಬೇಕಿದೆ, ಮತ್ತು ಈ ಪ್ರಕ್ರಿಯೆಯ ಬೆಳವಣಿಗೆ ಕಾಲಕಾಲಕ್ಕೆ ಜಾರಿಯಲ್ಲಿದೆ.

ತರಗತಿಯ ಒಳಗೂ ಹಿಜಾಬ್ ಬೇಕೆಂದು ವಾದಿಸುವ ವಿದ್ಯಾರ್ಥಿನಿಯರು ಹೇಳುವ ಕಾರಣ-“ಪುರುಷ ಅಧ್ಯಾಪಕರು”. ಕಲಿಸುವ ಶಿಕ್ಷಕರ ಬಗ್ಗೆ ನಂಬಿಕೆ ಇಲ್ಲವೆಂದಾದರೆ ಯುವಕ ಯುವತಿಯರು ಒಟ್ಟಿಗೆ ಕಲಿಯುವ ಸಹ ಶಿಕ್ಷಣ ಪದ್ಧತಿಯ ಮೇಲೆ ನಂಬಿಕೆ ಇಲ್ಲವೆಂದು ಆಗುತ್ತದೆ. ಮುಂದೆ ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವಾಗಲೂ ನಮಗೆ ಬೇಕಾದಂತೆ ಬಟ್ಟೆ ಧರಿಸಿದರೆ ಸಾರ್ವಜನಿಕ ಸೇವೆಗಳನ್ನು ಜನರು ಪಡೆಯುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಹಿಜಾಬ್ ಪರ ವಾದಿಸುತ್ತಿರುವ ವಿದ್ಯಾರ್ಥಿನಿಯರ ದನಿಯ ಹಿಂದಿನ ಗಂಟಲು ಮಾತ್ರ ಮುಸ್ಲಿಂ ಸಮುದಾಯದ ಪುರುಷರದ್ದು ಎಂಬುದು ನೂರಕ್ಕೆ ನೂರರಷ್ಟು ಖಚಿತ.

ಹಿಜಾಬ್‌ಗೆ ಪ್ರತಿರೋದವಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದ್ದು ಖಂಡಿತ ಸಮರ್ಥನೀಯವಲ್ಲ. ಆದರೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡುವ ಗುಣ ಇತ್ತೀಚಿಗಷ್ಟೇ ಹಿಂದೂ ಸಮಾಜದಲ್ಲಿ ಜಾಗೃತವಾಗಿದೆ. ವಿವಾದ ತಣ್ಣಗಾದಾಗ ಸಹಜವಾಗಿ ಕೇಸರಿ ಶಾಲುಗಳು ಮರೆಯಾಗುತ್ತವೆ. ಕೋರ್ಟ್‌ ಸಹ ಹಿಜಾಬ್‌ ಹಕ್ಕಿಗೆ ಅನುಮತಿ ನೀಡಬಹುದು. ಆದರೆ ಅತ್ಯಂತ ಸಹಜವಾಗಿ ಹಿಜಾಬ್-ಬುರ್ಖಾಗಳಿಂದ ಯಾವಾಗ ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ಸಿಗುತ್ತದೆ?

ಇನ್ನೊಂದು ವಾದವಿದೆ, ಮುಸ್ಲಿಂ ಮಹಿಳೆಯರು “ಹಿಜಾಬ್ ಧರಿಸಿಯಾದರೂ ಶಿಕ್ಷಣ ಪಡೆಯಲಿ, ಇಲ್ಲದಿದ್ದರೆ  ಅವರು ಶಿಕ್ಷಣದಿಂದ ಸಂಪೂರ್ಣ ವಂಚಿತರಾಗುತ್ತಾರೆ” ಎಂದು. ಇದು ಒಂದು ಲೆಕ್ಕದಲ್ಲಿ ಹೌದು. ಆದರೆ ಹಿಂದೂ ಸಮಾಜದಂತೆ ಕಾಲಕ್ರಮೇಣವಾದರೂ ಮುಸ್ಲಿಂ ಸಮುದಾಯ ಬದಲಾವಣೆಗೆ ತೆರೆದುಕೊಳ್ಳುವುದೇ ಎಂಬುದು ಯಕ್ಷಪ್ರಶ್ನೆ. ಮುಸ್ಲಿಂ ಸಮುದಾಯದ ಒಳಗಿನ ಎಷ್ಟೋ ಆಚರಣೆಗಳು ಸಾರ್ವಜನಿಕರಿಗೆ ಅಷ್ಟು ತಿಳಿವಳಿಕೆಯಿಲ್ಲ. ಮುಸ್ಲಿಂ ಸಮುದಾಯದಲ್ಲಿ ಸಾಗರದಷ್ಟು ಬದಲಾವಣೆ ಅನಿವಾರ್ಯವಿದ್ದರೂ ಕೇವಲ ಫೇಸ್‌ಬುಕ್ ಕಾಮೆಂಟುಗಳಲ್ಲಿ ಬದಲಾದ ಹಿಂದೂ ಸಮಾಜವನ್ನು ಹೀಗಳೆಯುವುದರಲ್ಲಿ ಹಿಜಾಬ್‌ ಪರ ವಾದಿಗಳು ನಿರತರಾಗಿರುವುದು ವಿಚಿತ್ರ. ಬ್ರಾಹ್ಮಣ ಸಮುದಾಯ ಸತಿ ಸಹಗಮನ, ಕೇಶಮುಂಡನದಂತಹ ಕೆಟ್ಟ ಆಚರಣೆಗಳನ್ನು ಬಿಟ್ಟಂತೆ ಮುಸ್ಲಿಂ ಸಮುದಾಯ ಹಿಜಾಬ್, ಬುರ್ಕಾ, ತ್ರಿವಳಿ ತಲಾಕ್‌ಗಳನ್ನು ಬಿಡುವುದು ಯಾವಾಗ?

ಅಭಿಪ್ರಾಯ: ಗುರು

ವಿಶೇಷ ಸೂಚನೆ: ಈ ಅಭಿಪ್ರಾಯವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ

ಇದನ್ನೂ ಓದಿ: Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

(Hijab Row Opinion when Muslim Community give freedom to muslim women)

Comments are closed.