JDS: 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಎಲ್ಲವೂ ಸುಲಭವಿಲ್ಲ: ಆಮ್ ಆದ್ಮಿ, ಎನ್‌ಸಿಪಿ ಸ್ಪರ್ಧೆಗೆ ಇಳಿಯಲಿದೆ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಅವಧಿ ಮೊದಲೇ ನಡೆಯುತ್ತದೋ ಇಲ್ಲವೋ. ಆದರೆ, ಅದರ ಕಾವು ಮಾತ್ರ ಅವಧಿಗೆ ಮೊದಲು ಅಂದರೆ ಈಗಲೇ ಶುರುವಾಗಿದೆ. ಕಾಂಗ್ರೆಸ್ ಈಗಾಗಲೇ ಮೇಕೆದಾಟು ಯೋಜನೆಯ ಮೂಲಕ ಚುನಾವಣೆ ಸಿದ್ಧತೆಗೆ ಕುಂಬಳಕಾಯಿ ಹೊಡೆದರೆ, ಮೊನ್ನೆ ಜೆಡಿಎಸ್ (JDS) ಜನತಾ ಜಲಧಾರೆ ಮೂಲಕ ಚುನಾವಣೆ ಗುರಿ ಆರಂಭಿಸಿದೆ.

ಕಾಂಗ್ರೆಸ್ ಗೆ ಅಂದುಕೊಂಡಂತೆ ಮೇಕೆದಾಟು ಪ್ರತಿಭಟನೆ ಆಗಲೀ, ಹಿಜಾಬ್ ಆಗಲೀ ಅಸ್ತ್ರವಾಗಲಿಲ್ಲ. ಹಿಜಾಬ್ ಕಾಂಗ್ರೆಸ್ ಪಾಲಿಗೆ ಕಂಟಕವಾಯಿತು. ಬಿಜೆಪಿ ಬಿಟ್ಟ ಬಾಣಕ್ಕೆ ವಿಲವಿಲ ಅಂದಿತು. ಹಿಜಾಬ್ ಲಾಭ ಮಾಡಿಕೊಂಡಿದ್ದು ಮಾತ್ರ ಸಿಪಿಐ. ಈಗ ಈಶ್ವರಪ್ಪನವರ ಭ್ರಷ್ಟಾಚಾರ ಪ್ರಕರಣ ಇದೆಯಲ್ಲ ಅದು ಕಾಂಗ್ರೆಸ್ ನ ಬಹುದೊಡ್ಡ ಅಸ್ತ್ರದಂತೆ ಕಾಣುತ್ತಿದೆ; ಅದೂ ಸರಿಯಾಗಿ ಬಳಸಿಕೊಂಡರೆ.

ರಾಹುಲ್ ಗಾಂಧಿ ಅವರ ಇತ್ತೀಚೆಗಿನ ಒಂದು ದಿನದ ಕರ್ನಾಟಕ ಪ್ರವಾಸದಲ್ಲಿ ಕಾಂಗ್ರೆಸ್ ನಾಯಕರಿಗೆ ಹೋರಾಟದ ದಿಕ್ಕು ತೋರಿಸಿ ಹೋಗಿದ್ದರು. ಅದು ಏನೆಂದರೆ, ‘ನಿಮ್ಮ ಹೋರಾಟದ ವಿಷಯ ಧರ್ಮ, ಜಾತಿ ಅಲ್ಲ. ಬಿಜೆಪಿಯ ಲೋಪ. ಅನಭಿವೃದ್ಧಿಯ ವಿಚಾರಗಳನ್ನು ಕೈಗೆತ್ತಿಕೊಳ್ಳಿ. ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ,ಸಿದ್ದರಾಮಯ್ಯ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಅಂತ ಟೀಸಿದ್ದರಲ್ಲ. ಅದೇ ರೀತಿ, ನಾವು ಬಿಜೆಪಿ 40 ಪರ್ಸೆಂಟ್ ಸರ್ಕಾರ ಅನ್ನೋ ರೀತಿ ದಾಖಲೆ ಹೊಂದಿಸಬೇಕು. ಹೋರಾಟ ಮಾಡಬೇಕು. ಹಿಜಾಬ್, ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ ಇವೆಲ್ಲ ಬಿಜೆಪಿ ಕಾಂಗ್ರೆಸ್ ಅನ್ನು ದಾರಿತಪ್ಪಿಸಲು ಮಾಡುತ್ತಿರುವ ತಂತ್ರ’ ಅಂತ ದೆಹಲಿಯಲ್ಲಿದ್ದುಕೊಂಡೇ ರಾಹುಲ್ ಸರಿಯಾದ ಪಾಯಿಂಟ್ ಗುರುತು ಮಾಡಿಕೊಂಡು ಬಂದಿದ್ದರು.

ರಾಹುಲ್ ಗಾಂಧಿ ಬಂದ ನಂತರ ಕಾಂಗ್ರೆಸ್ ನಾಯಕರು ಹೋರಾಟ ಮನೋಭಾವ ಕೂಡ ಬದಲಾಗಿದೆ. ಹಿಜಾಬ್ ತಂಟೆಗೆ ಕಾಂಗ್ರೆಸ್ ತಲೆಹಾಕುತ್ತಿಲ್ಲ. ಪೆಟ್ರೋಲ್, ಡೀಸಲ್ ಏರಿಕೆ ಪ್ರತಿಭಟನೆ ಹೇಳಿಕೊಳ್ಳುವ ಪರಿಣಾಮ ಬೀರಿಲ್ಲ. ಈಗ ಈಶ್ವರಪ್ಪನವರ ಪರ್ಸೆಂಟೇಜ್ ಪ್ರಕರಣ ಇಟ್ಟುಕೊಂಡು, ಭ್ರಷ್ಚಾಚಾರದ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ. ಬಿಜೆಪಿ ಇದನ್ನು ಬಡಿಯಲು ರಾಜ್ಯದ ಕೋಮುಗಲಭೆಗಳ ಬೆನ್ನಿಗೆ ಕಾಂಗ್ರೆಸ್ ಇದೆ ಅನ್ನೋ ರೀತಿ ಬಿಂಬಿಸಲು ಪ್ರಯತ್ನಿಸುತ್ತಿದೆ.

ಹಾಗೆ ನೋಡಿದರೆ, ಪಾಪ ಜೆಡಿಎಸ್ ಪಾಲಿಗೆ ಬಿಜೆಪಿಯನ್ನು ಟೀಕಿಸುವ ಅವಕಾಶ ದಕ್ಕಿದೆಯೇ ಹೊರತು, ಹೋರಾಟ ಮಾಡುವುದಕ್ಕೆ ಬಿಜೆಪಿಯ ಯಾವ ಲೋಪವೂ ದೊರೆತಿಲ್ಲ. ಹಿಜಾಬ್ ವಿವಾದದಲ್ಲಿ ಕಾಂಗ್ರೆಸ್ ಗಿಂತ ಜೆಡಿಎಸ್ ಬಹಳ ನಾಜೂಕಾಗಿ ನಡೆದುಕೊಂಡು ಪ್ರಶಂಸೆಗೆ ಪಾತ್ರವಾಗಿತ್ತು. ಏನಾದರೂ, ಜೆಡಿಎಸ್ ಯಾವತ್ತೂ ಜೋಕರ್ ಪಾತ್ರವನ್ನು ಇಷ್ಟಪಡುತ್ತದೆ. ಬಿಜೆಪಿ, ಕಾಂಗ್ರೆಸ್ ನಂತೆ ಪೂರ್ಣ ಪ್ರಮಾಣದಲ್ಲಿ ನೂರಾರು ಸೀಟು ಗೆದ್ದರು, ಸದಸ್ಯರನ್ನು ನಿಯಂತ್ರಿಸುವುದು, ‘ಕೌಟುಂಬಿಕ ತೀರ್ಮಾನ’ಗಳನ್ನು ತೆಗೆದುಕೊಳ್ಳುವುದು ಕಷ್ಟ ಅನ್ನೋದು ತಿಳಿದಿದೆ. ಹೀಗಾಗಿ ,ಜೆಡಿಎಸ್ ಗುರಿ 30-40 ಸೀಟುಗಳು ಮಾತ್ರ. ಅದರ ಮೇಲೆ ಕಾಲಿಟ್ಟುಕೊಂಡೇ ಓಡಾಡುತ್ತಿರುತ್ತದೆ.

ಈ ಸಲ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮತ ಸೆಳೆಯಲೋಸುಗ ಇಬ್ರಾಹಿಂ ಅವರನ್ನು ಸೆಳೆದುಕೊಂಡು, ರಾಜ್ಯಾಧ್ಯಕ್ಷ ಸ್ಥಾನ ನೀಡಿದೆ. ಜೆಡಿಎಸ್ ವರಿಷ್ಠರು ಎಣಿಸಿದಂತೆ ಇಬ್ರಾಹಿಂ ಮೂಲಕ ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗದ ಮುಸ್ಲಿಂ ಸಮುದಾಯವನ್ನು ಸೆಳೆಯಲಿದ್ದಾರೆ ಅನ್ನೋದು ಲೆಕ್ಕಾಚಾರ. ಆದರೆ, ಬಿಜೆಪಿ ಹಿಂದುತ್ವ ಪಠಣೆಯಿಂದ ಮುಸ್ಲೀಮರಿಗೆ ಕಸಿವಿಸಿಯಾಗಿರುವುದು ಸುಳ್ಳಲ್ಲ. ಅದರಲ್ಲೂ ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರ ನಿಷೇಧ ಎಲ್ಲವೂ ಕಾಂಗ್ರೆಸ್ ಪಾಲಿಗೆ ವರವಲ್ಲದೇ ಇದ್ದರೂ, ಮುಸ್ಲಿಂ ಸಮುದಾಯ ಅನಿವಾರ್ಯವಾಗಿ ಸಧ್ಯ ಕಾಂಗ್ರೆಸ್ ಕಡೆ ತಿರುಗುವಂತೆ ಮಾಡಿರುವುದಂತು ಸತ್ಯ. ಇದರಿಂದ ಜೆಡಿಎಸ್ ಲಾಭವೇನು ಕಾಣುತ್ತಿಲ್ಲ.

ಇದರ ವಾಸನೆ ಬಡಿದದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರ ಮೂಗಿಗೆ. ಅವರು ಮೊನ್ನೆಯ ಕರ್ನಾಟಕದ ಪ್ರವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಿವಿಯಲ್ಲಿ ಹೇಳಿದ್ದು ಇದನ್ನೇ-‘ನೀವು ಧರ್ಮ, ಜಾತಿ ಬಿಟ್ಟು ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕು. ಹಿಜಾಬ್, ಮುಸ್ಲಿಂ ಗಲಾಟೆಗಳನ್ನು ಸಮರ್ಥಿಸುವುದನ್ನು ತಕ್ಷಣ ನಿಲ್ಲಿಸಿ. ಚುನಾವಣೆಗೆ ಇದರಿಂದ ಲಾಭವಿಲ್ಲ’ ಎಂದು.
ಹುಬ್ಬಳ್ಳಿಯ ಗಲಾಟೆ ಬಿಜೆಪಿ ಪಾಲಿಗೆ ಕಸಿವಿಸಿಯಾದರೂ ಕಾಂಗ್ರೆಸ್ ಗಾಗಲೀ, ಜೆಡಿಎಸ್ ಗಾಗಲೀ ಲಾಭವಾಗುವಂತೆ ಕಾಣುತ್ತಿಲ್ಲ. ಈಗ ಜೆಡಿಎಸ್ ಬತ್ತಳಿಕೆಯಲ್ಲಿರುವುದು ಅಸ್ತ್ರ ಒಂದು ಜನತಾ ಜಲಧಾರೆ, ಎರಡು ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕರಿಗೆ ಹೇಳಿದ್ದ, ಬಿಜೆಪಿ ಅಭಿವೃದ್ಧಿ ಮಾಡದ ವಿಚಾರಗಳನ್ನು ಎಳೆದು ತರುವುದು. ಇವಿಷ್ಟು ತಂತ್ರದ ವಿಚಾರವಾದರೂ, ಮತಗಳ ಸೆಳೆಯುವ ವಿಚಾರದಲ್ಲಿ ಬಿಜೆಪಿಗೆ ಹಿಂದುತ್ವದ ಪ್ರಬಲ ಅಸ್ತ್ರವಿದೆ. ಜಿಡಿಎಸ್ ಗೆ ದೇವೇಗೌಡರು, ಇದು ಅವರ ಕಡೇ ಚುನಾವಣೆ ಅನ್ನೋದು ಬಿಟ್ಟರೆ ಬೇರೇನು ಇಲ್ಲ.

ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಲೋಪಗಳನ್ನು ಜನರ ಕಣ್ಣಮುಂದೆ ಹಿಡಿಯಲು ಸಾಧ್ಯವಾಗದೇ ಇದ್ದರೆ ಅಹಿಂದ ಮತ್ತು ಅಲ್ಪಸಂಖ್ಯಾತ ಎನ್ನುವ ಹಳೇ ಬಾಣಗಳನ್ನೇ ಸಿದ್ಧ ಮಾಡಿಕೊಳ್ಳಬೇಕಾದ ಅನಿವಾರ್ಯವಿದೆ. ಇತ್ತ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಗೆದ್ದಿರುವುದು ಆ ಪಕ್ಷಕ್ಕೆ ಹೊಸ ಹುರುಪು ಮೂಡಿಸಿದೆ. ಹೀಗಾಗಿ, ಕರ್ನಾಟಕದಲ್ಲಿ ಈಗಾಗಲೇ ಭ್ರಷ್ಟಾಚಾರ, ಬೆಲೆ ಏರಿಕೆಯ ವಿರುದ್ಧ ಬೇಸತ್ತ ಜನರ ಮತಗಳು ಆಮ್ ಆದ್ಮಿ ತೆಕ್ಕೆಗೆ ಬೀಳುವ ಸಾಧ್ಯತೆಗಳಿವೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ 28 ವಾರ್ಡ್ ಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಯೋಜನೆ ಸಿದ್ಧವಾಗಿದೆ.
ಇದರ ಜೊತೆಗೆ ಶರದ್ ಪವಾರ್ ಅವರ ಎನ್ ಸಿಪಿ ಪಕ್ಷ, ಕರ್ನಾಟಕದ ಮರಾಠಿ ಸಮುದಾಯವನ್ನು ಸೆಳೆಯುವ ತಂತ್ರ ಬೇರೆ ಮಾಡುತ್ತಿದೆ. ಇದನ್ನು ತಿಳಿದೋ ಏನೋ ಮತ ವಿಕೇಂದ್ರಿಕರಣವಾಗಬಾರದು ಎಂದು ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್, ಬೆಂಗಳೂರಿಗೆ ಬಂದಿದ್ದ ಶರದ್ ಪವಾರ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿ ಚುನಾವಣೆ ಪೂರ್ವ ಹೊಂದಾಣಿಕೆಗೆ ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ, ಜೆಡಿಎಸ್ ಗೆ ಮುಸ್ಲಿಮರ, ಹಿಂದುಳಿದ ವರ್ಗದವರ, ಮರಾಠಿ ಮತಗಳನ್ನು ತೆಕ್ಕೆಗೆ ಹಾಕಿಕೊಳ್ಳುವುದು ಮೊದಲಿನಷ್ಟು ಸುಲಭವಿಲ್ಲ. ಹಾಗಂತ ಒಕ್ಕಲಿಗರು ಪಕ್ಷದ ಜೊತೆಗಿದ್ದಾರೆ ಎಂದು ಗಟ್ಟಿದನಿಯಲ್ಲಿ ಹೇಳುವುದೂ ಕಷ್ಟ ಸಾಧ್ಯ. ಏಕೆಂದರೆ, ಕಾಂಗ್ರೆಸ್ ನಲ್ಲಿ ಡಿಕೆಶಿ, ಬಿಜೆಪಿಯಲ್ಲಿ ಆರ್. ಅಶೋಕ್ ರಂಥ ಒಕ್ಕಲಿಗರನ್ನು ಸೆಳೆಯುವ ಪ್ರಭಾವಿ ನಾಯಕರಿದ್ದಾರೆ.

ಒಂದು ಕಡೆ ಜಾತಿಯಿಂದಲೂ, ಮತ್ತೊಂದು ಕಡೆ ಆಮ್ ಆದ್ಮಿಯಂಥ ಪಕ್ಷ, ಪಕ್ಷೇತರ ಅಭ್ಯರ್ಥಿಗಳಿಂದಲೂ ಜೆಡಿಎಸ್ ನ ಮತ ವಿಕೇಂದ್ರೀಕರಣ ಆಗಬಹುದು. ಎಲ್ಲದರ ಜೊತೆಗೆ ಆಂತರಿಕ ಬೇಗುದಿ ಎಲ್ಲ ಪಕ್ಷಕ್ಕಿಂತ ಸ್ವಲ್ಪ ಹೆಚ್ಚೇ ಜೆಡಿಎಸ್ ನಲ್ಲಿ ಇದೆ. ಆದರೆ ಚುನಾವಣೆ ಸಂದರ್ಭದಲ್ಲಿ ಇದು ಸ್ಫೋಟಿಸಲೂ ಬಹುದು ಎನ್ನುವ ಲೆಕ್ಕಾಚಾರವೂ ಇದೆ.

ಹೀಗಾಗಿ, ಹಿಂದೆಂದಿಗಿಂತಲೂ ಜೆಡಿಎಸ್ ಎಚ್ಚರದ ಹೆಜ್ಜೆಗಳನ್ನು ಇಡಲೇಬೇಕಾದ ಅನಿವಾರ್ಯ ಎದುರಾಗಿದೆ.

ಇದನ್ನೂ ಓದಿ : Siddaramaiah : ಸತ್ತವರ ಪರ ಹೋರಾಟ ಮಾಡಿದರೆ ಸಣ್ಣ ವಿಚಾರವೇ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಇದನ್ನೂ ಓದಿ : DK Shivakumar : ನನ್ನ ಹೆಸರು ಕೇಳಿದರೆ ಕೆಲವರಿಗೆ ಶಕ್ತಿ ಬರುತ್ತೆ : ಡಿ.ಕೆ ಶಿವಕುಮಾರ್ ವ್ಯಂಗ್ಯ

(JDS 2023 Election not so easy AAP and NCP will take part)

Comments are closed.