ರಾಜಕೀಯ ರಂಗಕ್ಕೆ ಶಿಕ್ಷಣದ ಸ್ಪರ್ಶ..!? ರಾಜಕೀಯ ಕಾಲೇಜು ಸ್ಥಾಪನೆಗೆ ಚಿಂತನೆ : ಬಸವರಾಜ ಹೊರಟ್ಟಿ
ರಾಜಕೀಯ ರಂಗ ಎನ್ನುವುದು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವ ಕ್ಷೇತ್ರವಾಗಿದ್ದರೂ ಸಹ, ಈ ರಂಗಕ್ಕೆ ಎಂಟ್ರಿ ನೀಡಲು ಯಾವುದೇ ವಿದ್ಯಾರ್ಹತೆ ಮಾನದಂಡವಲ್ಲ. ಹೀಗಾಗಿ ಅನಕ್ಷರಸ್ಥರೂ ಅಧಿಕಾರದ ಚುಕ್ಕಾಣಿ ಹಿಡಿದ ಇತಿಹಾಸವಿದೆ. ಸಚಿವ ಖಾತೆಯನ್ನು ನಿರ್ವಹಿಸುತ್ತಿರುವ ಬಹುತೇಕರಿಗೆ ತಮ್ಮ ಖಾತೆಗೆ ಸಂಬಂಧಿಸಿದ ಶಿಕ್ಷಣ ಜ್ಞಾನ ಕೂಡ ಇಲ್ಲದನ್ನು ನಾವು ಅನೇಕ ಬಾರಿ ಗಮನಿಸಿದ್ದೇವೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ನೂತನ ಮಾಸ್ಟರ್ ಪ್ಲಾನ್ ಒಂದನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೀಡಿದ್ದಾರೆ.
ಹೌದು..! ರಾಜಕೀಯ ರಂಗಕ್ಕೂ ಶಿಕ್ಷಣದ ಸ್ಪರ್ಶ ನೀಡುವ ಉದ್ದೇಶದೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ರಾಜಕೀಯ ಕಾಲೇಜು ಸ್ಥಾಪನೆಯ ಚಿಂತನೆ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಬಿ. ಬಸವಲಿಂಗಪ್ಪ ಅವರ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಮತ್ತು ಬಿ. ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಈ ಮಹತ್ವದ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಾಲದ ಸುಳಿಯಲ್ಲಿ ಅನ್ನದಾತ: ಸಹಕಾರಿ ಬ್ಯಾಂಕ್‌ಗಳಲ್ಲಿ ಶೂನ್ಯ ಬಡ್ಡಿ ಸಾಲ ಈಗ ಬರಿ ‘ಮರೀಚಿಕೆʼ
ರಾಜಕೀಯಕ್ಕೆ ಬರುವ ಹೊಸಬರಿಗೆ, ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ರಾಜಕೀಯ ಕಾಲೇಜು ಸ್ಥಾಪನೆಗೆ ಚಿಂತನೆ ನಡೆಸಿದ್ದೇವೆ. ಜನಪ್ರತಿನಿಧಿಗಳು ಯಾವ ರೀತಿಯಲ್ಲಿ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ? ಜನರ ಕಷ್ಟಗಳಿಗೆ ಮಿಡಿಯಬೇಕು ? ತನ್ನ ಜವಾಬ್ದಾರಿಗಳನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎಂಬಿತ್ಯಾದಿ ವಿಷಯಗಳನ್ನು ತಿಳಿಸಲು ಇಂತಹ ಕಾಲೇಜು ನೆರವಾಗಲಿದೆ. ಇದರಿಂದ ಸಮಾಜಕ್ಕೆ ಉತ್ತಮ ಜನಪ್ರತಿನಿಧಿಯನ್ನು ನೀಡಲು ಸಾಧ್ಯವಿದೆ ಎಂದು ಹೊರಟ್ಟಿ ಹೇಳಿದ್ದಾರೆ.
ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ತ್ವಗಳ ಅಡಿಯಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮೇಧಾವಿ. ಆದರೆ ಇಂದಿನ ಯುವ ಪೀಳಿಗೆಗೆ ಬಸವಲಿಂಗಪ್ಪ ಎಂದರೆ ಯಾರು ಎಂದೇ ತಿಳಿದಿಲ್ಲ. ಹೀಗಾಗಿ ಬಸವಲಿಂಗಪ್ಪ ಅವರ ಮಾದರಿಯಲ್ಲಿ ಜನಪ್ರತಿನಿಧಿಗಳನ್ನು ಸಿದ್ಧಪಡಿಸಲು, ರಾಜ್ಯ ಕಂಡ ಮೇಧಾವಿ ನಾಯಕರ ಬಗ್ಗೆ ಮಾಹಿತಿ ನೀಡಲು ರಾಜಕೀಯ ಕಾಲೇಜು ಆರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೊರಟ್ಟಿ ಹೇಳಿದರು.



