Anti Conversion Bill 2021: ತೀವ್ರ ಪರ ವಿರೋಧದ ನಡುವೆಯೇ ಮತಾಂತರ ನಿಷೇಧ ವಿಧೇಯಕ ಅಂಗೀಕಾರ; ಸದನದಲ್ಲಿ ಇಂದು ಆದದ್ದೇನು?

ಬೆಳಗಾವಿ: ತೀವ್ರ ಪ್ರಮಾಣದಲ್ಲಿ ಚರ್ಚೆ ಮತ್ತು ವಾಗ್ವಾದಕ್ಕೆ ಕಾರಣವಾಗಿದ್ದ ಮತಾಂತರ ನಿಷೇಧ ವಿಧೇಯಕ (Anti Conversion Bill 2021) ವಿಧಾನಸಭೆಯಲ್ಲಿ (Assembly Session) ಅಂಗೀಕಾರ ಪಡೆದುಕೊಂಡಿದೆ. ವಿಪಕ್ಷಗಳ ವಿರೋಧದ ನಡುವೆಯೇ ಮತಾಂತರ ನಿಷೇಧ ಮಸೂದೆಗೆ ಇಂದು ಕರ್ನಾಟಕದ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಅಂಗೀಕಾರ ದೊರೆತಿದೆ. ಕರ್ನಾಟಕ ಸರ್ಕಾರವು ವಿಧಾನಸಭೆಯಲ್ಲಿ ಮಂಡಿಸಿದ್ದ ಮತಾಂತರ ನಿಷೇಧ ಕಾಯ್ದೆಗೆ ಗುರುವಾರ (ಡಿ.23) ಸದನದ ಅನುಮೋದನೆ ದೊರೆತಂತಾಗಿದೆ. ಆದರೆ ಅನುಮೋದನೆ ದೊರೆಯುವ ಪ್ರಕ್ರಿಯೆಯಲ್ಲಿ ಪ್ರತಿಪಕ್ಷಗಳ ತೀವ್ರ ಆಕ್ಷೇಪ, ಗದ್ದಲ ಏರ್ಪಟ್ಟಿತ್ತು. ಈ ನಡುವೆಯೇ ವಿಧೇಯಕವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Speaker Vishweshwar Hegde Kageri) ಧ್ವನಿಮತಕ್ಕೆ ಹಾಕಿದಾಗ ಮಸೂದೆಗೆ ಅನುಮೋದನೆ ದೊರೆಯಿತು.

ಮಸೂದೆ ಜಾರಿಯಾಗುವ ಮುನ್ನ ಬಹುತೇಕ ದಿನವಿಡೀ ಬಿಜೆಪಿ, ಕಾಂಗ್ರೆಸ ಮತ್ತು ಜೆಡಿಎಸ್ ನಡುವೆ ವಾಗ್ವಾದ ನಡೆಯಿತು. ಸಿದ್ದರಾಮಯ್ಯನವರ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೇ ಈ ಕಾಯ್ದೆಯನ್ನು ರೂಪಿಸಲಾಗಿತ್ತು ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಆದರೆ ಅದಕ್ಕೂ ಮುನ್ನವೇ ಆರ್‌ಎಸ್‌ಎಸ್‌ ಮೂಲದ ಕೆಲವರು ಯಡಿಯೂರಪ್ಪ ಸರ್ಕಾರದಲ್ಲಿ ಈಕುರಿತು ಮನವಿ ಮಾಡಿದ್ದರು ಎಂದು ವಿಪಕ್ಷನಾಯಕ ಸಿದ್ದರಾಮಯ ಟೀಕಿಸಿದರು.

ಸುವರ್ಣಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು:

5/11/2009 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆರ್.ಎಸ್.ಎಸ್ ಮೂಲದ ಚಿದಾನಂದ ಮೂರ್ತಿ, ನರಹರಿ, ಬಿ.ಎನ್ ಮೂರ್ತಿ, ಜಯದೇವ, ಆರ್.ಲೀಲಾ, ಮುತ್ತೂರು ಕೃಷ್ಣಮೂರ್ತಿ ಎಂಬುವವರು ಕಾನೂನು ಆಯೋಗಕ್ಕೆ ಮತಾಂತರ ನಿಷೇಧ ಕಾಯ್ದೆ ರೂಪಿಸಿ, ಜಾರಿಗೊಳಿಸುವಂತೆ ಮನವಿ ಮಾಡಿದ್ದರು. ಕಾನೂನು ಆಯೋಗದವರು 21/9/2013 ರಲ್ಲಿ ಕಾನೂನು ಇಲಾಖೆಗೆ ಕರಡು ನೀಡುತ್ತಾರೆ. ನಂತರ ಈ ಕರಡು ಕಾನೂನು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಚರ್ಚೆಯಾಗಿ ನಮ್ಮ ಕೈಸೇರಿದ್ದು 2015 ರಲ್ಲಿ.ಇದನ್ನು ನಾವು ಸಚಿವ ಸಂಪುಟದ ಮುಂದಿಟ್ಟು ಚರ್ಚೆ ಮಾಡಿಲ್ಲ, ಅನುಮೋದನೆಯನ್ನೂ ನೀಡಿಲ್ಲ. ಮುಖ್ಯಮಂತ್ರಿ ಈ ರೀತಿ ಸಂಪುಟ ಚರ್ಚೆಗೆ ತನ್ನಿ ಎಂದ ಅನೇಕ ವಿಷಯಗಳು, ಕಡತಗಳು ತಿರಸ್ಕರಿಸಲ್ಪಟ್ಟಿವೆ, ಕೆಲವು ಮುಂದೂಡಲ್ಪಟ್ಟಿವೆ, ಇನ್ನು ಕೆಲವು ಸಂಪುಟ ಉಪ ಸಮಿತಿಗೆ ಹೋಗಿವೆ. ಈ ಎಲ್ಲಾ ಕಡೆ ಸಚಿವರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆ ಎಂದು ಹಾಲಿ ವಿಪಕ್ಷ ನಾಯಕ ತಿಳಿಸಿದರು.

ಈ ಹಿಂದಿನ ಕರಡು ಪ್ರತಿಗೂ, ಈಗಿನ ಕರಡು ಮಸೂದೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಮದುವೆ ಎಂಬ ಪದ ಹೊಸದಾಗಿ ಸೇರಿಸಲಾಗಿದೆ, ಸಾಕ್ಷಾಧಾರ ಕೊರತೆ ಎದುರಾದಾಗ ದೂರುದಾರರಿಗೆ ಅನುಕೂಲವಾಗುವಂತೆ ನಿಯಮವಿದೆ, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಅಪ್ರಾಪ್ತರಿಗೆ, ಬುದ್ದಿಭ್ರಮಣೆಯಾದವರನ್ನು ಮತಾಂತರ ಮಾಡಿದಾಗ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಆದರೆ ಇವುಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿನ ಎದುರು ಸರ್ವರೂ ಸಮಾನರು. ನಮ್ಮ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹೆಚ್.ಆಂಜನೇಯ ಅವರು ಕರಡು ಪ್ರತಿಯನ್ನು ನೋಡಿ, ಇದನ್ನು ಸಂಪುಟದ ಮುಂದೆ ತರುವ ಅಗತ್ಯವಿಲ್ಲ ಎಂದು ಬರೆದು, ಅದನ್ನು ಬದಿಗೆ ಹಾಕಿದ್ದರು. ನಮಗೆ ಇಂಥದ್ದೊಂದು ಕಾಯ್ದೆ ತರುವ ಬಗ್ಗೆ ಕಾಳಜಿ ಇದ್ದಿದ್ದರೆ 2015 ರ ನವೆಂಬರ್ ನಲ್ಲಿ ಸಹಿ ಹಾಕಿ ಸಂಪುಟ ಚರ್ಚೆಗೆ ಕಳುಹಿಸಿದ್ದ ಕಡತ, ತಿರಸ್ಕಾರಗೊಂಡ ನಂತರ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದರ ಕಡೆ ಗಮನ ನೀಡಿಲ್ಲ. ನಮಗೆ ಅದರ ಅಗತ್ಯವೂ ಇರಲಿಲ್ಲ. ಮತಾಂತರ ನಿಷೇಧ ಕಾಯ್ದೆ ಅತ್ಯಂತ ಅಮಾನವೀಯ, ಸಂವಿಧಾನ ಬಾಹಿರ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದುದ್ದು. ಇದು ಆರ್.ಎಸ್.ಎಸ್. ನ ಕೈವಾಡ. ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕ ಎಲ್ಲಾ ರಾಜ್ಯಗಳ ಕಾನೂನು ಒಂದೇ ರೀತಿಯ ಪದಬಳಕೆಯಿಂದ ಕೂಡಿದೆ. ಒಬ್ಬರೇ ಮೂರರ ಕರಡು ತಯಾರು ಮಾಡಿದಂತಿದೆ ಎಂದು ಸಿಎಲ್‌ಪಿ ನಾಯಕರೂ ಆಗಿರುವ ಸಿದ್ದರಾಮಯ್ಯ ಆಕ್ಷೇಪಿಸಿದರು.

ನಾವು ಸಂವಿಧಾನರೀತ್ಯ ಕಾಯ್ದೆಯನ್ನು ವಿರೋಧ ಮಾಡಿದ್ದೇವೆ. ಯಾರನ್ನೋ ಖುಷಿಪಡಿಸೋಕಲ್ಲ. ಯಾವುದೋ ಒಂದು ಧರ್ಮವನ್ನು ಗುರಿಯಾಗಿರಿಸಿ ಕಾನೂನು ರೂಪಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದಾವೆ, ಇವುಗಳಿಂದ ಜನರನ್ನು ವಿಮುಖಗೊಳಿಸಲು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಹೊರಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮನವಿ ಮಾಡಿದ್ದರಿಂದ ಕಾನೂನು ಆಯೋಗದವರು ಕರಡು ರಚನೆ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದು ಆರ್.ಎಸ್.ಎಸ್ ಮತ್ತು ಯಡಿಯೂರಪ್ಪ ಅವರ ಸರ್ಕಾರದ ಕೂಸು. ನಮ್ಮದಲ್ಲ ಎಂದು ಅವರು ಸಮರ್ಥಿಸಿಕೊಂಡರು.

ಇದನ್ನೂ ಓದಿ:boAt Iris smart watch: ಬೋಟ್ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ: ಅಗ್ಗದ ಬೆಲೆಯಲ್ಲಿ ಸಿಗಲಿದೆ ಬೋಟ್ ಐರಿಸ್, ಎಲ್ಲಿ ಖರೀದಿಸಬಹುದು?

(Karnataka Anti Conversion Bill 2021 Approved in Karnataka Assembly Session)

Comments are closed.