BJP MLA ಹತ್ಯೆಗೆ ಸ್ಕೆಚ್‌ ಪ್ರಕರಣ : ಸ್ಪೋಟಕ ಸತ್ಯ ಬಿಚ್ಚಿಟ್ಟ ಶಾಸಕ ಎಸ್.ಆರ್.ವಿಶ್ವನಾಥ್‌

ಬೆಂಗಳೂರು : ಬಿಜೆಪಿ ಯಲಹಂಕ ಶಾಸಕ (BJP MLA) ಎಸ್.ಆರ್.ವಿಶ್ವನಾಥ್‌ ( MLA SR Vishwanath ) ಹತ್ಯೆಗೆ ಕಾಂಗ್ರೆಸ್‌ ಮುಖಂಡ ಸ್ಕೆಚ್‌ ಹಾಕಿರುವ ವಿಡಿಯೋ ಬಯಲಾದ ಬೆನ್ನಲ್ಲೇ ಶಾಸಕ ವಿಶ್ವನಾಥ್‌ ರಾಜಾನುಗುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರ ತರಲಿ ಎಂದು ಅವರು ಆಗ್ರಹಿಸಿದ್ದಾರೆ.

ವಿಧಾನಸೌಧದದಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, 42 ವರ್ಷಗಳಿಂದ ರಾಜಕಾರಣದಲ್ಲಿದ್ದೇವೆ. ಬಸವಲಿಂಗಪ್ಪ, ಷರೀಪ್ ಅವರನ್ನ ಎದುರಿಸಿ‌ ಬಂದವನು. ನಾನು ಎಂದೂ ಇಂತಹ ಸನ್ನಿವೇಶ ಎದುರಿಸಿದವನಲ್ಲ. ಗೋಪಾಲಕೃಷ್ಣ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದವರು, ಅವರ ಪತ್ನಿ ಜಿ.ಪಂ.ನಲ್ಲಿದ್ದರು. ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟವರು. ನಿನ್ನೆ ಸಂಜೆ 7.30 ರ ಸುಮಾರಿಗೆ ಒಂದು ಪತ್ರ ಬಂತು. ಆ ಪತ್ರವನ್ನು ಕುಳ್ಳ ದೇವರಾಜ್‌ ಬರೆದಿದ್ದರು. ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಅವರು ನಿಮ್ಮ ಹತ್ಯೆಗೆ ಸುಫಾರಿ ಕೊಟ್ಟಿದ್ದರು. ಹೀಗಾಗಿ ನನ್ನನ್ನು ಕ್ಷಮಿಸಬೇಕು ಎಂದು ಪತ್ರದಲ್ಲಿ ಬರೆಯಲಾಗಿತ್ತು ಎಂದು ಹೇಳಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆಯೇ ನನಗೆ ಇದರ ವಾಸನೆ ಬಂದಿತ್ತು. ನಾನು ಎಲ್ಲಾ ಒಬ್ಬಂಟಿಯಾಗಿ ಓಡಾಡುವವನು. ಎಲ್ಲಾ ಪಕ್ಷದವರ ಜೊತೆಗೂ ಉತ್ತಮ ಸಂಬಂಧವನ್ನು ಇರಿಸಿಕೊಂಡಿದ್ದೇನೆ. ಪೆನ್‌ಡ್ರೈವ್‌ ನಲ್ಲಿ ಸಿಕ್ಕಿದ ದೃಶ್ಯವನ್ನು ನಾನು ಗಮನಿಸಿದ್ದೇನೆ. ಅದರಲ್ಲಿ ಸುಮಾರು ಮೂರರಿಂದ ನಾಲ್ಕು ಗಂಟೆಯಷ್ಟು ವಿಡಿಯೋ ಇದೆ. ಈ ಕುರಿತು ಸ್ಥಳೀಯರ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದೇನೆ. ಎಸ್‌ಪಿ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಯವರ ಗಮನಕ್ಕೆ ಈ ವಿಚಾರವನ್ನು ತಂದಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದೇನೆ. ವಿಡಿಯೋದಲ್ಲಿ ಒಬ್ಬ ಶಾಸಕನನ್ನು ಸುಫಾರಿ ಕೊಟ್ಟು ಕೊಲ್ಲಿಸೋದಾಗಿ ಹೇಳಿದ್ದಾರೆ. ಅವನನ್ನು ಮುಗಿಸು ಅನ್ನೋ ಸಂಭಾಷಣೆ ನಡೆದಿದೆ. ಗೋಪಾಲಕೃಷ್ಣರೇ ನೇರವಾಗಿ ವಿಡಿಯೋದಲ್ಲಿ ಮಾತನಾಡಿದ್ದಾರೆ ಎಂದು ವಿಶ್ವನಾಥ್‌ ಆರೋಪಿಸಿದ್ದಾರೆ.

ನಾನು ಜನರ ಜೊತೆಗೆ ಇರುವವನು. ಒಬ್ಬಂಟಿಯಾಗಿಯೇ ತೋಟಕ್ಕೆ ಹೋಗುತ್ತೇನೆ. ಕಾರು ಚಲಾಯಿಸಿಕೊಂಡು ಓಡಾಡುತ್ತೇನೆ. ಇದನ್ನು ಅವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕಡಪಾದಿಂದ ಸುಫಾರಿ ಕಿಲ್ಲರ್‌ಗಳನ್ನು ಕರೆಯಿಸಿರುವುದಾಗಿ ಮಾತನಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಕೆಲವು ಪೊಲೀಸ್‌ ಅಧಿಕಾರಿಗಳ ಜೊತೆಯೂ ಮಾತನಾಡಿದ್ದಾರೆ. ಈ ಹಿಂದೆ ಕಡಬಗೆರೆ ಶೀನನ ಶೂಟೌಟ್‌ ಕೇಸ್‌ನಲ್ಲಿಯೂ ನನ್ನ ಮೇಲೆ ಹುನ್ನಾರ ನಡೆದಿತ್ತು. ಕಡಬಗೆರೆ ಶ್ರೀನಿವಾಸ್‌ನನ್ನು ಬೆಳೆಸಿದ್ದ ನಾನೆ. ಬಸವೇಶ್ವರ ನಗರದಲ್ಲಿ ಶೂಟೌಟ್‌ ನಡೆದಿತ್ತು. ಈ ಸಂದರ್ಭದಲ್ಲಿ ಶ್ರೀನಿವಾಸ್‌ ಕೈಯಲ್ಲಿ ವಿಶ್ವನಾಥ್‌ ಹೆಸರನ್ನು ಹೇಳಿಸಿದ್ದು ನಾನೇ ಎಂದು ಗೋಪಾಲಕೃಷ್ಣ ವಿಡಿಯೋದಲ್ಲಿ ಹೇಳಿದ್ದಾನೆ. ಇನ್ನು ಡಿಸಿ ಅಯ್ಯಪ್ಪ ಕೇಸಿನಲ್ಲಿಯೂ ಅವನು ಮಾತನಾಡಿದ್ದಾನೆ. ನಾನು ಎಲ್ಲವನ್ನೂ ಫೈಟ್‌ ಮಾಡುತ್ತೇನೆ. ಅಲ್ಲದೇ ಎಲ್ಲವನ್ನೂ ಸಮರ್ಥವಾಗಿ ನಾನು ಎದುರಿಸುತ್ತೇನೆ ಎಂದು ವಿಶ್ವನಾಥ್‌ ತಿಳಿಸಿದ್ದಾರೆ.

ಇದೀಗ ಸುಪಾರಿಯಂತಹ ವಿಚಾರ ಆತಂಕಕ್ಕೀಡು ಮಾಡಿದೆ. ರಾಜ್ಯದ ಇತಿಹಾಸದಲ್ಲಿಯೇ ಇಂತಹ ಘಟನೆ ನಡೆದಿರಲಿಲ್ಲ. ಗೋಪಾಲಕೃಷ್ಣನಿಗೆ ಯಾಕೆ ಇಂತಹ ಬುದ್ದಿ ಬಂತೋ, ಇವನ ರೀತಿ ಪ್ಲ್ಯಾನ್‌ ಮಾಡಿದ್ರೆ ಎಲ್ಲರನ್ನೂ ಕೊಲ್ಲಿಸಬೇಕಾಗುತ್ತದೆ. ಗೋಪಾಲಕೃಷ್ಣ ನನ್ನ ಎದುರಾಳಿಯೇ ಅಲ್ಲ, ಕಡಬಗೆರೆ ಶ್ರೀನಿವಾಸ ಕಡೆಯೂ ಇಂತಹದ್ದೇ ಹೇಳಿಕೆಯನ್ನು ಕೊಡಿಸಿದ್ರು. ಶ್ರೀನಿವಾಸನನ್ನು ಕಂಡ್ರೆ ಕಾಂಗ್ರೆಸಿಗರಿಗೇ ಆಗಲ್ಲ. ಆತ ಯಲಹಂಕದಲ್ಲಿ ಐದು ಪ್ಲೋರ್‌ ಬಿಲ್ಡಿಂಗ್‌ ಕಟ್ಟಿಸಿದ್ದಾನೆ. ಫ್ಲ್ಯಾನ್‌ ಇಲ್ಲದೇ ಬಿಲ್ಡಿಂಗ್‌ ಕಟ್ಟಿದ್ರೂ ಅಕ್ರಮವನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದೇನೆ. ಆದರೆ ಇಂತಹ ದ್ವೇಷದ ರಾಜಕಾರಣ ಸರಿಯಲ್ಲ. ಬೇಕಾದ್ರೆ ನಾನೇ ಕ್ಷೇತ್ರವನ್ನು ಬಿಟ್ಟು ಬಿಡ್ತೇನೆ ಎಂದಿದ್ದಾರೆ.

ನಾನು ಸಣ್ಣ ಕಾರ್ಯಕ್ರಮಕ್ಕೂ ಹೋಗ್ತೇನೆ. ನನ್ನನ್ನು ಸುಲಭವಾಗಿ ಅವರು ಹೊಡೆಯಬಹದು. ಈ ಕುರಿತು ಪ್ರತಿಪಕ್ಷ ನಾಯಕರಿಗೂ ಮನವಿಯನ್ನು ಮಾಡುತ್ತೇನೆ. ಇಂತಹ ಕೃತ್ಯ ಸಮರ್ಥನೆ ಮಾಡೋದು ಬೇಡ ಎಂದು ಕಾಂಗ್ರೆಸ್‌ ನಾಯಕರಿಗೆ ಮನವಿ ಮಾಡಿದ್ದಾರೆ. ಇನ್ನು ಈ ಕುರಿತು ಸಮಗ್ರವಾದ ತನಿಖೆಯನ್ನು ನಡೆಸುವಂತೆ ಈಗಾಗಲೇ ಸಿಎಂ ಹಾಗೂ ಗೃಹ ಸಚಿವರಿಗೆ ಮನವಿಯನ್ನು ಮಾಡಿದ್ದೇನೆ ಎಂದಿದ್ದಾರೆ. ಇನ್ನು ಕುಳ್ಳದೇವರಾಜು ನನಗೆ ಪರಿಚಯವಿದೆ. ಬೇರೆ ಬೇರೆಯವರು ನನಗೆ ಪರಿಚಯದವರಿದ್ದಾರೆ. 32 ಎಕರೆ ಜಾಗದ ವಿಚಾರದಲ್ಲಿ ಯಾವುದೇ ಪ್ರಭಾವ ಮಾಡಿಲ್ಲ. ನಾನು ಜಮೀನ್ದಾರನೇ, ಜಮೀನು ಇಟ್ಟುಕೊಂಡಿದ್ದೇನೆ. ಸುಳ್ಳಾಗಿ ನನ್ನನ್ನ ಆ ಕೇಸ್ ನಲ್ಲಿ ಸಿಲುಕಿಸಿದ್ರು ಎಂದಿರುವ ವಿಶ್ವನಾಥ್‌, ವಿಡಿಯೋ ಕಳಿಸಿದ್ದು ಕುಳ್ಳ ದೇವರಾಜ್. ನನಗೆ ಮಾತ್ರವಲ್ಲ ಸಿಎಂ ಸೇರಿ ಎಲ್ಲರಿಗೂ ಅವನು ವಿಡಿಯೋ ಹಾಗೂ ಕ್ಷಮಾಪಣಾ ಪತ್ರವನ್ನು ಕಳಿಸಿದ್ದಾನೆ. ನನ್ನ ಮನೆಯ ಬಳಿ ಗ್ರೀನ್ ಕವರ್ ಇಟ್ಟಿದ್ದರು. ಅದನ್ನು ತೆಗೆದು ನೋಡಿದಾಗ ಅದರಲ್ಲಿ ಕ್ಷಮಾಪಣಾ ಪತ್ರವಿತ್ತು. ಸಿಸಿಬಿಯವರು ದೇವರಾಜ್‌ನನ್ನು ಅರೆಸ್ಟ್‌ ಮಾಡಿರೋದು ನನಗೆ ಗೊತ್ತಿಲ್ಲ. ಕುಳ್ಳ ದೇವರಾಜ್‌ ಒಬ್ಬ ಕ್ರಿಮಿನಲ್‌, ಆತ ಗೋಪಾಲಕೃಷ್ಣನ ಪರಮಾಪ್ತ ಎಂದಿದ್ದಾರೆ.

ಕಡಬಗೆರೆ ಶ್ರೀನಿವಾಸ್‌ ಶೂಟೌಟ್‌ ಕೇಸ್‌ನ ತನಿಖೆಯನ್ನು ಮಾಡಿಸುವಂತೆ ಒತ್ತಾಯ ಮಾಡಿದ್ದೇನೆ. ನನ್ನ ಮೇಲೆ ಈ ಹಿಂದೆ ಕೊಲೆಯ ಪ್ರಯತ್ನ ಆಗಿರಲಿಲ್ಲ. ಆದರೆ ಈಗ ಪ್ರಯತ್ನ ಮಾಡಿರೋದು ಬೆಳಕಿಗೆ ಬಂದಿದೆ. ನನಗೆ ಯಾವುದೇ ಆತಂಕವೂ ಇಲ್ಲ. ಇದೀಗ ಆಂಧ್ರದಲ್ಲಿಯೂ ಇಂತಹ ಕೃತ್ಯಗಳು ನಡೆಯುತ್ತಿಲ್ಲ. ಆದರೆ ಇಲ್ಲಿ ಯಾಕೆ ಈ ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಶಾಸಕ ವಿಶ್ವನಾಥ್‌ ಅವರು ರೌಡಿಗಳ ಜೊತೆಯಲ್ಲಿದ್ದಾರೆ ಅನ್ನೋ ಹೇಳಿಕೆಗೆ ಪ್ರತಿಕ್ರೀಯೆ ನೀಡಿರುವ ವಿಶ್ವನಾಥ್‌, ಡಿ.ಕೆ. ಶಿವಕುಮಾರ್‌ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ. ಗೋಪಾಲಕೃಷ್ಣನಿಗಿಂತ ನನಗೆ ಡಿಕೆ ಹೆಚ್ಚು ಆತ್ಮೀಯರು. ಬಹುಷ ನಾಡಿದ್ದು ನನ್ನ ಪರ ಮಾತನಾಡಬಾರದು. ಡಿ.ಕೆ.ಶಿವಕುಮಾರ್‌ ಅವರ ಬಗ್ಗೆ ಜಾಸ್ತಿ ಮಾತನಾಡಲಾರೆ. ಆದರೆ ಡಿ.ಕೆ.ಶಿವಕುಮಾರ್‌ ಅವರು ಸಾಧು ಸಂತರ ಜೊತೆಯಲ್ಲಿದ್ದಾರೆಯೇ ? ಎಂದು ಶಾಸಕ ಎಸ್.ಆರ್.ವಿಶ್ವನಾಥ್‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಎದುರಲ್ಲೇ ಬಿಜೆಪಿ ಶಾಸಕರಿಬ್ಬರ ಗಲಾಟೆ

ಇದನ್ನೂ ಓದಿ : ಬಿಜೆಪಿ ಪ್ರಭಾವಿ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಬೆಂಬಲಿಗನ ಹತ್ಯೆಗೆ ನಡೆದಿತ್ತಾ ಮಾಸ್ಟರ್ ಪ್ಲಾನ್ ?

( murder Sketch bjp MLA assassination : MLA SR Vishwanath reaction)

Comments are closed.