ಮುಸ್ಲಿಂ ಮತಬುಟ್ಟಿಗೆ ಕೈಹಾಕಿದ ಪ್ರಧಾನಿ ಮೋದಿ

ಮುಂಬೈ: ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi Visits Mumbai) ವಿವಿಧ ಪ್ರಯತ್ನಕ್ಕೆ ಕೈಹಾಕಿದ್ದಾರೆ.  ಮುಂಬೈನಲ್ಲಿ ನಡೆಯುತ್ತಿರುವ ಮಹಾನಗರ ಪಾಲಿಕೆ ಚುನಾವಣೆಗೂ (Brihanmumbai Municipal Corporation Elections) ಮುನ್ನ ಅವರು ಮುಂಬೈನ ದಾವೂದಿ ಬೋಹ್ರಾ ಮುಸ್ಲಿಮರ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಶುಕ್ರವಾರ ಉದ್ಘಾಟಿಸಿದ್ದಾರೆ. ಇದು ಮುಂಬೈನ ಅತ್ಯಂತ ಪ್ರಭಾವಿ ಸಮುದಾಯವಾಗಿದ್ದು ಪ್ರಧಾನಿ ಮೋದಿ ಮುಸ್ಲಿಂ ಮತಬುಟ್ಟಿಗೆ (Muslim Vote Bank) ನೇರವಾಗಿ ಕೈಹಾಕಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಮುಂಬೈನ ಅಂಧೇರಿಯ ಉಪನಗರದಲ್ಲಿರುವ ಮರೋಲ್‌ನಲ್ಲಿರುವ ದಾವೂದಿ ಬೋಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಲ್ಜಮಿಯಾ-ತುಸ್-ಸೈಫಿಯಾ ಹೊಸ ಕ್ಯಾಂಪಸ್‌ನಲ್ಲಿ ಸಮುದಾಯದ ಮುಖ್ಯಸ್ಥ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕೈ ಹಿಡಿದುಕೊಂಡು ನಡೆದಿದ್ದಾರೆ.

ಕುಟುಂಬದ ಸದಸ್ಯನಾಗಿ ಭಾಗವಹಿಸಿದ್ದೇನೆ ಎಂದ ಪ್ರಧಾನಿ

“ಮುಂಬೈನ ಸಯ್ಯದ್ನಾ ಸಾಹಬ್ ಅವರ ಕುಟುಂಬದ ನಾಲ್ಕು ತಲೆಮಾರುಗಳ ಬಗ್ಗೆ ನನಗೆ ಅರಿವಿದೆ., ನಾನು ಈ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯನಾಗಿ ಭಾಗವಹಿಸಿದ್ದೇನೆಯೇ ಹೊರತು ಪ್ರಧಾನ ಮಂತ್ರಿಯಾಗಿ ಅಲ್ಲ. ಈ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ 150 ವರ್ಷಗಳ ಕನಸನ್ನು ನನಸು ಮಾಡಿದ್ದೀರಿ” ಎಂದು ಪ್ರಧಾನಿ ನರೇಂದ್ರ ಮೋದಿ ಸಮುದಾಯದ ಸದಸ್ಯರನ್ನು ಶ್ಲಾಘಿಸಿದರು.

ಅರೆಬಿಕ್ ಕಲಿಸುವ ಶಿಕ್ಷಣ ಸಂಸ್ಥೆ ಉದ್ಘಾಟನೆ

ದಾವೂದಿ ಬೋಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಲ್ಜಮಿಯಾ-ತುಸ್-ಸೈಫಿಯಾ ಸಾಂಪ್ರದಾಯಿಕ ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾದ ಹೊಸ ಕೇಂದ್ರವು ಅರೇಬಿಕ್ ಕಲಿಕೆಯನ್ನು ಒದಗಿಸುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಅಭೂತಪೂರ್ವ ನಂಬಿಕೆಯ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ಶಿಕ್ಷಣದಲ್ಲಿ ದಾಪುಗಾಲು ಹಾಕುತ್ತಿರುವ ತಮ್ಮ ಸರ್ಕಾರವನ್ನು ಶ್ಲಾಘಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ

ಕಳೆದ ಎಂಟು ವರ್ಷಗಳಲ್ಲಿ ಪ್ರತಿ ವಾರ, ದೇಶದಲ್ಲಿ ಒಂದು ವಿಶ್ವವಿದ್ಯಾಲಯ ಮತ್ತು ಎರಡು ಕಾಲೇಜುಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು, 2004 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದಲ್ಲಿ 145 ವೈದ್ಯಕೀಯ ಕಾಲೇಜುಗಳು ಬಂದವು. ಅವರು 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ,

260 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಕ್ರಮಗಳನ್ನು ಶ್ಲಾಘಿಸಿದರು.

ಮಹತ್ವ ಪಡೆದ ಮುಂಬೈ ಚುನಾವಣೆ

ಭಾರತದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (BMC) ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿಯವರ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.

Comments are closed.