ಪ್ರಮೋದ್ ಮಧ್ವರಾಜ್ ಗೆ ಬಿಗ್ ರಿಲೀಫ್ : ವಂಚನೆ ಪ್ರಕರಣ ಟಿ.ಜೆ.ಅಬ್ರಾಹಂ ಅರ್ಜಿ ವಜಾ

ಉಡುಪಿ : ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಕೇಂದ್ರ ಮಾಹಿತಿ ಆಯೋಗ ಬಿಗ್ ರಿಲೀಫ್ ಕೊಟ್ಟಿದೆ. ಪ್ರಮೋದ್ ಮಧ್ವರಾಜ್ ಅವರು ಬ್ಯಾಂಕಿನಲ್ಲಿ ವಂಚನೆ ಮಾಡಿದ್ದು, ಬ್ಯಾಂಕಿನವರು ಕೂಡ ಶಾಮೀಲಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಯೋಗ ವಜಾಗೊಳಿಸಿದೆ.

ಪ್ರಮೋದ್ ಮಧ್ವರಾಜ್ ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾಲ ಪಡೆಯುವ ವಿಚಾರದಲ್ಲಿ ವಂಚನೆ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಗಂಭೀರ ಆರೋಪವನ್ನು ಮಾಡಿದ್ದರು. ಅಲ್ಲದೇ ವಂಚನೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳು ಕೂಡ ಶಾಮೀಲಾಗಿದ್ದಾರೆ ಅಂತಾನೂ ಆರೋಪಿಸಿ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆದ್ರೆ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಆರಂಭದಲ್ಲಿ ಟಿ.ಜೆ.ಅಬ್ರಾಹಂ ಅವರು ವಂಚನೆ ನಡೆಸಿರೋ ಆರೋಪಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್ ಬ್ಯಾಂಕಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೆಲವು ದಾಖಲೆಗಳನ್ನು ಕೇಳಿದ್ದರು.ಆದರೆ ಖಾತೆದಾರರ ಖಾಸಗಿ ಮಾಹಿತಿಯನ್ನು ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ನೀಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತ್ತು. ನಂತರದಲ್ಲಿ ಟಿ.ಜೆ.ಅಬ್ರಾಹಂ ಅವರು ಪ್ರಾಧಿಕಾರಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಆದರೆ ಪ್ರಾಧಿಕಾರವು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೇಳಿಕೆಯನ್ನೇ ಎತ್ತಿಹಿಡಿದಿದೆ.

ಪ್ರಾಧಿಕಾರದಿಂದಲೂ ಸೋಲಾದ ನಂತರದಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ವಿಡಿಯೋ ಕಾನ್ಪರೆನ್ಸ್ ಮೂಲಕ ಅರ್ಜಿಯನ್ನು ವಿಚಾರಣೆ ನಡೆಸಿದ ಆಯೋಗಕ್ಕೆ ಬ್ಯಾಂಕಿನ ಅಧಿಕಾರಿಗಳು, ಪ್ರಮೋದ್ ಮಧ್ವರಾಜ್ ಅವರು ಬ್ಯಾಂಕಿನ ಗ್ರಾಹಕರಾಗಿದ್ದು ಅವರಿಗೆ ಕಾನೂನಿನಡಿಯಲ್ಲೇ ಸಾಲ ನೀಡಲಾಗಿದೆ. ಅಲ್ಲದೇ ನಿಯಮಗಳನ್ನು ಪಾಲನೆ ಮಾಡಲಾಗಿದೆ ಎಂದು ತಿಳಿಸಿದ್ದರು.

ವಾದ ವಿವಾದಗಳನ್ನು ಆಲಿಸಿದ ಆಯೋಗವು, ದೂರುದಾರರು ಖಾಸಗಿ ಮಾಹಿತಿಯನ್ನು ಕೇಳಿದ್ದಾರೆ. ಅಲ್ಲದೇ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಖಾಸಗಿ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಪ್ರಾಧಿಕಾರದ ಆದೇಶವನ್ನು ಕೇಂದ್ರ ಮಾಹಿತಿ ಆಯೋಗ ಎತ್ತಿ ಹಿಡಿದಿದ್ದು, ಟಿ.ಜೆ. ಅಬ್ರಾಹಂ ಅವರ ಅರ್ಜಿಯನ್ನು ವಜಾಗೊಳಿಸಿದೆ.

Comments are closed.