Santhosh Patil : ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣ : ಈಶ್ವರಪ್ಪಗೆ ಸಂಕಷ್ಟ, ರಾಜ್ಯಪಾಲರಿಗೆ ಇಂದು ಕಾಂಗ್ರೆಸ್‌ ದೂರು

ಬೆಂಗಳೂರು : ಕಳೆದ ಕೆಲ ತಿಂಗಳಿನಿಂದ ಒಂದಾದ ಮೇಲೊಂದರಂತೆ ವಿವಾದ ಸೃಷ್ಟಿಸಿ ಬಿಜೆಪಿ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಈಶ್ವರಪ್ಪ ವಿರುದ್ಧ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆಯ ಅಸ್ತ್ರ ಪ್ರಯೋಗಕ್ಕೆ ಸಿದ್ಧವಾಗಿದೆ. ಸಂತೋಷ ಆತ್ಮಹತ್ಯೆ (Santhosh Patil) ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ರಾಜೀನಾಮೆ ನೀಡಬೇಕೆಂಬ ಒತ್ತಡ ವ್ಯಕ್ತವಾಗುತ್ತಿದ್ದರೇ, ಈಶ್ವರಪ್ಪ ವಿರುದ್ಧ ಕ್ರಮವಾಗೋ ತನಕ ಸಂತೋಷ ಮೃತ ದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ 40 % ಕಮಿಷನ್ ಕೊಡಲಾಗದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರೇ ಸಂತೋಷ ಸಾವಿಗೆ ಈಶ್ವರಪ್ಪ ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್, ಆಪ್ ಪಕ್ಷ ಕೂಡ ಈಶ್ವರಪ್ಪ ರಾಜೀನಾಮೆ ಆಗ್ರಹಿಸುತ್ತಿದೆ. ಈ ಮಧ್ಯೆ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ರಾಜ್ಯಪಾಲರಿಗೆ ನಾಳೆ ಮನವಿ ಕೊಡಲಿದೆ.ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಬೇಕು ಈಶ್ವರಪ್ಪ ಮೇಲೆ ಭ್ರಷ್ಟಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಮಾತ್ರವಲ್ಲ ತಕ್ಷಣ ಸರ್ಕಾರ ಈಶ್ವರಪ್ಪನವರನ್ನು ಸಂಪುಟದಿಂದ ಕೈಬಿಟ್ಟು ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ರಾಜ್ಯಪಾಲರ ಭೇಟಿ ಮಾಡಿ ಕಾಂಗ್ರೆಸ್ ನಿಯೋಗ ಆಗ್ರಹಿಸಲಿದೆ. ಕಾಂಗ್ರೆಸ್ ಇಂದು ಬೆಳಗ್ಗೆ 9 ಗಂಟೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಗೆ ಮನವಿ ಸಲ್ಲಿಸಲಿದ್ದು, ಇದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವ ವಹಿಸಲಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಪಕ್ಷದ ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಧೃವನಾರಾಯಣ್, ಸತೀಶ್ ಜಾರಕಿಹೊಳಿ ನಿಯೋಗದಲ್ಲಿ ತೆರಳಲಿದ್ದಾರೆ.

ಇನ್ನೂ ಉಡುಪಿಯಲ್ಲಿ ಸಂತೋಷ್ ಮೃತದೇಹವನ್ನು ಹೊಟೇಲ್ ನಲ್ಲಿಯೇ ಇಡಲಾಗಿದ್ದು, ಸಂತೋಷ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ ಬಳಿಕ ಸಂತೋಷ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆಯಾಗಲಿದೆ. ಉಡುಪಿಯ ಶಾಂಭವಿ ಲಾಡ್ಜ್ ಗೆ ಐಜಿಪಿ ಜ್ಯೋತಿ ರಾಯ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯಲ್ಲಿರುವ ಸಂತೋಷ ನಿವಾಸಕ್ಕೆ ಕ್ಯಾಂಪ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಸಂತೋಷ್ ಪತ್ನಿ ಜಯಶ್ರೀಯವರಿಂದ ಸಂತೋಷ್ ಮರಣೋತ್ತರ ಪರೀಕ್ಷೆಗೆ ಲಿಖಿತ್ ಅನುಮತಿ ಪಡೆಯಲು ಯತ್ನಿಸಿದ್ದಾರೆ. ಆದರೆ ಪೊಲೀಸರ ಮನವೊಲಿಕೆಗೆ ಬಗ್ಗದ ಸಂತೋಷ್ ಪತ್ನಿ ಜಯಶ್ರೀ, ಬೆಂಗಳೂರಿನಲ್ಲಿರುವ ಸಂತೋಷ ಸಹೋದರ ಉಡುಪಿಗೆ ತೆರಳಿ ಮೃತದೇಹವನ್ನು ನೋಡುವ ತನಕ ಮೃತದೇಹ ಅಲ್ಲಿಯೇ ಇರಲಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಈಶ್ವರಪ್ಪ ಗೆ ಮುಳುವಾಯ್ತು ಕಮೀಷನ್ ಕೇಸ್ : ರಾಜೀನಾಮೆಗೆ ಒತ್ತಡ

ಇದನ್ನೂ ಓದಿ : ಸಿಲಿಕಾನ್‌ ಸಿಟಿಗೆ ಮಾಲಿನ್ಯದಿಂದ ಆತಂಕ : ಸ್ತ್ರೀಯರ ಆರೋಗ್ಯದ ಬಗ್ಗೆ ಹೊರಬಿತ್ತು ಆತಂಕಕಾರಿ ಮಾಹಿತಿ

Contractor Santhosh Patil Suicide Case, Complaint to Congress governor against KS Eshwarappa

Comments are closed.