ಸಚಿವರಾಗುವ ಕನಸಿಗೆ ಎಳ್ಳು ನೀರು…! ವಿಶ್ವನಾಥ್ ಮಂತ್ರಿಗಿರಿಗೆ ಅನರ್ಹರು ಎಂದ ಹೈಕೋರ್ಟ್…!!

ಬೆಂಗಳೂರು: ಒಂದೆಡೆ ಸಚಿವ ಸಂಪುಟ ವಿಸ್ತರಣೆ ಇನ್ನೂ ಕಗ್ಗಂಟಾಗಿಯೇ ಉಳಿದಿರುವ ಬೆನ್ನಲ್ಲೇ ಸಚಿವರಾಗೋ ಕನಸಿನಲ್ಲಿದ್ದ ಎಚ್.ವಿಶ್ವನಾಥ್ ಗೆ ಹೈಕೋರ್ಟ್ ಶಾಕ್ ನೀಡಿದೆ.

ಎಚ್.ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಶತಾಯ ಗತಾಯ ಸಚಿವರಾಗೋ ಕನಸಿನಲ್ಲಿದ್ದ ಹಿರಿಯ ರಾಜಕಾರಣಿ ವಿಶ್ವನಾಥ್ ಗೆ ನಿರಾಸೆಯಾಗಿದೆ.

ಪಕ್ಷ ತೊರೆದು ಅಧಿಕಾರದ ಆಸೆಗಾಗಿ ಬಿಜೆಪಿ ಸೇರಿದ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡದಂತೆ ನಿರ್ದೇಶನ ನೀಡಲು ಕೋರಿ ವಕೀಲರಾದ ಎ.ಎಸ್.ಹರೀಶ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಉಳಿದ ಇಬ್ಬರು ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಗೆ ತನ್ನ ಮಧ್ಯಂತರ ಆದೇಶದಲ್ಲಿ ರಿಲೀಫ್ ನೀಡಿದ್ದು, ವಿಶ್ವನಾಥ್ ಸಚಿವರಾಗುವಂತಿಲ್ಲ ಎಂದಿದೆ.

ಸಂವಿಧಾನದ ಆರ್ಟಿಕಲ್ 164, 316ರ ಅಡಿಯಲ್ಲಿ ವಿಶ್ವನಾಥ್ ಸಚಿವರಾಗಲು ಅನರ್ಹರು ಎಂದು ಹೈಕೋರ್ಟ್ ಹೇಳಿದೆ. ಉಳಿದ ಇಬ್ಬರು ಶಾಸಕರು ಸಂವಿಧಾನದ ಅಡಿಯಲ್ಲಿ ಮರು ಆಯ್ಕೆಯಾಗಿರೋದರಿಂದ ಸಚಿವರಾಗಲು ಅನರ್ಹತೆಯ ಪ್ರಶ್ನೆ ಇಲ್ಲ ಎಂದು ಕೋರ್ಟ್ ಅಭಿಪ್ರಾಯಿಸಿದೆ.

ಎಚ್.ವಿಶ್ವನಾಥ್, ಕೇವಲ ನಾಮ ನಿರ್ದೇಶಿತ ಸದಸ್ಯರಾಗಿದ್ದು ಇದು ಹಿಂಬಾಗಿಲಿನಿಂದ ಶಾಸಕತ್ವ ಪಡೆದಂತೆ. ಹೀಗಾಗಿ ಸಚಿವ ಸ್ಥಾನ ಪಡೆಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂಬರ್ಥದಲ್ಲಿ ತೀರ್ಪು ಹೊರಬಿದ್ದಿದ್ದು ಇದರಿಂದ ಸಚಿವರಾಗಲು ಎಚ್.ವಿಶ್ವ ನಾಥ್ ಇದುವರೆಗೂ ನಡೆಸಿದ ಎಲ್ಲ ಪ್ರಯತ್ನಗಳು ವ್ಯರ್ಥವಾದಂತಾಗಿದೆ.

Comments are closed.