Doctor’s Day 2022: ಜೀವ ಉಳಿಸುವ ವೈದ್ಯರ ದಿನವಿಂದು; ಈ ದಿನದ ಇತಿಹಾಸ, ಮಹತ್ವ ಏನು ಗೊತ್ತಾ!

“ವೈದ್ಯೋ ನಾರಾಯನೋ ಹರಿಃ” ಎಂಬ ಮಾತಿದೆ. ಅಂದರೆ, ವೈದ್ಯರು ದೇವರಿಗೆ ಸಮಾನ ಎಂದು. ವೈದ್ಯರು ನಮ್ಮ ಕಾಯಿಲೆಗಳನ್ನು ಪತ್ತೆಹಚ್ಚುವ, ಸಲಹೆ ನೀಡುವ ಮತ್ತು ಚಿಕಿತ್ಸೆ ನೀಡುವ ಆರೋಗ್ಯ ವೃತ್ತಿಪರರು. ಅವರು ತಮ್ಮ ಜ್ಞಾನವನ್ನು ಬಳಸಿಕೊಂಡು ಜೀವಗಳನ್ನು ಉಳಿಸುತ್ತಾರೆ ಮತ್ತು ಶಾಶ್ವತ ದೈಹಿಕ ಅಥವಾ ಮಾನಸಿಕ ದುರ್ಬಲತೆ ಹೊಂದಿರುವವರಿಗೆ ಸಹಾಯ ಮಾಡುತ್ತಾರೆ. ಈ ಕಾರಣಕ್ಕಾಗಿ, ವೈದ್ಯರನ್ನು ಅತ್ಯಂತ ಪ್ರಮುಖ ಸಾರ್ವಜನಿಕ ಸೇವಕರು ಎಂದು ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ವೈದ್ಯರ ಕೊಡುಗೆಗಳನ್ನು ಎತ್ತಿ ತೋರಿಸುವ ಸಲುವಾಗಿ “ರಾಷ್ಟ್ರೀಯ ವೈದ್ಯರ ದಿನ”ವನ್ನು (Doctor’s Day 2022)ಭಾರತದಲ್ಲಿ ಜುಲೈ 1 ರಂದು ಭಾರತೀಯ ವೈದ್ಯಕೀಯ ಸಂಘ (IMA) ಆಚರಿಸುತ್ತದೆ.

ಥೀಮ್
ಭಾರತದಲ್ಲಿ ಈ ವರ್ಷದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಥೀಮ್ “ಫ್ರಂಟ್ ಲೈನ್‌ನಲ್ಲಿರುವ ಕುಟುಂಬ ವೈದ್ಯರು.” ಇಡೀ ಕುಟುಂಬ ಅಥವಾ ಸಮುದಾಯವನ್ನು ಕಾಳಜಿ ವಹಿಸುವ ವೈದ್ಯರ ಕೊಡುಗೆಯನ್ನು ಈ ಥೀಮ್ ಎತ್ತಿ ತೋರಿಸುತ್ತದೆ.

ಇತಿಹಾಸ
ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು, ಜುಲೈ 1 ರಂದು ಡಾ ಬಿಧನ್ ಚಂದ್ರ ರಾಯ್ ಅಥವಾ ಬಿ.ಸಿ. ರಾಯ್ ಅವರ ಜನ್ಮ ದಿನದಂದು ಆಚರಿಸಲಾಗುತ್ತದೆ.ರಾಯ್ ಪಶ್ಚಿಮ ಬಂಗಾಳದ ಪ್ರಸಿದ್ಧ ವೈದ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು 1948 ರಿಂದ 1962 ರಲ್ಲಿ ಸಾಯುವವರೆಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಭಾರತ ರತ್ನ ಪುರಸ್ಕೃತರು ಆಗಿರುವ ಇವರು ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಕಲಿಸಿದರು ಮತ್ತು ಭಾರತದಲ್ಲಿ ಅನೇಕ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಉದಾಹರಣೆಗೆ ಜಾದವ್‌ಪುರ ಟಿ.ಬಿ. ಆಸ್ಪತ್ರೆ, ಕಮಲಾ ನೆಹರು ಸ್ಮಾರಕ ಆಸ್ಪತ್ರೆ, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಮಹಿಳೆಯರು ಮತ್ತು ಮಕ್ಕಳಿಗಾಗಿ ಚಿತ್ತರಂಜನ್ ಸೇವಾ ಸದನ್.

ರಾಷ್ಟ್ರೀಯ ವೈದ್ಯರ ದಿನ: ಮಹತ್ವ
ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವುದು ಮತ್ತು ಗುಣಪಡಿಸುವುದು ಮಾತ್ರವಲ್ಲದೆ ರಾಷ್ಟ್ರದಲ್ಲಿ ಭವಿಷ್ಯದ ಪೀಳಿಗೆಯ ವೈದ್ಯರಿಗೆ ಶಿಕ್ಷಣ ಮತ್ತು ತಯಾರು ಮಾಡುತ್ತಾರೆ. ಬಡವರು ಮತ್ತು ಹಿಂದುಳಿದವರಿಗೆ ಉಚಿತ ವೈದ್ಯಕೀಯ ಸೇವೆ ನೀಡುವ ವೈದ್ಯರಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅನಾರೋಗ್ಯಕ್ಕೆ ತುತ್ತಾಗಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಈ ದಿನವು ನಮ್ಮ ಸಮಾಜದಲ್ಲಿ ವೈದ್ಯರು ನಿರ್ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ಈ ದಿನದಂದು, ರೋಗಿಗಳು ತಮ್ಮ ವೈದ್ಯರಿಗೆ ಮೆಚ್ಚುಗೆಯನ್ನು ತೋರಿಸುತ್ತಾರೆ, ಉಚಿತ ತಪಾಸಣೆ ಶಿಬಿರಗಳನ್ನು ಮತ್ತು ವೈದ್ಯಕೀಯ ಚರ್ಚೆಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ಇದನ್ನೂ ಓದಿ: Neem Oil Benefits: ಬೇವಿನ ಎಣ್ಣೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ !

(doctor’s day 2022 know the history and significance)

Comments are closed.