ಅಣ್ಣವ್ರ ಹುಟ್ಟೂರು ಸಿಂಗಾನಲ್ಲೂರಿನಲ್ಲೊಬ್ಬ ಕಪ‍ಟಿ , ಜಡೆ ಬಿಚ್ಚಿ ನಿಂತ್ರೆ ಮೈಮೇಲೆ ಬರ್ತಾಳೆ ಚೌಡಿ !!ಭಾಗ-13

0

ಸಿಂಗಾನಲ್ಲೂರು ಡಾಕ್ಟರ್ ರಾಜ್ ಕುಮಾರ್ ಅವರ ಹುಟ್ಟೂರು ಅಂತ ರಾಜ್ಯಕ್ಕೆ ಮಾತ್ರವಲ್ಲ ದೇಶದ ಜನತೆಗೆ ಗೊತ್ತಿರೋ ವಿಚಾರ.  ಆದರೆ ಕೊಳ್ಳೇಗಾಲದ ಸುತ್ತಮುತ್ತಲ ಹಳ್ಳಿಯ ಮೂಢ ಜನರಿಗೆ ಸಿಂಗಾನಲ್ಲೂರು ಅಂದ್ರೆ ಅಲ್ಲಿನ ಚೌಡೇಶ್ವರಿ ಮತ್ತದರ ಪೂಜಾರಿ ನೆನಪಾಗ್ತಾರೆ.  ನಾನು ಮಾಂತ್ರಿಕರ ಮನೆಗಳನ್ನು ಹೊಕ್ಕು ಬಂದಂತೆ ಈ ಸಿಂಗಾನಲ್ಲೂರಿನ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದೆ. .ನಾನು ಹೋಗೋಕೆ ಕಾರಣವಾಗಿದ್ದು ಅಲ್ಲಿನ ಪೂಜಾರಿ…

ಹೌದು, ಆ ಚೌಡಿ ಪೂಜಾರಿಯ ಮೈಮೇಲೆ ಚೌಡೇಶ್ವರಿ ಆವಾಹನೆ ಆಗ್ತಾಳೆ ಅಂತ ನನ್ನ ಗೆಳೆಯ ಬಸಂತ್ ಹೇಳಿದ್ದ.. ಹೀಗಾಗಿ ಕ್ಯೂರ್ಯಾಸಿಟಿಯಿಂದ ಆ ದೇವಸ್ಥಾನವನ್ನು ಮತ್ತದರ ಪೂಜಾರಿಯನ್ನು ನೋಡೋಕೆ ಹೋಗಿದ್ದೆ.. ಅವತ್ತು ಶುಕ್ರವಾರ. . ಮಧ್ಯಾಹ್ನ ಮೂರು ಗಂಟೆಗೆ ಟೈಮಿಗೆ ಸರಿಯಾಗಿ ದೇವರು ಬರೋ ಸಮಯ. ಜನ ಜಾತ್ರೆಯೇ ಅವತ್ತು ಅಲ್ಲಿ ನೆರೆದಿತ್ತು. ಆ ಜನರ ನಡುವೆ ನಾನು ಹೋಗಿ ನಿಂತಿದ್ದೆ…

ನಾನು ನನ್ನ ಗೆಳೆಯ ಬಸಂತ್ ಮತ್ತು ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ನನ್ನ ಜೊತೆಗೇ ಇದ್ದರು.. ಅಂದಹಾಗೆ ಅವರ ಹೆಸರು ರವಿ ಅಂತ.. ಸಿಂಗಾನಲ್ಲೂರಿನ ಮಗ್ಗುಲಿನ ಹನೂರು ಎಂಬ ಊರು ಅವರದ್ದು… ಗೆಳೆಯ ವಸಂತನಿಗೆ ಹುಚ್ಚು ನಂಬಿಕೆ..  ಇನ್ನು ರವಿ ಮತ್ತು ನಾನು ದೇವರನ್ನು, ದೆವ್ವವನ್ನು ನಂಬದೇ ಇರೋರು…

ಒಟ್ಟಿಗೆ ಸಿಂಗಾನಲ್ಲೂರು ಚೌಡಿ ಪೂಜಾರಿಯ ಸತ್ಯಾಸತ್ಯತೆ ಪರಿಶೀಲಿಸೋಕೆ ಹೋದ್ವು.. ಆಗ ಸಮಯ ಹನ್ನೆರಡು ಗಂಟೆ ಇರಬಹುದು.. ಶುಕ್ರವಾರ ಬೇರೆ.. ಗರ್ಭಗುಡಿಯೊಳಗೆ ಜುಟ್ಟುದಾರಿ ಭಕ್ತರನ್ನೆಲ್ಲಾ ಮುಂದೆ ಕೂರಿಸಿಕೊಂಡು ಕವಡೆ ಹಾಕಿ ಹಾಕಿ ಕಷ್ಟ ಕೇಳಿಕೊಳ್ಳುತ್ತಿದ್ದ.. ನಾವು ಅವನ ಆಟ ನೋಡುತ್ತಾ ನಿಂತಿದ್ದೆವು… ನಮ್ಮನ್ನು ಕಂಡೊಡನೆ ಇವ್ಯಾವೋ ಹೊಸ ಮುಖ ಅಂತೇಳಿ ನಮ್ಮ ಕಡೆ ತಿರುಗಿ ಏನಾಗ್ಬೇಕು ಅಂದ.. ನಾನು ಕಷ್ಟ ಹೇಳಿಕೊಳ್ಳೋಕೆ ಬಂದಿದ್ದೀವಿ ಸ್ವಾಮಿ ಅಂದಿದ್ದೇ… ಅದ್ಯಾಕೋ ನಮ್ಮನ್ನು ಮೂರು ಗಂಟೆಗೆ ಬನ್ನಿ ಅಂತ ಹೇಳಿ ಕಳುಹಿಸಿಬಿಟ್ಟ..

ಸಮಯ ಮೂರು ಗಂಟೆಯಾಗಿತ್ತು.. ಮತ್ತೆ ದೇವಸ್ಥಾನದ ಬಾಗಿಲಿಗೆ ಹೋಗಿ ನಿಂತುಕೊಂಡ್ವಿ.. ಆಗ ಕೇಳಿ ಬಂತು ನೋಡಿ ತಮಟೆ ಸದ್ದು.. ಚೌಡಿಯ ಪೂಜಾರಿ ಕೆಂಪು ವಸ್ತ್ರ ಕೆಂಪು ಶಾಲುಗಳನ್ನು ಹಾಕಿಕೊಂಡು ಹಣೆಯ ಮೇಲೆ ದೊಡ್ಡ ಕುಂಕುಮ ಇಟ್ಟುಕೊಂಡು ಮುಖಕ್ಕೆ ಅರಿಶಿನ ಮೆತ್ತಿಕೊಂಡು ನಿಂತಿದ್ದ.. ಅವನು ಪೂಜೆ ನೆರವೇರಿಸಿದ್ದ ತಡ ಮೈಮೇಲೆ ಚೌಡೇಶ್ವರಿ ದೇವಿ ಬಂದು ಬಿಟ್ಟಿದ್ದಳು.. ನೋಡ ನೋಡುತ್ತಲೇ ಮೂಳೆಗಳು ಇದ್ದ ಚಪ್ಪಲಿಯನ್ನು ಹಾಕ್ಕೊಂಡು ಮೋಳೆ ಏರಿಸಿದ್ದ ಕುರ್ಚಿಯ ಮೇಲೆ ಕೂತು ಬಿಟ್ಟ..

ಮೊಂಡವಾದ ತ್ರಿಶೂಲವೊಂದನ್ನು ಹೊಟ್ಟೆಗೆ ಚುಚ್ಚಿ ಕೊಂಡವನೇ ಕೈಯಲ್ಲೊಂದು ಕತ್ತಿ ಹಿಡಿದು ಡ್ಯಾನ್ಸ್ ಮಾಡೋಕೆ ಆರಂಭಿಸಿದ್ದ… ಕಣ್ಣನ್ನು ಒಮ್ಮೆ ಕಿರಿದು ಮಾಡಿ ಮತ್ತೊಮ್ಮೆ ಅಗಲಿಸಿ ಎಲ್ಲರನ್ನು ನೋಡತೊಡಗಿದ್ದ.. ತನ್ನ ವಿಚಿತ್ರವಾದ ಕಂಠದಲ್ಲಿ ಬಾ ಕಂದ.. ಬಾ ಕಂದ ಎನ್ನ ತೊಡಗಿದ್ದ.. ಪೂಜಾರಿ ಒಬ್ಬೊಬ್ಬರನ್ನೇ ಕರೆದು ಕಷ್ಟಗಳನ್ನು ಹೇಳತೊಡಗಿದ್ದ.. ಅಲ್ಲಿದ್ದವರಿಗೆಲ್ಲಾ ಆಶ್ಚರ್ಯ… ಆದರೆ ಅಸಲಿಯತ್ತೇ ಬೇರೆ ಇತ್ತು… ಕಷ್ಟ ಕೇಳಿ ಪರಿಹಾರ ಕೊಡುತ್ತಿದ್ದ ದೇವಿಯ ಜೋಳಿಗೆ ತುಂಬ ತೊಡಗಿತ್ತು… ನೋಡ ನೋಡುತ್ತಲೇ ಅಲ್ಲಿ ಸಾವಿರಾರು ರೂಪಾಯಿ ಸಂಗ್ರಹವಾಗಿತ್ತು… ಅದು ದೇವರ ಹೆಸರಲ್ಲಿ ನಡೆಯುತ್ತಿದ್ದ ಭರ್ತಿ ಸುಲಿಗೆ… ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಹೇಳ್ತೀನಿ

( ಮುಂದುವರಿಯುತ್ತದೆ…)

  • ಕೆ.ಆರ್.ಬಾಬು

Leave A Reply

Your email address will not be published.