ಭಾನಾಮತಿ ರಹಸ್ಯ ಬಿಚ್ಚಿಟ್ಟು ಗಹಗಹಿಸಿ ನಕ್ಕಿದ್ದಳು ಆ ಹೆಣ್ಣು ಮಗಳು..! ಭಾಗ- 22

0

ಬಾಬಾ ಎಲ್ಲವನ್ನೂ ವಿವರಿಸಿದ್ದ… ಭಾನಾಮತಿಯನ್ನ ಹೇಗೆ ಮಾಡ್ತಾರೆ ಅನ್ನೋದರ ಬಗ್ಗೆ ನಾನು ತಿಳಿದುಕೊಂಡು ಆಗಿತ್ತು… ನನ್ನ ಪಕ್ಕದಲ್ಲೇ ಕೂತಿದ್ದ ಕುಂಬಾರನಿಗೆ ಪಟ್ಟಂತ ಒಂದು ಪ್ರಶ್ನೆ ಹೊಳೆದಿತ್ತು… ಅದೇನಪ್ಪ ಅಂದ್ರೆ ಕೆಡಕು ಮಾಡೋದಕ್ಕೆ ಭಾನಾಮತಿ ಅಂತಾರೆ… ಇದನ್ನ ತೆಗೆಯೋ ವಿದ್ಯೆಗೆ ಏನಂತ್ತಾರೆ ಬಾಬಾ ಅಂದಿದ್ದ.. ಬಾಬಾನ ಬಾಯಿಂದ ಆಗ ಉದುರಿತ್ತು ನೋಡಿ ಆ ಪದ. ಕೇನಾಮತಿ…ಹೌದು… ಬಾಬಾ ಹೇಳಿದಂತೆ ಅದನ್ನ ಕೇನಾಮತಿ ವಿದ್ಯೆ ಅಂತ ಹೇಳ್ತಾರೆ.. ನಾವು ಇದನ್ನೇ ಕಲ್ತಿರೋದು, ಯಾರಾದ್ರೂ ಭಾನಾಮತಿ ಮಾಡುದ್ರೆ ನಾವು ಅದನ್ನ ತೆಗಿತ್ತೀವಿ ಅಷ್ಟೆ ಅಂತೇಳೋ ಅನೇಕ ಬಾಬಾಗಳು ಇಲ್ಲಿದ್ದಾರೆ.. ಅಸಲಿ ಸತ್ಯ ಏನಪ್ಪ ಅಂದ್ರೆ ಮಾಡೋರು ಇವರೇ.. ತೆಗೆಯೋರು ಇವರೇ ಅನ್ನೋದು… ಕೇನಾಮತಿ ವಿದ್ಯೆ ಬಗ್ಗೆ ಮುಂದೆ ಹೇಳ್ತೀನಿ, ನಿಮಗೆಲ್ಲ ಈ ಕೈ ಮೇಲೆ ಬರೆ ಹೇಗೆ ಮೂಡುತ್ತೆ, ಬಟ್ಟೆ ಹೇಗೆ ಸುಡುತ್ತೆ ಇತ್ಯಾದಿ ಕೂತುಹಲಗಳಿಗೆ ಉತ್ತರ ಕೊಡ್ತೀನಿ ಕೇಳಿ…

ಅಂದಾಗೆ ನಾನು ಹುಲಿಕಲ್ ನಟರಾಜ್ ರವರ ಅಭಿಮಾನಿ… ಅವರು ಈ ಡೋಂಗಿ ಬಾಬಾಗಳ ಪವಾಡಗಳನ್ನ ಬಯಲು ಮಾಡ್ತಾರೆ.. ಅಷ್ಟೆ ಅಲ್ಲ, ಈ ಮೂಢ ಜನರ ಮೂಢನಂಬಿಕೆಯನ್ನ ಪವಾಡ ಬಯಲು ಅನ್ನೋ ಹೆಸ್ರಿನ ಕಾರ್ಯಕ್ರಮಗಳನ್ನ ಮಾಡಿ ಹೋಗಲಾಡಿಸೋ ಯತ್ನ ಮಾಡ್ತಾ ಇದ್ದಾರೆ.. ಅದೇ ರೀತಿ ಎಲ್ಲವೂ ಬಾಬಾಗಳ ಪವಾಡವಷ್ಟೆ.. ಅಂದಾಗೆ ಈ ಭಾನಾಮತಿ ಮಾಡೋರು ಬೇರೆ ಯಾರೂ ಅಲ್ಲ, ಕೆಲವೊಂದು ಸಮಯ ಸಂಧರ್ಬ ತಮಗೆ ತಾವೇ ಕೆಟ್ಟದನ್ನ ಮಾಡ್ಕೊಂಡು ಮತ್ತೊಂದರಿಂದ ತಪ್ಪಿಸಿಕೊಳ್ಲೋಕೆ ಭಾನಾಮತಿ ಆಟ ಆಡ್ತಾರೆ… ಅದಕ್ಕೆ ನನಗೆ ಇದೇ ಉತ್ತರ ಕರ್ನಾಟಕದಲ್ಲಿ ಸಿಕ್ಕಿದ್ದು ಓರ್ವ ಹೆಣ್ಣು ಮಗಳು…ಆಕೆಗೆ ಭಾನಾಮತಿ ಮಾಡಲಾಗಿತ್ತು ಅನ್ನೋ ಸುದ್ದಿ ಇತ್ತು.. ಅಂದಾಗೆ ಆಕೆ ಹೆಸ್ರು ಊರು ಬೇಡ ಬಿಡಿ… ಆಕೆಯನ್ನ ಭೇಟಿಯಾದ ನಾನು ಭಾನಾಮತಿ ಬಗ್ಗೆ ಕೇಳಿದ್ದೆ.. ತುಂಬಾ ಓದಿಕೊಂಡಿದ್ದ ಹುಡುಗಿ ಆಕೆ…ಏನಮ್ಮ ನಿನ್ನ ಕೈ ಮೇಲೆ ಬರೆ ಮೂಡ್ತಾವಂತೆ, ನಿನ್ನ ಮೇಲೆ ಯಾರೋ ಭಾನಾಮತಿ ಮಾಡಿದ್ದಾರಂತೆ.. ಇದೆಲ್ಲ ನಿಜವಾ… ನೋಡು ನಾನೊಬ್ಬ ಪತ್ರಕರ್ತ, ಅದೇನೆ ಇದ್ರು ಧೈರ್ಯವಾಗಿ ಹೇಳು ಅಂತ ಆಕೆಯ ಮನವೊಲಿಸಿದ್ದೆ.. ತುಂಬಾ ಪ್ರಯತ್ನದ ಬಳಿಕ ಆಕೆ ಹೇಳಿದ್ಲು ನೋಡಿ ಒಂದು ಸತ್ಯ….

ಆಕೆ ತುಂಬಾ ಚೆನ್ನಾಗಿ ಓದುತ್ತಿದ್ಲು.. ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳ ಹೆಚ್ಚಿಗೆ ಓದಿಸೋದು ಅಂದ್ರೆ ಪೋಷಕರಿಗೆ ಅಲರ್ಜಿ.. ಹುಡುಗಿ ಹೆಣ್ಣಾದ್ಲು ಅಂದ್ರೆ ಸಾಕು ಮದುವೆ ಮಾಡೋಕೆ ಗಂಡು ಹುಡುಕೋ ಜನ ಇಲ್ಲಿಯವರು… ಅದೇ ರೀತಿ ಆಕೆಗೂ ಮದುವೆ ಮಾಡೋಕೆ ಗಂಡು ಹುಡುಕಲಾಗಿತ್ತಂತೆ.. ಅವಳ ಇಷ್ಟ ಕಷ್ಟ ಯಾರಿಗೂ ಬೇಕಿರಲಿಲ್ಲ… ಇನ್ನು ಓದ್ಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದ ಹುಡುಗಿಗೆ ಮದುವೆ ಇಷ್ಟವಿರಲಿಲ್ಲ… ಹೆತ್ತವರಿಗೆ ಹೇಳಿದ್ರೂ ಕೇಳಲಿಲ್ಲ… ಬಂದೇ ಬಿಟ್ಟಿದ್ರು ಗಂಡಿನ ಕಡೆಯವರು.. ಆಗ ಆಕೆ ಏನು ಮಾಡಿದ್ಲು ಗೊತ್ತಾ…?

ಗೇರು ಬೀಜ ಅಂದ್ರೆ ಗೋಡಂಬಿ ಬೀಜ ಗೊತ್ತಲ್ಲ… ಹಸಿ ಬೀಜವನ್ನ ಗಿಡದಿಂದ ಕಿತ್ತು ತಂದವಳೆ ಅದರ ರಸವನ್ನ ಕೈ ಮೇಲೆ ಉಜ್ಜಿಕೊಂಡ್ಲು… ಕೆಂಪು ಬಣ್ಣದ ಬರೆಗಳು ಮೂಡಿಬಿಟ್ವು… ಅದನ್ನ ಹೆತ್ತವರಿಗೆ ತೋರ್ಸಿದ್ಲು.. ಅಕ್ಕಪಕ್ಕದವರಿಗೂ ತೋರಿಸಿದ್ಲು.. ಅಷ್ಟೆ ಎಲ್ರೂ ಭಾನಾಮತಿ ಅಂದ್ಕೊಂಡ್ರು… ಆ ವಿಚಾರ ಗಂಡಿನ ಕಡೆಯವರಿಗೆ ತಿಳೀತು.. ಅವ್ರು ಈಕೆಯ ಮನೆ ಕಡೆಯೂ ತಲೆ ಹಾಕಲಿಲ್ವಂತೆ.. ನೀವು ನಂಬ್ತೀರೋ ಬಿಡ್ತೀರೋ ಸ್ನೇಹಿತ್ರೆ ಇವತ್ತು ಆಕೆ ಧಾರವಾಡದಲ್ಲಿ ಸರ್ಕಾರಿ ನೌಕರಿಯಲ್ಲಿದ್ದಾಳೆ.

ಇನ್ನು ಚೆನ್ನಾಗಿರೋ ಮರವನ್ನ ಒಣಗಿಸಿ ಬಿಡಬಹುದು.. ಹೇಗೆ ಗೊತ್ತಾ.. ಆ ಮರದ ಬುಡಕ್ಕೆ ಒಂದು ಚೂರು ಪಾದರಸ ಅಂದ್ರೆ mercury.. ತಂದಾಕಿದ್ರೆ ಸಾಕು, ಎಂತ ಫಲಭರಿತ ಮರ ಕೂಡ ಕೆಲ ದಿನಗಳಲ್ಲೇ ಒಣಗಿ ಹೋಗುತ್ತದೆ.. ಇಲ್ಲವೇ ಮೈಲುತುತ್ತ ಅನ್ನೋ ವಿಷಬೇಜವನ್ನ ಮರದ ಬೇರಿಗೆ ಹೂತರು ಸಾಕು.. ಆ ಮರ ಒಣಗಿ ಹೋಗುತ್ತದೆ… ಬಟ್ಟೆ ಸುಡೋದು, ಕಲ್ಲು ಬೀಳೋದು ಎಲ್ಲವೂ ಕಿಡಿಗೇಡಿಗಳ ಕೆಲಸವಷ್ಟೆ.. ಯಾವ ಭಾನಾಮತಿಯೂ ಇಲ್ಲ ಬದನೆಕಾಯಿ ಭೂತವೂ ಇಲ್ಲ….ಭಾನಾಮತಿ ಅನ್ನೋದು ಶತ್ರುವಿಗೆ ತಿಳಿಯದೇ ಮಾಡೋ ಮಾನವನ ಕುಚೇಷ್ಟೆ ಅಷ್ಟೆ….ಭಾನಾಮತಿ ತೆಗೆಯಲು ಕೇನಾಮತಿ ಅನ್ನೋ ವಿದ್ಯೆ ಇದೆ ಅಂತ ಬಾಬಾ ಹೇಳಿದ್ದ ಆ ವಿದ್ಯೆ ಬಗ್ಗೆ ತಿಳಿಸ್ತೀನಿ ಮುಂದಿನ ಸಂಚಿಕೆಯಲ್ಲಿ…

(ಮುಂದುವರೆಯುತ್ತದೆ…)

  • ಕೆ.ಆರ್.ಬಾಬು

Leave A Reply

Your email address will not be published.