ಭಾನಾಮತಿ ವಶೀಕರಣದ ಬಗ್ಗೆ ಬೆಚ್ಚಿ ಬೀಳುವ ಮಾಹಿತಿ ನೀಡಿದ್ದ ಬಾಬಾ..! ನಾವು ಕೂತಲ್ಲೇ ಬೆಚ್ಚಿ ಬಿದ್ದಿದ್ವಿ..! ಭಾಗ-19

0

ಆ ಬಾಬಾ ಭಾನಾಮತಿ… ವಶೀಕರಣದ ಬಗ್ಗೆ ಹೇಳತೊಡಗಿದ್ದ…ನಾನು ಕೇಳಿಸಿಕೊಳ್ಳತೊಡಗಿದ್ದೆ… ವೀರಶೆಟ್ಟಿ ಕುಂಬಾರ ಅದನ್ನೆಲ್ಲ ಬರೆದು ಕೊಳ್ಳತೊಡಗಿದ್ದ. ಹೇಳಿ ಕೇಳಿ ಕುಂಬಾರ ಪತ್ರಕರ್ತ. ಅದರಲ್ಲೂ ಅನೇಕ ದಿನ ಪತ್ರಿಕೆಗಳಲ್ಲಿ ಕೆಲಸ ಮಾಡಿದವನು. ಹೀಗಾಗಿ ಆತನಿಗೆ ಯಾರು ಎಲ್ಲೇ ಮಾಹಿತಿ ಕೊಟ್ಟರು ಪೆನ್ನು ಪೇಪರ್ರು ಅರ್ಜೆಂಟಾಗಿ ಹೊರಬರುತ್ತಿತ್ತು. ಇದನ್ನು ಕಂಡ ಬಾಬಾ. ಸ್ವಾಮಿ ನಮ್ಮ ಬಗ್ಗೆ ಏನು ಕೆಟ್ಟದಾಗಿ ಬರಬೇಡಿ. ನಾನು ಯಾವ ಮಾಟ ಮಂತ್ರ ಮಾಡೋದಿಲ್ಲ. ಜನರಿಗೆ ಒಳ್ಳೆಯದನ್ನೇ ಮಾಡ್ತೀನಿ ಅಂತ ಹೇಳಿದ್ದ.

ದೇವರನ್ನೇ ಬೆದರಿಸಿ ಜೊತೆಯಲ್ಲಿ ಇಟ್ಟುಕೊಂಡಿರುವ ಇಂತಹ ಮಾಂತ್ರಿಕರು, ಬಾಬಾಗಳು ಪತ್ರಕರ್ತರನ್ನು ಕಂಡ್ರೆ ಬೆದರುತ್ತಾರೆ. ಕಾರಣ, ಎಲ್ಲಿ ತನ್ನ ಕಪಟ ಬಯಲು ಮಾಡಿ ಜನ ಬರದಂಗೆ ಮಾಡ್ತಾರೋ ಅನ್ನೋ ಭಯವುದು. ಕುಂಬಾರರಿಗೆ ಏನು ಬರೆದು ಕೊಳ್ಳಬೇಡಿ. ಸುಮ್ಮನೆ ಕೇಳಿಸಿಕೊಳ್ಳಿ ಅಂತ ಸನ್ನೆ ಮಾಡಿದೆ.. ಅದರಂತೆ ಅವರು ಪೆನ್ನು ಪೇಪರ್ ಎತ್ತಿಟ್ರು. ಆಗ ಶುರು ಮಾಡಿದ ನೋಡಿ ಬಾಬಾ ಭಾನಾಮತಿಯ ವಶೀಕರಣದ ಮ್ಯಾಟ್ರು. ಸಾರ್..

ಈ ಭಾನಾಮತಿ ವಿದ್ಯೆಯನ್ನು ಕರಗತ ಮಾಡಿಕೊಳ್ಳೋದು ಸುಲಭದ ಮಾತೇನಲ್ಲ… ಅದು ಅಷ್ಟು ಸಲೀಸಾಗಿ ಕರಗತವೂ ಆಗೋದಿಲ್ಲ.. ಈ ವಿದ್ಯೆಯನ್ನು ಗುರುವಿನ ಮೂಲಕ ಕಲಿಯಬೇಕು ಅಮಾವಾಸ್ಯೆಯ ರಾತ್ರಿಗಳಲ್ಲಿ ನಿರ್ವಣಾ ಸ್ಥಿತಿಗಳಲ್ಲಿ ಸ್ಮಶಾನದೊಳಗೆ ಕೂತು ಶಾಸ್ತ್ರೋಕ್ತವಾಗಿ ಹಂತ ಹಂತವಾಗಿ ಮಾಡಬೇಕಾದ ಸಾಧನೆಯಿದು… ಭಾನಾಮತಿ ಕಲಿಯೋಕೆ ಗುರುವಿನ ಬಳಿ ಬಂದವನು ಶ್ರದ್ಧೆ ಭಕ್ತಿ ಹಾಗೂ ಅಚಲ ವಿಶ್ವಾಸ ಉಳ್ಳವರಾಗಿರಬೇಕು. ಅನೇಕ ಕಷ್ಟಕರ ವಿಧಾನಗಳನ್ನು ಪಾಲಿಸಲು ಸಿದ್ಧನಿರಬೇಕು ಹಾಗೂ ತನ್ನ ಮಲವನ್ನು ತಾನೇ ತಿನ್ಬೇಕು ಅಂದಿದ್ದ ಬಾಬಾ. ನಿಜಕ್ಕೂ ಅಸಹ್ಯ ಅನ್ನಿಸಿದ್ದು ಆಗಲೇ. ಆದ್ರೂ ನಾವು ಮಧ್ಯದಲ್ಲಿ ಅಡ್ಡಬಾಯಿ ಹಾಕುವಂತಿರಲಿಲ್ಲ… ಎಲ್ಲಿ ಮಾಹಿತಿ ಕೊಡದೇ ಎಬ್ಬಿಸಿ ಕಳುಹಿಸುತ್ತಾನೋ ಅನ್ನೋ ಭಯ ನಮಗೆ.

ಹೀಗಾಗಿ ಅವನು ಹೇಳಿದ್ದನ್ನ ಸುಮ್ಮನೆ ಕೇಳಿಸಿಕೊಂಡು ಕೂತ್ವಿ… ತನ್ನ ಮಲವನ್ನು ತಾನೇ ತಿನ್ನುವುದಷ್ಟೆ ಅಲ್ಲ, ಕೆಲವೊಮ್ಮೆ ಮೈ ತೊಳೆದು ಬಚ್ಚಲ ಕಿಂಡಿಯಿಂದ ಹೊರ ಬರುವ ನೀರನ್ನು ಹಿಡಿದುಕೊಂಡು ಕುಡಿಯಬೇಕಿದಂತೆ. ಮೌನವ್ರತ ಮಾಡಬೇಕಂತೆ. ಎಂತಹ ಕೊರೆಯುವ ಚಳಿಯೇ ಇರಲಿ. ಕೊರೆಯುವ ನೀರಿನಲ್ಲಿ ಕತ್ತಿನವರೆಗೂ ಮುಳುಗಿ ನಿಂತು ಮಂತ್ರ ಪಠಿಸಬೇಕಂತೆ. ಶಕ್ತಿ ವಶವಾಗುವ ತನಕ ಏನೇನು ಆಚರಣೆಗಳಿವೆಯೋ ಅವೆಲ್ಲವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ದೇವಿಯನ್ನು ಸಂತೃಪ್ತಿಗೊಳಿಸಬೇಕು. ಕೆಲ ಅಗತ್ಯ ಪೂಜೆಗಳಿಗೆ ಪ್ರಾಣಿ ಬಲಿಯೂ ನಡೆಯಬೇಕು. ಹೀಗೆ ವಿಧಿವಿಧಾನಗಳಿಂದ ಭಾನಾಮತಿ ವಿದ್ಯೆಯನ್ನು ವಶೀಕರಣ ಮಾಡಿಕೊಳ್ತಾರೆ ಅಂದಿದ್ದ ಬಾಬಾ.ಇನ್ನು ಈ ಬಾಬಾ ಮತ್ತೊಂದು ಇಂಟ್ರೆಸ್ಟಿಂಗ್ ಅಂಶವನ್ನು ಹೇಳಿದ್ದ. ಭಾನಾಮತಿ ಮಾಂತ್ರಿಕತೆಯ ವಂಶವಾಹಿ ಬೇರು ಇಲ್ಲದವರಿಗೆ ಒಲಿಯುವುದು ಕಷ್ಟವಂತೆ. ಈ ವಿದ್ಯೆ ವಂಶಪಾರಂಪರ್ಯ ವಾಗಿ ಅಂದ್ರೆ ತಂದೆಯಿಂದ ಮಗನಿಗೆ ಹಸ್ತಾಂತರವಾಗುತ್ತದೆ. ಈ ಮನೆತನಕ್ಕೆ ಸೇರದ ಇತರರಿಗೆ ಕಲಿಯುವ ಅವಕಾಶ ಇರುವುದೇ ಇಲ್ಲವಂತೆ.

ಇನ್ನು ಈ ಭಾನಾಮತಿ ಕಲಿತವರಲ್ಲಿ ಹಿಂದೂಗಳಿದ್ದಾರೆ. ಮುಸ್ಲಿಮರಿದ್ದಾರೆ… ಗಂಡಸರಿದ್ದಾರೆ… ಹೆಂಗಸರಿದ್ದಾರೆ… ಭಾನಾಮತಿ ಮಾಡುವ ವ್ಯಕ್ತಿಗೆ ಅದನ್ನು ತೆಗೆಯುವ, ನಿಷ್ಕ್ರಿಯಗೊಳಿಸುವ ಕಲೆಯೂ ಗೊತ್ತಿರುತ್ತಂತೆ..ಈ ಭಾನಾಮತಿ ಶಕ್ತಿಯನ್ನು ಬೇರೊಬ್ಬರಿಗೆ ಕೇಡುಂಟು ಮಾಡೋಕೆ, ಕಷ್ಟ ನಷ್ಟಗಳನ್ನು ಉಂಟು ಮಾಡೋಕೆ ಬಳಸಲಾಗುತ್ತದಂತೆ… ಭಾನಾಮತಿ ಮಾಡಬಲ್ಲ ವ್ಯಕ್ತಿ ಹಣ ಸಂಪಾದನೆಗಾಗಿ ತನ್ನಿಷ್ಟದಂತೆ ಒಬ್ಬನ ಮೇಲೆ ಭಾನಾಮತಿ ಮಾಡಿ ಹಣ ತಿಂತಾರಂತೆ…ಇನ್ನು ಈ ಭಾನಾಮತಿ ಮಾಡೋಕೆ ಬೇಕಾಗುವ ವಿಧಿ ವಿಧಾನಗಳಂತೂ ಕ್ರೂರ ಮತ್ತು ಘೋರ..! ಎಂತಹ ಗಂಡೆದೆಯವರನ್ನು ಒಂದು ನಿಮಿಷ ನಡುಗಿಸಿ ನೀರಾಗಿಸಿ ಬಿಡುತ್ತೆ…ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ…

( ಮುಂದುವರಿಯುತ್ತದೆ…)

  • ಕೆ.ಆರ್.ಬಾಬು
Leave A Reply

Your email address will not be published.