ಸಿದ್ದಪ್ಪಾಜಿಗೂ ಮಾಂತ್ರಿಕರಿಗೂ ಏನು ನಂಟು..? ದೇಹಕ್ಕೆ ಕತ್ತಿ ಬೀಸಿದರೆ ಠಣ್ ಎಂಬ ಶಬ್ದ ಬರುತ್ತೆ. ರಕ್ತ ತೊಟ್ಟಿಕ್ಕುವುದಿಲ್ಲ..!? ಭಾಗ-4

0

ಕೊಳ್ಳೇಗಾಲದ ಸುತ್ತಮುತ್ತ ವಾಸಿಸುವ ಮಾಂತ್ರಿಕರ ಮತ್ತು ಮೋಡಿಗಾರರ ಮನೆಯೊಳಗಿನ ದೇವರ ಕೋಣೆಯಲ್ಲಿ ಸಿದ್ದಪ್ಪಾಜಿ ಗುರುಗಳ ಫೋಟೋ ಇರುತ್ತೆ. ಈ ಸಿದ್ದಪ್ಪಾಜಿಗೂ ಮಾಂತ್ರಿಕರಿಗೂ ಏನು ನಂಟು ಅಂತ ಕೇಳಿದ್ರೆ ಅದಕ್ಕೊಂದು ಕಥೆ ಹೇಳುತ್ತಾರೆ.

ಕೊಳ್ಳೇಗಾಲದ ಮೋಡಿಗಾರರಿಗೆ ಸಿದ್ದಪ್ಪಾಜಿ ಮಾಂತ್ರಿಕ ಶಕ್ತಿಯ ಗುರು. ಇವರ ಮನೆ ದೇವರು ಕೂಡ ಅವರೇ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮಾರಳ್ಳಿ ಎಂಬ ಗ್ರಾಮದಲ್ಲಿ ಬಾಚಿ ಬಸವಣ್ಣ ಚಾರಿ ಹಾಗೂ ಮುದ್ದಮ್ಮ ದಂಪತಿಗಳು ವಾಸವಿದ್ದರು. ಇವರ ಏಳನೇ ಮಗ ಕೆಂಪಾಚಾರಿ. ಈ ಮಗು ಹುಟ್ಟಿದ ನಂತರ ಅವರು ಆಗರ್ಭ ಶ್ರೀಮಂತರಾದರಂತೆ.

ಈ ಮಗುವನ್ನೆ ಮಂಟೇಸ್ವಾಮಿಗಳು ಭಿಕ್ಷೆ ಯನ್ನಾಗಿ ಕೇಳಿದ್ದರು. ಕೆಂಪಾಚಾರಿಯನ್ನು ಭಿಕ್ಷೆ ಯನ್ನಾಗಿ ಕೊಡಲು ತಂದೆತಾಯಿ ಒಪ್ಪಲಿಲ್ಲ. ಇದರಿಂದ ಸಿಟ್ಟಾದ ಧರೆಗುರು ಮಂಟೇ ಸ್ವಾಮಿ ಅವರಿಗೆ ಶಾಪವನ್ನು ಕೊಡುತ್ತಾರೆ. ಶ್ರೀಮಂತಿಕೆ ಹೋಗಿ ಬಡತನ ಕವಿಯುತ್ತದೆ. ಕೈ ಕಾಲು ಮುರಿದು ಅಂಗವಿಕಲತೆ ಬಾಧಿಸುತ್ತದೆ.

ಎಪ್ಪತ್ತೇಳು ಕುಲುಮೆಗಳ ಒಡೆಯ ಕೆಂಪಾಚಾರಿ ಮಂಟೇಸ್ವಾಮಿಗಳ ವಿರುದ್ಧ ದುರಹಂಕಾರವಾಗಿ ಮಾತನಾಡುತ್ತಾರಂತೆ. ತಮ್ಮ ದಿವ್ಯ ಶಕ್ತಿಯಿಂದ ಮಂಟೇಸ್ವಾಮಿಗಳು ಕೆಂಪಾಚಾರಿಯನ್ನು ಮಂಕು ಕವಿಯುವಂತೆ ಮಾಡಿ ಹನ್ನೆರಡು ವರ್ಷಗಳ ಕಾಲ ಕಾಳಿಂಗನ ಕಲ್ಲು ಗವಿಯಲ್ಲಿ ಕೂಡಿ ಹಾಕ್ತಾರಂತೆ. ಮುಂದೆ ಇವರೇ ಮಂಟೇಸ್ವಾಮಿಗಳ ಉತ್ತರಾಧಿಕಾರಿಯಾಗಿ ದಳವಾಯಿ ಸಿದ್ದಪ್ಪಾಜಿ ಯಾಗಿ ಪರಿವರ್ತನೆಯಾದರೂ ಅಂತ ಹೇಳಲಾಗುತ್ತೆ. ಮುಂದೆ ತಮ್ಮ ಅಗಾಧವಾದ ಮಾಂತ್ರಿಕ ಶಕ್ತಿಯಿಂದ ಪಾಳೇಗಾರರನ್ನು ಗೆದ್ದು ಕಬ್ಬಿಣದ ಭಿಕ್ಷೆಯನ್ನು ತರ್ತಾರೆ. ಇದೇ ಸಿದ್ದಪ್ಪಾಜಿಯ ಶಿಷ್ಯರು ಕೊಳ್ಳೇಗಾಲದ ಸುತ್ತ ಇದ್ದುದ್ದಕ್ಕೆ ಕುರುಹುಗಳಿವೆ .

ಆ ಸಿದ್ಧ ಯೋಗಿಗಳು ಅಷ್ಟ ಸಿದ್ಧಿ ಪಡೆದಿದ್ದರು ಎನ್ನಲಾಗುತ್ತದೆ. ಅಷ್ಟ ಸಿದ್ದಿಗಳಲ್ಲಿ ವಜ್ರೋಳ್ಳಿ ಸಿದ್ಧಿ ಹಾಗೂ ಅಮ್ತೋಳಿ ಸಿದ್ಧಿ ತುಂಬಾ ಬಲಿಷ್ಠವಾದ ವಿದ್ಯೆಗಳು. ವಜ್ರೋಳಿ ಸಿದ್ಧಿ ಎಂದರೆ ಧ್ಯಾನ ತಪ ಹೋಮ ಹವನಗಳ ಮುಖಾಂತರ ಶಕ್ತಿ ಪಡೆದು ದೇಹವನ್ನು ವಜ್ರದಂತೆ ಕಠಿಣ ಮಾಡಿಕೊಳ್ಳೋದು. ನಾಥ ಪರಂಪರೆಯ ಗೋರಕನಾಥರು ಈ ವಜ್ರೋಳಿ ಸಿದ್ಧಿಯನ್ನು ಸಿದ್ಧಿಸಿಕೊಂಡಿದ್ದಾರಂತೆ. ಇವರಿಗೆ ಕತ್ತಿ ಬೀಸಿದರೆ ಠಣ್ ಎಂಬ ಶಬ್ದ ಬರುತ್ತಿತ್ತಂತೆ ಹೊರತು ಒಂದು ತೊಟ್ಟು ರಕ್ತವೂ ಬರುತ್ತಿರಲಿಲ್ಲವಂತೆ.


ಇನ್ನು ಅಮ್ರೇಲಿ ಸಿದ್ಧಿ ಎಂದರೆ ಇಡೀ ದೇಹ ಗಾಳಿಯಂತೆ ಆಗುತ್ತದಂತೆ ಅಲ್ಲಿ ದೇಹ ವಿರುವುದು ಕಣ್ಣಿಗೆ ಕಂಡರೂ ಅದನ್ನು ಮುಟ್ಟೋಕೆ ಪರರಿಂದ ಸಾಧ್ಯವಾಗುವುದಿಲ್ಲ ಈ ಸಿದ್ಧಿಯನ್ನು ಪಡೆದವರ ಪೈಕಿ ಅಲ್ಲಮ ಪ್ರಭುಗಳು ಒಬ್ಬರು ಎಂದು ಹೇಳಲಾಗುತ್ತದೆ. ನಾಥ ಪರಂಪರೆ ಹಾಗೂ ಸಿದ್ಧ ಪರಂಪರೆಯ ಒಕ್ಕಲು ಕೊಳ್ಳೇಗಾಲ ಹಾಗೂ ಚಾಮರಾಜನಗರ ಸುತ್ತ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದಾರೆ. ಈ ಪರಂಪರೆಯ ಕವಲುಗಳೇ ನಾವು ಅಂತಾರೆ ಇಲ್ಲಿನ ಮಾಂತ್ರಿಕರು.

ಅಂದಿನ ಕಾಲದಲ್ಲಿ ಸಿದ್ಧರ ಕವಲುಗಳು ಕೊಳ್ಳೇಗಾಲದಲ್ಲಿ ಇದ್ದವೋ ಏನೋ..? ಆದರೆ ಈಗ ಅಂತಹ ಮಾಂತ್ರಿಕ ಶಕ್ತಿಯ ಪವಾಡ ಪುರುಷರು ಅಲ್ಲಿಲ್ಲ. ಇದ್ದರೂ ಅವರು ಕಣ್ಣಿಗೆ ಬೀಳೋದಿಲ್ಲ. ಹೊಟ್ಟೆಪಾಡಿಗಾಗಿ ನಾನೊಬ್ಬ ಮಾಂತ್ರಿಕ ಮಾಟ ಮಾಡಬಲ್ಲೆ ಯಂತ್ರ ಕಟ್ಟಬಲ್ಲೆ ದೆವ್ವ ಭೂತ ಪ್ರೇತ ಪಿಶಾಚಿಗಳನ್ನು ಓಡಿಸಬಲ್ಲೆ ಅಂತ ಹೇಳ್ಕೊಂಡು ಅಲ್ಲಲ್ಲಿ ನೇಮ್ ಬೋರ್ಡ್ ಹಾಕ್ಕೊಂಡು ಕುಳಿತವರನ್ನು ನಾವು ಕೊಳ್ಳೇಗಾಲದ ಬೀದಿ ಬೀದಿಗಳಲ್ಲಿ ಕಾಣಬಹುದು. ಈ ಮಾಂತ್ರಿಕರು ಭಯವನ್ನು ಹೇಗೆ ಬಂಡವಾಳ ಮಾಡಿಕೊಳ್ತಾರೆ ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸಿ ಕೊಡ್ತೀನಿ.

(ಮುಂದುವರಿಯುವುದು….)

  • ಕೆ.ಆರ್. ಬಾಬು

Leave A Reply

Your email address will not be published.