ಪಿತೃ ಪಕ್ಷ ಯಾವಾಗ ಪ್ರಾರಂಭ: ದಿನಾಂಕ, ಪಿತೃ ತರ್ಪಣ, ಶ್ರಾದ್ಧ ನಿಯಮಗಳೇನು ?

Pitru Paksha 2025: ಹಿಂದೂ ಧರ್ಮದಲ್ಲಿ ಪಿತೃ ಪಕ್ಷವನ್ನು ಬಹಳ ಮುಖ್ಯವಾದ ಸಮಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಪೂರ್ವಜರನ್ನು ಸ್ಮರಿಸಿ ಅವರಿಂದ ಆಶೀರ್ವಾದವನ್ನು ಪಡೆಯಲಾಗುತ್ತದೆ.

ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುವ ಸಲುವಾಗಿ ಶ್ರಾದ್ಧ ಮತ್ತು ತರ್ಪಣಗಳನ್ನು ನೀಡಲಾಗುತ್ತದೆ. ಒಂದು ಪಕ್ಷದ ಅವಧಿಯಲ್ಲಿ ಪಿತೃ ಪಕ್ಷವನ್ನು ಆಚರಿಸಲಾಗುತ್ತದೆ.

ಈ ಸಮಯದಲ್ಲಿ ಪೂರ್ವಜರು ಭೂಮಿಗೆ ಬಂದು ಕಷ್ಟಗಳನ್ನೆಲ್ಲಾ ದೂರಮಾಡುತ್ತಾರೆ ಎಂಬ ನಂಬಿಕೆಯಿದೆ.

ಆದ್ದರಿಂದ ಪ್ರತಿಯೊಬ್ಬರು ಪಿತೃ ಪಕ್ಷವನ್ನು ಬಹಳ ಶೃದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಹಾಗಾದರೆ ಈ ವರ್ಷದ ಪಿತೃ ಪಕ್ಷ ಯಾವ ದಿನದಿಂದ ಪ್ರಾರಂಭವಾಗುತ್ತದೆ ಹಾಗೂ ಆ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ತಿಳಿಯೋಣ.

ಪಿತೃ ಪಕ್ಷ ಯಾವಾಗ ಪ್ರಾರಂಭ?

ಹಿಂದೂ ಪಂಚಾಗದ ಪ್ರಕಾರ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆ ತಿಥಿಯಿಂದ ಪ್ರಾರಂಭವಾಗುತ್ತದೆ ಮತ್ತು ಮಹಾಲಯ ಅಮವಾಸ್ಯೆ ಅಥವಾ ಸರ್ವ ಪಿತೃ ಅಮವಾಸ್ಯೆಯಂದು ಮುಕ್ತಾಯವಾಗುತ್ತದೆ. ಈ ವರ್ಷದ ಪಿತೃ ಪಕ್ಷವು ಸೆಪ್ಟೆಂಬರ್‌ 7 ಭಾನುವಾರದಂದು ಪ್ರಾರಂಭವಾಗುತ್ತದೆ ಹಾಗೂ ಸೆಪ್ಟೆಂಬರ್‌ 21 ಭಾನುವಾರದಂದು ಕೊನೆಗೊಳ್ಳುತ್ತದೆ.

ಇದನ್ನೂ ಓದಿ: ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವುದೇಕೆ ? ಗಂಟೆಯ ಶಬ್ದಕ್ಕಿರುವ ಮಹತ್ವವೇನು ?

ತರ್ಪಣ ಮತ್ತು ಶ್ರಾದ್ಧ ನಿಯಮಗಳೇನು?

ದಿನಾಂಕ: ಯಾವಾಗಲೂ ಶ್ರಾದ್ಧವನ್ನು ಪೂರ್ವಜರ ಪುಣ್ಯತಿಥಿಯಂದು ಮಾಡಲಾಗುತ್ತದೆ. ಒಂದು ವೇಳೆ ನಿಮಗೆ ನಿಮ್ಮ ಪೂರ್ವಜರ ಪುಣ್ಯ ತಿಥಿ ನೆನಪಿಲ್ಲದಿದ್ದರೆ, ಆಗ ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬಹುದಾಗಿದೆ.

ತರ್ಪಣ: ಪಿತೃ ಪಕ್ಷದ ಆಚರಣೆಯಲ್ಲಿ ಪಿತೃಗಳಿಗೆ ನೀರು, ಎಳ್ಳು ಮುಂತಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ.

ದಾನ: ಪಿತೃ ಪಕ್ಷದ ಸಮಯದಲ್ಲಿ ದಾನ ಮಾಡುವುದಕ್ಕೆ ಬಹಳ ಮಹತ್ವವಿದೆ. ಈ ಸಮಯದಲ್ಲಿ ಅಗತ್ಯವಿರುವವರಿಗೆ ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ತೃಪ್ತಿಯಾಗುತ್ತದೆ.

ಆಹಾರ: ಈ ಸಮಯದಲ್ಲಿ ಮನೆಯಲ್ಲಿಯೇ ತಯಾರಿಸಿದ ಆಹಾರಗಳನ್ನು ಸೇವಿಸಬೇಕು.

ಸ್ಥಳ: ಪಿತೃ ಪಕ್ಷದ ಆಚರಣೆಯನ್ನು ಕೆಲವರು ತಮ್ಮ ಮನೆಯಲ್ಲಿಯೇ ಮಾಡಿದರೆ ಇನ್ನು ಕೆಲವರು ಪುಣ್ಯ ಕ್ಷೇತ್ರಗಳಲ್ಲಿ ಮಾಡುತ್ತಾರೆ.

ಪಿತೃ ಪಕ್ಷದ ಸಮಯದಲ್ಲಿ ಏನು ಮಾಡಬಾರದು?

ಪಿತೃ ಪಕ್ಷದ ಸಮಯದಲ್ಲಿ ಮದುವೆ, ಉಪನಯನ, ಹೊಸ ಮನೆ ಗೃಹಪ್ರವೇಶದಂಹ ಶುಭ ಕಾರ್ಯಗಳನ್ನು ಮತ್ತು ಮನೆ ಬದಲಾವಣೆ, ಹೊಸ ಹೂಡಿಕೆ, ನಿವೇಶನ ಖರೀದಿ, ಹೊಸ ವ್ಯಾಪಾರ, ಉದ್ಯಮ ಮುಂತಾದ ಹೊಸ ಯೋಜನೆಗಳನ್ನು ಮಾಡಬಾರದು.

ಏಕೆಂದರೆ ಈ ಸಮಯವು ಪೂರ್ವಜರನ್ನು ಸ್ಮರಿಸುವ ಸಮಯವಾಗಿದೆ. ಧೂಮಪಾನ, ಮಧ್ಯಪಾನ ಮಾಡಬಾರದು. ಮರಗಳನ್ನು ಕಡಿಯುವುಂತಹ ಕೆಲಸಗಳನ್ನು ಸಹ ಈ ಸಮಯದಲ್ಲಿ ಮಾಡಬಾರದು.

ಇದನ್ನೂ ಓದಿ: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ

(when will Pitru Paksha 2025 starts know the date tarpan and shraadh rituals)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories