KL Rahul Latest Record : 11 ರಾಷ್ಟ್ರಗಳ ವಿರುದ್ಧ ಟಿ20 ಅರ್ಧಶತಕ; ಕ್ರಿಕೆಟ್ ಚರಿತ್ರೆಯಲ್ಲೇ ಅಪರೂಪದ ದಾಖಲೆ ಬರೆದ ಕೆ.ಎಲ್ ರಾಹುಲ್

ಬೆಂಗಳೂರು: KL Rahul Latest Record : ಕನ್ನಡಿಗ ಕೆ.ಎಲ್ ರಾಹುಲ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 11 ಬೇರೆ ಬೇರೆ ದೇಶಗಳ ವಿರುದ್ಧ ಅರ್ಧಶತಕ ಬಾರಿಸಿದ ಭಾರತದ ಮೊದಲ ಆಟಗಾರ ಎಂಬ ದಾಖಲೆಗೆ ರಾಹುಲ್ ಪಾತ್ರರಾಗಿದ್ದಾರೆ.

ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅರ್ಧಶತಕ ದಾಖಲಿಸುವ ಮೂಲಕ ರಾಹುಲ್ ಈ ವಿಶ್ವದಾಖಲೆ ನಿರ್ಮಿಸಿದರು. ಇದರೊಂದಿಗೆ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಟ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಕ್ರಿಕೆಟ್’ನಲ್ಲಿ ರಾಹುಲ್ ಅರ್ಧಶತಕ ದಾಖಲಿಸಿದಂತಾಗಿದೆ. ಇದರಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಬಾರಿಸಿದ ಎರಡು ಶತಕಗಳು ಸೇರಿವೆ.

ಈ ಪೈಕಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ತಲಾ 3 ಟಿ20 ಅರ್ಧಶತಕಗಳನ್ನು ಬಾರಿಸಿರುವ ರಾಹುಲ್, ಇಂಗ್ಲೆಂಡ್ ಮತ್ತು ಅಪ್ಘಾನಿಸ್ತಾನ ವಿರುದ್ಧ ತಲಾ ಎರಡು ಹಾಗೂ ಐರ್ಲೆಂಡ್, ಸ್ಕಾಟ್ಲೆಂಡ್, ಬಾಂಗ್ಲಾದೇಶ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಒಂದು ಅರ್ಧಶತಕ ಗಳಿಸಿದ್ದಾರೆ.

ಇದುವರೆಗೆ ಒಟ್ಟು 14 ರಾಷ್ಟ್ರಗಳ ವಿರುದ್ಧ ಟಿ20 ಕ್ರಿಕೆಟ್ ಆಡಿರುವ ರಾಹುಲ್ ಪಾಕಿಸ್ತಾನ, ಜಿಂಬಾಬ್ವೆ ಮತ್ತು ಹಾಂಕಾಂಗ್ ವಿರುದ್ಧ ಅರ್ಧಶತಕ ಗಳಿಸಿಲ್ಲ. ಉಳಿದಂತೆ 11 ರಾಷ್ಟ್ರಗಳ ವಿರುದ್ಧ ಅರ್ಧಶತಕ ಸಿಡಿಸಿದ್ದಾರೆ. 2016ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಪಂದ್ಯದ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ರಾಹುಲ್ ಚೊಚ್ಚಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿದ್ದರು. ನಂತರ ಭಾರತ ಪರ ಒಟ್ಟು 65 ಟಿ20 ಪಂದ್ಯಗಳನ್ನಾಡಿರುವ ರಾಹುಲ್ ಎರಡು ಶತಕ ಹಾಗೂ 19 ಅರ್ಧಶತಕಗಳ ನೆರವಿನಿಂದ 39.24ರ ಸರಾಸರಿಯಲ್ಲಿ 2080 ರನ್ ಗಳಿಸಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೆ.ಎಲ್ ರಾಹುಲ್ ಗಳಿಸಿರುವ ಅರ್ಧಶತಕಗಳು
110* Vs ವೆಸ್ಟ್ ಇಂಡೀಸ್ (ಲಾಡರ್’ಹಿಲ್, 2016)
71 Vs ಇಂಗ್ಲೆಂಡ್ (ನಾಗ್ಪುರ, 2017)
61 Vs ಶ್ರೀಲಂಕಾ (ಕಟಕ್, 2017)
89 Vs ಶ್ರೀಲಂಕಾ (ಇಂದೋರ್, 2017)
70 Vs ಐರ್ಲೆಂಡ್ (ಡುಬ್ಲಿನ್, 2018)
101* Vs ಇಂಗ್ಲೆಂಡ್ (ಮ್ಯಾಂಚೆಸ್ಟರ್, 2018)
50 Vs ಆಸ್ಟ್ರೇಲಿಯಾ (ವಿಶಾಖಪಟ್ಟಣ, 2019)
52 Vs ಬಾಂಗ್ಲಾದೇಶ (ನಾಗ್ಪುರ, 2019)
62 Vs ವೆಸ್ಟ್ ಇಂಡೀಸ್ (ಹೈದರಾಬಾದ್, 2019)
91 Vs ವೆಸ್ಟ್ ಇಂಡೀಸ್ (ಮುಂಬೈ, 2019)
54 Vs ಶ್ರೀಲಂಕಾ (ಪುಣೆ, 2020)
56 Vs ನ್ಯೂಜಿಲೆಂಡ್ (ಆಕ್ಲೆಂಡ್, 2020)
57* Vs ನ್ಯೂಜಿಲೆಂಡ್ (ಆಕ್ಲೆಂಡ್, 2020)
51 Vs ಆಸ್ಟ್ರೇಲಿಯಾ (ಕ್ಯಾನ್’ಬೆರಾ, 2020)
69 Vs ಅಫ್ಘಾನಿಸ್ತಾನ (ಅಬುಧಾಬಿ, 2021)
50 Vs ಸ್ಕಾಟ್ಲೆಂಡ್ (ದುಬೈ, 2021)
54* Vs ನಮೀಬಿಯಾ (ದುಬೈ, 2021)
65 Vs ನ್ಯೂಜಿಲೆಂಡ್ (ರಾಂಚಿ, 2021)
62 Vs ಅಫ್ಘಾನಿಸ್ತಾನ (ದುಬೈ, 2022)
55 Vs ಆಸ್ಟ್ರೇಲಿಯಾ (ಮೊಹಾಲಿ, 2022)
51 Vs ದಕ್ಷಿಣ ಆಫ್ರಿಕಾ (ತಿರುವನಂತಪುರ, 2022)

ಇದನ್ನೂ ಓದಿ : Jasprit Bumrah out of T20 World Cup : ಟಿ20 ವಿಶ್ವಕಪ್’ನಿಂದ ಜಸ್‌ಪ್ರೀತ್ ಬುಮ್ರಾ ಔಟ್, ಭಾರತಕ್ಕೆ ಸಿಡಿಲಾಘಾತ

ಇದನ್ನೂ ಓದಿ : KL Rahul: ಟಫ್ ಪಿಚ್‌ನಲ್ಲಿ ಟೀಮ್ ಇಂಡಿಯಾವನ್ನು ಗೆಲ್ಲಿಸಿದ್ರೂ ರಾಹುಲ್ ಮೇಲೆ ಟೀಕಾಸ್ತ್ರ, ಟ್ರೋಲ್‌ಗಳ ಸುರಿಮಳೆ

IND Vs SA KL Rahul Latest Record

Comments are closed.