India Vs Bangladesh: ನಾಳೆ ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ ನಿರ್ಣಾಯಕ ಪಂದ್ಯ, ಕೆ.ಎಲ್ ರಾಹುಲ್‌ಗೆ ಲಾಸ್ಟ್ ಚಾನ್ಸ್ ?

ಅಡಿಲೇಡ್: India Vs Bangladesh : ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿ ತನ್ನ 4ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ನಾಳೆ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಡಿಲೇಡ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಭಾರತಕ್ಕೆ ಮಹತ್ವದ್ದಾಗಿದೆ. ಸೂಪರ್-12 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಲೀಗ್ ಪಂದ್ಯದಲ್ಲಿ ಸೋತಿದ್ದ ಭಾರತ, ಗ್ರೂಪ್-2ರ ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಸೆಮಿಫೈನಲ್ ತಲುಪಬೇಕಾದರೆ ಕನಿಷ್ಠ 6 ಅಂಕಗಳ ಅವಶ್ಯಕತೆಯಿದ್ದು, ಮುಂದಿನ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಗೆಲುವು ಅನಿವಾರ್ಯ. ಆದರೆ 6 ಅಂಕಗಳು ಸಿಕ್ಕಿದ್ರೂ ಸೆಮಿಫೈನಲ್ ಸ್ಥಾನ ಖಚಿತವಿಲ್ಲ. ಕಾರಣ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕೂಡ ರೇಸ್’ನಲ್ಲಿದೆ. ಹೀಗಾಗಿ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ಬುಧವಾರ ಬಾಂಗ್ಲಾದೇಶ ವಿರುದ್ಧ ಪಂದ್ಯವಾಡಲಿರುವ ಟೀಮ್ ಇಂಡಿಯಾ, ನವೆಂಬರ್ 6ರಂದು ನಡೆಯುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.

ಬಾಂಗ್ಲಾದೇಶ ವಿರುದ್ಧ ಅಡಿಲೇಡ್ ಮೈದಾನದಲ್ಲಿ ಭಾರತವೇ ಗೆಲ್ಲುವ ಫೇವರಿಟ್. ಅದರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ. ಆದರೆ ಚಿಂತೆಗೆ ಕಾರಣವಾಗಿರುವುದು ಉಪನಾಯಕ ಕೆ.ಎಲ್ ರಾಹುಲ್ ಅವರ ಕಳಪೆ ಫಾರ್ಮ್. ಕಳೆದ ಮೂರು ಪಂದ್ಯಗಳಲ್ಲಿ ರಾಹುಲ್ 4, 9, 9 ರನ್ನಿಗೆ ಔಟಾಗಿದ್ದಾರೆ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯ ರಾಹುಲ್ ಅವರಿಗೆ ಕೊನೆಯ ಅವಕಾಶ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಹುಲ್ ಬದಲು ಯುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಅವರನ್ನು ಆರಂಭಿಕನಾಗಿ ಆಡಿಸಬೇಕೆಂಬ ಅಭಿಪ್ರಾಯವನ್ನು ಕ್ರಿಕೆಟ್ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೆನ್ನು ನೋವಿಗೊಳಗಾಗಿ ಮೈದಾನ ತೊರೆದಿದ್ದ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಾಂಗ್ಲಾದೇಶ ವಿರುದ್ಧ ಆಡುವುದು ಅನುಮಾನವಾಗಿರುವ ಕಾರಣ, ಡಿಕೆ ಬದಲು ರಿಷಭ್ ಪಂತ್ ಆಡುವ ಸಾಧ್ಯತೆಯಿದೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯಕ), 3.ವಿರಾಟ್ ಕೊಹ್ಲಿ, 4.ಸೂರ್ಯಕುಮಾರ್ ಯಾದವ್, 5.ಹಾರ್ದಿಕ್ ಪಾಂಡ್ಯ, 6.ರಿಷಭ್ ಪಂತ್ (ವಿಕೆಟ್ ಕೀಪರ್), 7.ಅಕ್ಷರ್ ಪಟೇಲ್, 8.ರವಿಚಂದ್ರನ್ ಅಶ್ವಿನ್, 9.ಮೊಹಮ್ಮದ್ ಶಮಿ, 10.ಭುವನೇಶ್ವರ್ ಕುಮಾರ್, 11.ಅರ್ಷದೀಪ್ ಸಿಂಗ್

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಅಡಿಲೇಡ್ ಮೈದಾನ, ಅಡಿಲೇಡ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : India Cricket Team : ಕಿವೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ: ಶಿಖರ್, ಪಾಂಡ್ಯ ಕ್ಯಾಪ್ಟನ್, ರಿಷಬ್ ವೈಸ್ ಕ್ಯಾಪ್ಟನ್

ಇದನ್ನೂ ಓದಿ : Dinesh Karthik : ವಿಶ್ವಕಪ್ ಮಧ್ಯೆಯೇ ಡಿಕೆಗೆ ಬಿಸಿಸಿಐ ಶಾಕ್, ಟೀಮ್ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ ಖೇಲ್ ಖತಂ

India Vs Bangladesh T20 World Cup KL Rahul Last Chance

Comments are closed.