Mohammed Shami: ಟಿ20 ವಿಶ್ವಕಪ್‌ಗೆ ಮೊಹಮ್ಮದ್ ಶಮಿ ಫಿಟ್, ಕಾಂಗರೂ ನಾಡಿಗೆ ಹಾರಿದ ಖತರ್ನಾಕ್ ವೇಗಿ

ಬೆಂಗಳೂರು: ಟಿ20 ವಿಶ್ವಕಪ್ ಟೂರ್ನಿ (T20 World Cup 2022) ಆರಂಭಕ್ಕೆ ಮುನ್ನವೇ ಸಾಲು ಸಾಲು ಗಾಯದ ಸಮಸ್ಯೆಗಳ ಆಘಾತಕ್ಕೆ ಸಿಲುಕಿದ್ದ ಭಾರತಕ್ಕೆ ಕೊನೆಗೂ ಒಂದು ಶುಭ ಸುದ್ದಿ ಎದುರಾಗಿದೆ. ಕೋವಿಡ್’ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami fit ) ಟಿ20 ವಿಶ್ವಕಪ್’ಗಾಗಿ ಆಸ್ಟ್ರೇಲಿಯಾಗೆ ಹಾರಿದ್ದರೆ. ಬೆನ್ನು ನೋವಿನ ಕಾರಣ ವಿಶ್ವಕಪ್’ನಿಂದ ಹೊರ ಬಿದ್ದಿರುವ ಮತ್ತೊಬ್ಬ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಬದಲು ಮೊಹಮ್ಮದ್ ಶಮಿ ಟೀಮ್ ಇಂಡಿಯಾದ 15ರ ಬಳಗವನ್ನು ಸೇರಿಕೊಳ್ಳಲಿದ್ದಾರೆ. ಕಾಂಗರೂನಾಡಿಗೆ ತೆರಳುತ್ತಿರುವ ಬಗ್ಗೆ ಬಗ್ಗೆ ಸ್ವತಃ ಮೊಹಮ್ಮದ್ ಶಮಿ ಅವರೇ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದು, ಆಸ್ಟ್ರೇಲಿಯಾಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಕಳೆದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಳಿಗೆ ಆಯ್ಕೆಯಾಗಿದ್ದ ಮೊಹಮ್ಮದ್ ಶಮಿ, ಈ ಹಿಂದೆ ವಿಶ್ವಕಪ್ ಮೀಸಲು ಆಟಗಾರರ ಪಟ್ಟಿಯಲ್ಲಿದ್ದರು. ಆದರೆ ಆಸೀಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ಕೋವಿಡ್ ಪಾಸಿಟಿವ್’ಗೆ ಒಳಗಾದ ಕಾರಣ ಸರಣಿಯಿಂದ ಹೊರ ಬಿದ್ದಿದ್ದರು. ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಟೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಮಿ, ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು ವಿಶ್ವಕಪ್’ಗೆ ಸಜ್ಜಾಗಿದ್ದಾರೆ.

ಇದೇ ವೇಳೆ ವಿಶ್ವಕಪ್ ರಿಸರ್ವ್ ಪ್ಲೇಯರ್ಸ್ ಲಿಸ್ಟ್’ನಲ್ಲಿದ್ದ ಬಲಗೈ ಸ್ವಿಂಗ್ ಬೌಲರ್ ದೀಪಕ್ ಚಹರ್ ಬೆನ್ನು ನೋವಿನ ಕಾರಣ ತಂಡದಿಂದ ಹೊರ ಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಂತರ ಗಾಯದ ಸಮಸ್ಯೆಯಿಂದ ಬಳಲಿದ್ದ ದೀಪಕ್ ಚಹರ್, ಹರಿಣಗಳ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿರಲಿಲ್ಲ. ಹೀಗಾಗಿ ವಿಶ್ವಕಪ್ ಮೀಸಲು ಆಟಗಾರರ ಪಟ್ಟಿಯಿಂದ ಚಹರ್ ಅವರನ್ನು ಹೊರ ಹಾಕಲಾಗಿದ್ದು, ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮತ್ತೊಂದೆಡೆ ರಿಸರ್ವ್ ಆಟಗಾರರ ಪಟ್ಟಿಯಲ್ಲಿದ್ದ ಮೊಹಮ್ಮದ್ ಶಮಿ ಟೀಮ್ ಇಂಡಯಾ ಅಂತಿಮ 15ರ ಬಳಗ ಸೇರಿಕೊಳ್ಳಲಿರುವ ಕಾರಣ, ಶಮಿ ಸ್ಥಾನದಲ್ಲಿ ಮೀಸಲು ಆಟಗಾರನಾಗಿ ವೇಗಿ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ. ಬಲಗೈ ವೇಗಿ ಸಿರಾಜ್ ಇತ್ತೀಚೆಗಷ್ಟೇ ಕೊನೆಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು 5 ವಿಕೆಟ್ ಪಡೆಯುವ ಮೂಲಕ ಸರಣಿಶ್ರೇಷ್ಠರಾಗಿ ಮೂಡಿ ಬಂದಿದ್ದರು.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭವಾಗಲಿದೆ. ಈ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಜೊತೆ ಗ್ರೂಪ್-2ನಲ್ಲಿ ಸ್ಥಾನ ಪಡೆದಿದೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲು ಭಾರತ ಆತಿಥೇಯ ಆಸ್ಟ್ರೇಲಿಯಾ (ಅಕ್ಟೋಬರ್ 17) ಹಾಗೂ ನ್ಯೂಜಿಲೆಂಡ್ (ಅಕ್ಟೋಬರ್ 19) ವಿರುದ್ಧ ಬ್ರಿಸ್ಬೇನ್’ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ.

ಇದನ್ನೂ ಓದಿ : Sourav Ganguly: ಅವತ್ತು ದ್ರಾವಿಡ್, ಇವತ್ತು ಬಿನ್ನಿ.. ಸೌರವ್ ಗಂಗೂಲಿ ಪಟ್ಟಕ್ಕೆ ಲಗ್ಗೆ ಇಟ್ಟ ಕನ್ನಡಿಗರು

ಇದನ್ನೂ ಓದಿ : Women’s Asia Cup : ಮಹಿಳಾ ಏಷ್ಯಾ ಕಪ್ : ದಾಖಲೆಯ 8ನೇ ಬಾರಿ ಫೈನಲ್ ತಲುಪಿದ ಭಾರತದ ವನಿತೆಯರು

Mohammed Shami fit for T20 World Cup travel Australia

Comments are closed.