Shubman Gill : ಓಪನಿಂಗ್ ರೇಸ್‌ನಲ್ಲಿ ಮತ್ತೊಂದು ಕುದುರೆ; ಗಿಲ್ ಕಮಾಲ್, ಯಾರಿಗೆಲ್ಲಾ ಢವ ಢವ ?

ಟ್ರಿನಿಡಾಡ್: (Shubman Gill) ಭಾರತ ಕ್ರಿಕೆಟ್ ತಂಡದಲ್ಲಿ ಒಂದೊಂದು ಸ್ಥಾನಕ್ಕೂ ಪೈಪೋಟಿ. ಒಬ್ಬ ತಂಡದಿಂದ ಹೊರ ಬಿದ್ರೆ, ಆ ಸ್ಥಾನವನ್ನು ಆಕ್ರಮಿಸಲು ಹತ್ತಾರು ಮಂದಿ ಕ್ಯೂನಲ್ಲಿ ನಿಂತಿರುತ್ತಾರೆ. ಅದರಲ್ಲೂ ಆರಂಭಿಕ ಆಟಗಾರನ ಸ್ಥಾನಕ್ಕಿರುವ ಪೈಪೋಟಿಯಂತೂ ಅಷ್ಟಿಷ್ಟಲ್ಲ. ನಾಯಕ ರೋಹಿತ್ ಶರ್ಮಾ, ಅನುಭವಿ ಎಡಗೈ ಓಪನರ್ ಶಿಖರ್ ಧವನ್, ಕನ್ನಡಿಗ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಯುವ ಆಟಗಾರರಾದ ಇಶಾನ್ ಕಿಶನ್, ರಿಷಭ್ ಪಂತ್, ರುತುರಾಜ್ ಗಾಯಕ್ವಾಡ್, ಪೃಥ್ವಿ ಶಾ.. ಹೀಗೆ ಆರಂಭಿಕರ ರೇಸ್”ನಲ್ಲಿ ದೊಡ್ಡ ದಂಡೇ ಇದೆ. ಆ ಸಾಲಿಗೆ ಹೊಸ ಸೇರ್ಪಡೆ ಪಂಜಾಬ್ ಓಪನರ್ ಶುಭಮನ್ ಗಿಲ್.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ (India Vs West Indies ODI Series) ಮಿಂಚುವ ಮೂಲಕ ಶುಭಮನ್ ಗಿಲ್, ಸೀಮಿತ ಓವರ್”ಗಳ ಕ್ರಿಕೆಟ್”ನಲ್ಲಿ ಓಪನಿಂಗ್ ರೇಸ್’ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ 23 ವರ್ಷದ ಬಲಗೈ ಬ್ಯಾಟ್ಸ್’ಮನ್ ಶುಭಮನ್ ಗಿಲ್, 102.50 ಸರಾಸರಿಯಲ್ಲಿ 2 ಅರ್ಧಶತಕಗಳ ಸಹಿತ ಅಮೋಘ 205 ರನ್ ಕಲೆ ಹಾಕಿದ್ದಾರೆ. ಮೊದಲ ಪಂದ್ಯದಲ್ಲಿ 64 ರನ್ ಗಳಿಸಿದ್ದ ಗಿಲ್, 2ನೇ ಪಂದ್ಯದಲ್ಲಿ 43 ರನ್ ಗಳಿಸಿ ಔಟಾಗಿದ್ದರು. ಬುಧವಾರ ಟ್ರಿನಿಡಾಡ್’ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಅಜೇಯ 98 ರನ್ ಗಳಿಸಿದ್ದರು. ಮಳೆಯ ಕಾರಣ ಭಾರತದ ಇನ್ನಿಂಗ್ಸ್ 36 ಓವರ್”ಗಳಿಗೆ ಸೀಮಿತಗೊಂಡ ಕಾರಣ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಶತಕ ಬಾರಿಸುವ ಅವಕಾಶದಿಂದ ಗಿಲ್ ವಂಚಿತರಾದರು. ವಿಂಡೀಸ್ ವಿರುದ್ಧ ಸರಣಿಶ್ರೇಷ್ಠರಾಗಿ ಮೂಡಿ ಬಂದ ಗಿಲ್, ಭಾರತ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಗಿಲ್ ಸಾಧನೆ
ಇನ್ನಿಂಗ್ಸ್: 03
ರನ್: 205
ಗರಿಷ್ಠ: 98*
ಸರಾಸರಿ: 102.50
ಅರ್ಧಶತಕ: 02

ಭಾರತ ಪರ ಈಗಾಗ್ಲೇ 11 ಟೆಸ್ಟ್ ಪಂದ್ಯಗಳನ್ನಾಡಿರುವ ಶುಭಮನ್ ಗಿಲ್, ಏಕದಿನ ಕ್ರಿಕೆಟ್’ನಲ್ಲೂ ಆರಂಭಿಕನಾಗಿ ಮಿಂಚುವ ಮೂಲಕ, ಓಪನರ್ ರೇಸ್”ನಲ್ಲಿರುವ ಒಂದಷ್ಟು ಮಂದಿ ಆಟಗಾರರ ಆತಂಕಕ್ಕೆ ಕಾರಣರಾಗಿದ್ದಾರೆ.

2018ರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ಆಸರೆಯಾಗಿದ್ದ ಶುಭಮನ್ ಗಿಲ್, ಒಟ್ಟು 372 ರನ್ ಗಳಿಸುವ ಮೂಲಕ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಕಿರಿಯರ ಕ್ರಿಕೆಟ್”ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ಗಿಲ್, ಭಾರತ ಪರ ಆರಂಭಿಕನಾಗಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಆಡಿರುವ 11 ಟೆಸ್ಟ್ ಪಂದ್ಯಗಳಿಂದ 4 ಅರ್ಧಶತಕಗಳ ಸಹಿತ 30.47ರ ಸರಾಸರಿಯಲ್ಲಿ 579 ರನ್ ಗಳಿಸಿರುವ ಗಿಲ್, ಟೀಮ್ ಇಂಡಿಯಾ ಪರ ಆಡಿರುವ ಮೊದಲ 6 ಏಕದಿನ ಪಂದ್ಯಗಳಲ್ಲಿ 50.80ಯ ಉತ್ತಮ ಸರಾಸರಿಯೊಂದಿಗೆ 254 ರನ್ ಗಳಿಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಏಕದಿನ ತಂಡದ ಆರಂಭಿಕ ಆಟಗಾರನ ಸ್ಥಾನಕ್ಕೆ ತಾವೂ ಪ್ರಬಲ ಸ್ಪರ್ಧಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಇದನ್ನೂ ಓದಿ : Sourav Ganguly next ICC chief : ಐಸಿಸಿಯಲ್ಲಿ ಶುರುವಾಗಲಿದ್ಯಾ ದಾದಾ ದರ್ಬಾರ್ ? ಐಸಿಸಿಗೆ ಗಂಗೂಲಿ ಹೊಸ ಬಾಸ್ ?

ಇದನ್ನೂ ಓದಿ : Virat Kohli Earns Instagram : ಫಾರ್ಮ್‌ನಲ್ಲಿಲ್ಲದಿದ್ದರೂ ಕೊಹ್ಲಿಯೇ ಕಿಂಗ್.. ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ₹8.69 ಕೋಟಿ ಜೇಬಿಗಿಳಿಸ್ತಾರೆ ವಿರಾಟ್

Shubman Gill, competition for opening batting has started in Team India

Comments are closed.