Suryakumar Yadav : ಸಿಕ್ಸ್ ಹಿಟ್ಟಿಂಗ್‌ನಲ್ಲಿ ಪಾಕಿಸ್ತಾನದ ರಿಜ್ವಾನ್ ರೆಕಾರ್ಡ್ ಪೀಸ್ ಪೀಸ್.. ಹೊಸ ವಿಶ್ವದಾಖಲೆ ಬರೆದ ಸೂರ್ಯಕುಮಾರ್ ಯಾದವ್

ತಿರುವನಂತಪುರ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸ್ಟಾರ್ ಸೂರ್ಯಕುಮಾರ್ ಯಾದವ್ (Suryakumar Yadav)ತಮ್ಮ ವೃತ್ತಿಜೀವನದ ಅಮೋಘ ಫಾರ್ಮ್’ನಲ್ಲಿದ್ದಾರೆ. ಅದರಲ್ಲೂ ಟಿ20 ಕ್ರಿಕೆಟ್’ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಕೇರಳದ ತಿರುವನಂತಪುರದ ಗ್ರೀನ್’ಫೀಲ್ಡ್ ಮೈದಾನದಲ್ಲಿ ನಡೆದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಹರಿಣಗಳ ವಿರುದ್ಧದ ಪಂದ್ಯದಲ್ಲಿ 3 ಸಿಕ್ಸರ್’ಗಳನ್ನು ಸಿಡಿಸುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಂದೇ ವರ್ಷ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ (most sixes in any calendar year in T20Is).


ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (Mohammad Rizwan) ಹೆಸರಲ್ಲಿದ್ದ ದಾಖಲೆಯನ್ನು ಸೂರ್ಯಕುಮಾರ್ ಯಾದವ್ (Suryakumar Yadav)ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಬಾರಿಸಿದ 3 ಸಿಕ್ಸರ್’ಗಳ ಸಹಿತ 2022ರಲ್ಲಿ ಸೂರ್ಯಕುಮಾರ್ ಒಟ್ಟು 45 ಸಿಕ್ಸರ್’ಗಳನ್ನು ಸಿಡಿಸಿದಂತಾಗಿದೆ. ಇದು ಹೊಸ ವಿಶ್ವದಾಖಲೆ. ಈ ಹಿಂದಿನ ದಾಖಲೆ 2021ರಲ್ಲಿ 42 ಸಿಕ್ಸರ್’ಗಳನ್ನು ಬಾರಿಸಿದ್ದ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ರಿಜ್ವಾನ್ ಅವರ ಹೆಸರಲ್ಲಿತ್ತು

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್: ಒಂದೇ ವರ್ಷ ಅತೀ ಹೆಚ್ಚು ಸಿಕ್ಸರ್ಸ್

  • 45 (2022): ಸೂರ್ಯಕುಮಾರ್ ಯಾದವ್ (ಭಾರತ), 21 ಪಂದ್ಯ
  • 42 (2021): ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ), 29 ಪಂದ್ಯ
  • 41 (2021): ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 18 ಪಂದ್ಯ

ಗಬ್ಬರ್ ಶಿಖರ್ ದಾಖಲೆ ಪುಡಿಗಟ್ಟಿದ ಸೂರ್ಯ:
ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಲಬ್ಬರದ ಅರ್ಧಶತಕ ಬಾರಿಸಿದ ಸೂರ್ಯಕುಮಾರ್ ಯಾದವ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಈ ವರ್ಷ 700 ರನ್’ಗಳ ಗಡಿ ದಾಟಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಂದೇ ವರ್ಷ ಅತೀ ಹೆಚ್ಚು ರನ್ ಗಳಿಸಿ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ. ಈ ಹಿಂದೆ ಈ ದಾಖಲೆ 2018ರಲ್ಲಿ 689 ರನ್ ಗಳಿಸಿದ್ದ ಅನುಭವಿ ಎಡಗೈ ಓಪನರ್ ಶಿಖರ್ ಧವನ್ ಅವರ ಹೆಸರಲ್ಲಿತ್ತು. 2022ರಲ್ಲಿ ಸೂರ್ಯಕುಮಾರ್ ಯಾದವ್ ಆಡಿರುವ 21 ಪಂದ್ಯಗಳಿಂದ 180+ ಸ್ಟ್ರೈಕ್’ರೇಟ್ ಹಾಗೂ 40+ ಸರಾಸರಿಯಲ್ಲಿ 732 ರನ್ ಕಲೆ ಹಾಕಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್: ಭಾರತ ಪರ ಒಂದೇ ವರ್ಷ ಅತೀ ಹೆಚ್ಚು ರನ್

  • 732 (2022): ಸೂರ್ಯಕುಮಾರ್ ಯಾದವ್, ಸರಾಸರಿ: 40.66, ಸ್ಟ್ರೈಕ್’ರೇಟ್: 180.29
  • 689 (2018): ಶಿಖರ್ ಧವನ್, ಸರಾಸರಿ: 40.52, ಸ್ಟ್ರೈಕ್’ರೇಟ್: 147.22
  • 641 (2016): ವಿರಾಟ್ ಕೊಹ್ಲಿ, ಸರಾಸರಿ: 106.83, ಸ್ಟ್ರೈಕ್’ರೇಟ್: 140.26
  • 590 (2018): ರೋಹಿತ್ ಶರ್ಮಾ, ಸರಾಸರಿ: 36.87, ಸ್ಟ್ರೈಕ್’ರೇಟ್: 147.50

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು

ಇದನ್ನೂ ಓದಿ : ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಒಬ್ಬನೇ ಕನ್ನಡಿಗ

ಇದನ್ನೂ ಓದಿ : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೂ ಮುನ್ನ ಮೈದಾನದ ಹೊರಗೆ ಸಂಜು ಸ್ಯಾಮ್ಸನ್ ಕಟೌಟ್

ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ ಅಜೇಯ 50 ರನ್ ಸಿಡಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. 107 ರನ್‌ಗಳ ಸುಲಭ ಗುರಿಯ ಮುಂದೆ 17 ರನ್ನಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಉಪನಾಯಕ ಕೆ.ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಆಸರೆಯಾಗಿದ್ದರು. ಈ ಜೋಡಿ ಮುರಿಯದ 3ನೇ ವಿಕೆಟ್‌ಗೆ 93 ರನ್ ಸೇರಿಸಿ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿತ್ತು. ಸೂರ್ಯನ ಅಬ್ಬರದ ಮಧ್ಯೆ ಜವಾಬ್ದಾರಿಯುತ ಆಟವಾಡಿದ್ದ ರಾಹುಲ್ ಅಜೇಯ 51 ರನ್ ಗಳಿಸಿದ್ದರು. ಈ ಗೆಲುವಿನೊಂದಿಗೆ ಭಾರತ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಸರಣಿಯ 2ನೇ ಪಂದ್ಯ ಅಕ್ಟೋಬರ್ 2ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ.

Suryakumar Yadav set a new world record in Pakistan’s Rizwan’s record piece in six hitting

Comments are closed.