Ireland beat England : ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಅಚ್ಚರಿ. ಐರ್ಲೆಂಡ್ ವಿರುದ್ಧ ಆಘಾತಕಾರಿ ಸೋಲುಂಡ ಇಂಗ್ಲೆಂಡ್

ಮೆಲ್ಬೋರ್ನ್: Ireland beat England : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. 2010ರ ಚಾಂಪಿಯನ್ ಇಂಗ್ಲೆಂಡ್ (England) ತಂಡ, ಕ್ರಿಕೆಟ್ ಶಿಶು ಐರ್ಲೆಂಡ್ (Ireland) ವಿರುದ್ಧ ಆಘಾತಕಾರಿ ಸೋಲು ಕಂಡಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ (Melbourne Cricket Ground) ನಡೆದ ಪಂದ್ಯದಲ್ಲಿ ಬಲಾಢ್ಯ ಇಂಗ್ಲೆಂಡ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 5 ರನ್’ಗಳಿಂದ ಮಣಿಸಿದ ಐರ್ಲೆಂಡ್ ಸ್ಮರಣೀಯ ಗೆಲುವು ತನ್ನದಾಗಿಸಿಕೊಂಡಿತು.


ಟಿ20 ವಿಶ್ವಕಪ್’ನಲ್ಲಿ ಎರಡು ಬಾರಿ (2012, 2016) ಚಾಂಪಿಯನ್ ಪಟ್ಟಕ್ಕೇರಿದ್ದ ವೆಸ್ಟ್ ಇಂಡೀಸ್ ತಂಡ, ಅರ್ಹತಾ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರ ಬಿದ್ದಿತ್ತು. ಅರ್ಹತಾ ಸುತ್ತಿನ ಮತ್ತೊಂದು ಪಂದ್ಯದಲ್ಲಿ ನಮೀಬಿಯಾ ತಂಡ, ಶ್ರೀಲಂಕಾ ತಂಡಕ್ಕೆ 55 ರನ್’ಗಳಿಂದ ಶಾಕ್ ಕೊಟ್ಟಿತ್ತು. ಇದೀಗ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎಂದೇ ಕರೆಸಿಕೊಳ್ಳುತ್ತಿದ್ದ ಇಂಗ್ಲೆಂಡ್, ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಸೋತು ಸುಣ್ಣವಾಗಿದೆ.


ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 19.2 ಓವರ್’ಗಳಲ್ಲಿ 157 ರನ್’ಗಳಿಗೆ ಆಲೌಟಾಯಿತು. ಐರ್ಲೆಂಡ್ ಪರ ನಾಯಕ ಆ್ಯಂಡಿ ಬಾಲ್’ಬ್ರೈನ್ 47 ಎಸೆತಗಳಲ್ಲಿ 62 ರನ್ ಗಳಿಸಿ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು. ಇಂಗ್ಲೆಂಡ್ ಪರ ವೇಗಿ ಮಾರ್ಕ್ ವುಡ್ 34 ರನ್ನಿಗೆ 3 ವಿಕೆಟ್ ಉರುಳಿಸಿದರೆ, ಆಲ್ರೌಂಡರ್ ಲಿಯಾಮ್ ಲಿವಿಂಗ್’ಸ್ಟನ್ 17 ರನ್ನಿಗೆ 3 ವಿಕೆಟ್ ಕಬಳಿಸಿದರು.

ನಂತರ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 14.3 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ನಂತರ ಪಂದ್ಯ ಮುಂದುವರಿಯಲು ಮಳೆರಾಯ ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಫಲಿತಾಂಶಕ್ಕಾಗಿ ಡಕ್ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಇಂಗ್ಲೆಂಡ್ 5 ರನ್’ಗಳಿಂದ ಹಿಂದಿದ್ದ ಕಾರಣ, ಐರ್ಲೆಂಡ್ ರೋಚಕ ಗೆಲುವು ಸಾಧಿಸಿತು. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಇನ್ನಿಂಗ್ಸ್’ನ 2ನೇ ಓವರ್’ನಲ್ಲೇ ಶೂನ್ಯಕ್ಕೆ ಔಟಾಗಿದ್ದು, ಮತ್ತೊಬ್ಬ ಆರಂಭಕಾರ ಅಲೆಕ್ಸ್ ಹೇಲ್ಸ್ 7 ಹಾಗೂ ಬೆನ್ ಸ್ಟೋಕ್ಸ್ 6 ರನ್ನಿಗೆ ಔಟಾಗಿದ್ದರಿಂದ ಇಂಗ್ಲೆಂಡ್’ನ ರನ್ ರೇಟ್ ಆರಂಭದಲ್ಲೇ ಕುಸಿಯಿತು. ಕೊನೆಗೆ ಇದೇ ಇಂಗ್ಲೆಂಡ್’ಗೆ ಮುಳುವಾಯಿತು.

ಇದರೊಂದಿಗೆ ಟಿ20 ವಿಶ್ವಕಪ್ ಸೂಪರ್-12 ಹಂತದಲ್ಲಿ ಇಂಗ್ಲೆಂಡ್ ಗ್ರೂಪ್-1ರಲ್ಲಿ ಮೊದಲ ಸೋಲುಂಡರೆ, ಐರ್ಲೆಂಡ್ ಮೊದಲ ಗೆಲುವು ದಾಖಲಿಸಿತು. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ರೋಚಕ ಗೆಲುವು ಸಾಧಿಸಿತ್ತು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ಒಡ್ಡಿದ್ದ 328 ರನ್’ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಐರ್ಲೆಂಡ್ ಪಡೆ 3 ವಿಕೆಟ್’ಗಳಿಂದ ಇಂಗ್ಲೆಂಡ್’ಗೆ ಶಾಕ್ ನೀಡಿತ್ತು. ಇದೀಗ ಟಿ20 ವಿಶ್ವಕಪ್’ನಲ್ಲೂ ಕ್ರಿಕೆಟ್ ಜನಕರಿಗೆ ಐರ್ಲೆಂಡ್ ಆಘಾತ ನೀಡಿದೆ.

ಇದನ್ನೂ ಓದಿ : Rohit Sharma gets emotional: 90 ಸಾವಿರ ಪ್ರೇಕ್ಷಕರ ಮುಂದೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ

ಇದನ್ನೂ ಓದಿ : Virat Kohli Vs Pakistan : ರಣಬೇಟೆಗಾರನ ಮತ್ತೊಂದು ಮಹಾಬೇಟೆ, ಪಾಕಿಸ್ತಾನ ವಿರುದ್ಧ ವಿಶ್ವಕಪ್’ನಲ್ಲಿ ವಿರಾಟ್ ದಾಖಲೆ ನೋಡಿದ್ರೆ ದಂಗಾಗಿ ಹೋಗ್ತೀರಿ

T20 world Cup 2022: Ireland beat England by 5 runs

Comments are closed.