Virat Kohli: “ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿಲ್ಲ, ಆದರೆ..” ಫಾರ್ಮ್ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ

ದುಬೈ: (Virat Kohli broke his silence) ಟೀಮ್ ಇಂಡಿಯಾದ ರನ್ ಮಷಿನ್ ಎಂದೇ ಕರೆಸಿಕೊಂಡಿದ್ದ ವಿರಾಟ್ ಕೊಹ್ಲಿ ಸದ್ಯ ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸದೆ ಬರೋಬ್ಬರಿ 34 ತಿಂಗಳುಗಳೇ ಕಳೆದಿವೆ. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಕೊಹ್ಲಿ ಅವರನ್ನು ಭಾರತ ತಂಡದಿಂದ ಕೈಬಿಡಬೇಕೆಂದು ಮಾಜಿ ನಾಯಕ ಕಪಿಲ್ ದೇವ್ ಸಹಿತ ಹಲವಾರು ಮಾಜಿ ಕ್ರಿಕೆಟಿಗರು ಇತ್ತೀಚೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಇಲ್ಲಿಯವರೆಗೆ ಮೌನವಾಗಿದ್ದ ವಿರಾಟ್ ಕೊಹ್ಲಿ, ತಮ್ಮ ಬ್ಯಾಟಿಂಗ್ ಫಾರ್ಮ್ ಬಗ್ಗೆ ಈಗ ಮೌನ ಮುರಿದಿದ್ದಾರೆ.

“ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿಲ್ಲ ಎಂದು ನನಗನ್ನಿಸುತ್ತಿಲ್ಲ. ನಾನು ಒಳ್ಳೆಯ ಲಯದಲ್ಲಿದ್ದೇನೆ. ಹೀಗಾಗಿ ಅದು ನನಗೆ ದೊಡ್ಡ ವಿಚಾರವೇ ಅಲ್ಲ. ಆದರೆ ಇಂಗ್ಲೆಂಡ್’ನಲ್ಲಿ ಮಾತ್ರ ಉತ್ತಮ ಲಯದಲ್ಲಿರಲಿಲ್ಲ. ಅಲ್ಲಿ ಆಡುತ್ತಿದ್ದಾಗ ಅದರ ಅನುಭವ ನನಗೆ ಆಗಿತ್ತು. ಆದರೆ ಜೀವನ ಎಂದ ಮೇಲೆ ಏರಿಳಿತಗಳು ಇದ್ದೇ ಇರುತ್ತವೆ. ಒಂದು ಬಾರಿ ನಾನು ಈ ಹಂತವನ್ನು ದಾಟಿ ಬಿಟ್ಟರೆ, ನಾನು ಯಾವ ರೀತಿ ಸ್ಥಿರ ಪ್ರದರ್ಶನ ತೋರಬಲ್ಲೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಈಗ ನನಗೆ ಆಗುತ್ತಿರುವ ಅನುಭವ ಜೀವನದಲ್ಲಿ ದೊಡ್ಡ ಪಾಠವೆಂದು ಭಾವಿಸುತ್ತೇನೆ” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

019ರ ನವೆಂಬರ್’ನಲ್ಲಿ ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಗಳಿಸಿಲ್ಲ. ಕಳೆದ ಒಂದು ಸಾವಿರ ದಿನಗಳಿಂದ ವಿರಾಟ್ ಕೊಹ್ಲಿ ಶತಕದ ಬರ ಎದುರಿಸುತ್ತಿದ್ದಾರೆ. ಆದರೆ ಟಿ20 ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಅಮೋಘ ಫಾರ್ಮ್’ನಲ್ಲಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ ಆಡಿದ 24 ಪಂದ್ಯಗಳಿಂದ 42ರ ಸರಾಸರಿಯಲ್ಲಿ 675 ರನ್ ಗಳಿಸಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ಭಾರತ ತಂಡದ ಜೊತೆ ಏಷ್ಯಾ ಕಪ್ ಟೂರ್ನಿಗೆ (Asia Cup 2022) ಸಿದ್ಧತೆ ನಡೆಸುತ್ತಿದ್ದು, ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ. ಏಷ್ಯಾ ಕಪ್ ಟಿ20 ಟೂರ್ನಿ ಶನಿವಾರ ಆರಂಭವಾಗಲಿದ್ದು, ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Virat Kohli Babar Azam : ಏಷ್ಯಾ ಕಪ್ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ನಾಯಕನನ್ನು ಭೇಟಿ ಮಾಡಿದ ವಿರಾಟ್ ಕೊಹ್ಲಿ

ಇದನ್ನೂ ಓದಿ : Hardik Pandya Car Collection : ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್ ನೋಡಿದ್ರೆ ನಿಮ್ಗೆ ಅಚ್ಚರಿಯಾಗತ್ತೆ

I am not batting well but Virat Kohli broke his silence on form

Comments are closed.