Sachin Tendulkar World Record : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶ್ವದಾಖಲೆಗೆ ಕಾದಿದೆ ದೊಡ್ಡ ಸಂಚಕಾರ

ಬೆಂಗಳೂರು: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ( Sachin Tendulkar) ಹೆಸರು ಕೇಳಿದ್ರೆ ಸಾಲು ಸಾಲು ವಿಶ್ವದಾಖಲೆಗಳು ಬಂದು ಕಣ್ಣ ಮುಂದೆ ನಿಲ್ಲುತ್ತವೆ. ತಮ್ಮ 24 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ತೆಂಡೂಲ್ಕರ್ ಹತ್ತಾರು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಆ ಪೈಕಿ ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿರುವ ದಾಖಲೆಯೂ (Sachin Tendulkar World Record) ಒಂದು. ಆ ದಾಖಲೆಗೇ ಈಗ ಸಂಚಕಾರ ಬಂದಿದೆ.

ವೃತ್ತಿಜೀವನದಲ್ಲಿ 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 51 ಶತಕಗಳ ಸಹಿತ ವಿಶ್ವದಾಖಲೆಯ 15,921 ರನ್ ಕಲೆ ಹಾಕಿದ್ದಾರೆ. 2ನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 13,378 ರನ್ ಕಲೆ ಹಾಕಿದ್ರೆ, ದಕ್ಷಿಣ ಆಫ್ರಿಕಾದ ಜ್ಯಾಕ್ ಕಾಲೀಸ್ (13,289), ಭಾರತದ ರಾಹುಲ್ ದ್ರಾವಿಡ್ (13,288) ಮತ್ತು ಇಂಗ್ಲೆಂಡ್”ನ ಅಲಿಸ್ಟರ್ ಕುಕ್ (12,472) ನಂತರದ ಸ್ಥಾನಗಳಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್”ನಲ್ಲಿ ಅತೀ ಹೆಚ್ಚು ರನ್ (Most runs in test cricket) ಗಳಿಸಿರುವ ಸಚಿನ್ ತೆಂಡೂಲ್ಕರ್ ದಾಖಲೆಗೆ ಸಂಚಕಾರ ತಂದೊಡ್ಡುವ ಭೀತಿ ಹುಟ್ಟಿಸಿರುವುದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ (Joe Root). ಕಳೆದೆರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್’ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿರುವ ಜೋ ರೂಟ್ ಇತ್ತೀಚೆಗಷ್ಟೇ 10 ಸಾವಿರ ರನ್”ಗಳ ಗಡಿ ದಾಟಿದ್ದಾರೆ.

2021ರ ಜನವರಿ ಒಂದರಿಂದ ಇಂದಿನವರೆಗೆ ಆಡಿರುವ 22 ಟೆಸ್ಟ್ ಪಂದ್ಯಗಳಿಂದ 10 ಶತಕಗಳ ಸಹಿತ ಜೋ ರೂಟ್ 2368 ರನ್ ಗಳಿಸಿದ್ದಾರೆ. ಅಂದರೆ ಕೇವಲ ಒಂದೂವರೆ ವರ್ಷದಲ್ಲಿ ಹತ್ತಿರ ಹತ್ತಿರ ಎರಡೂವರೆ ಸಾವಿರ ರನ್. 31 ವರ್ಷದ ಜೋ ರೂಟ್ ಇದೇ ವೇಗದಲ್ಲಿ ಮುಂದುವರಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ. ತೆಂಡೂಲ್ಕರ್ ದಾಖಲೆಯನ್ನು ಜೋ ರೂಟ್ ಖಂಡಿತಾ ಮುರಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮಾರ್ಕ್ ಟೇಲರ್ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಕ್ರಿಕೆಟ್”ನಲ್ಲಿ ಏನು ಬೇಕಾದರೂ ಸಾಧ್ಯ ಎಂದಿದ್ದಾರೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್.

ಜೋ ರೂಟ್’ಗೆ ಈಗ 31 ವರ್ಷ. ಫಿಟ್’ನೆಸ್ ಕಾಯ್ದುಕೊಂಡರೆ ಇನ್ನೂ ಕನಿಷ್ಠ ಐದಾರು ವರ್ಷ ಆಡುವ ಸಾಮರ್ಥ್ಯವಿದೆ. ವರ್ಷಕ್ಕೆ ಸಾವಿರ ರನ್ ಗಳಿಸಿದರೂ ಜೋ ರೂಟ್ ಸುಲಭವಾಗಿ ಸಚಿನ್ ತೆಂಡೂಲ್ಕರ್ ಅವರ 15 ಸಾವಿರ ರನ್”ಗಳ ವಿಶ್ವದಾಖಲೆಯನ್ನು ಪುಡಿಗಟ್ಟಲಿದ್ದಾರೆ. ಇಲ್ಲಿಯವರೆಗ 119 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 50ರ ಸರಾಸರಿಯಲ್ಲಿ 27 ಶತಕಗಳ ಸಹಿತ 10,191 ರನ್ ಗಳಿಸಿದ್ದಾರೆ. ಸಚಿನ್ ವಿಶ್ವದಾಖಲೆ ಮುರಿಯಲು ಇಂಗ್ಲೆಂಡ್ ಆಟಗಾರನಿಗೆ ಬೇಕಿರುವುದಿನ್ನು5,730 ರನ್.

ಇದನ್ನೂ ಓದಿ : KL Rahul Fitness : ಕೆ.ಎಲ್ ರಾಹುಲ್ ಗಾಯದ ಕುರಿತು ಬಿಗ್ ಅಪ್‌ಡೇಟ್ : Exclusive

ಇದನ್ನೂ ಓದಿ : ಗಂಭೀರ್ ಆರಿಸಿದ ಟಿ20 ವಿಶ್ವಕಪ್ ತಂಡದಲ್ಲಿ ರಾಹುಲ್, ಕೊಹ್ಲಿಯೇ ಇಲ್ಲ

Joe Root Shortly Breaking Cricket god Sachin Tendulkar World Record

Comments are closed.