ವಿಶ್ವದ ಅತೀ ದೊಡ್ಡ ‘ಮೊಟೆರಾ’ ಕ್ರೀಡಾಂಗಣದ ವಿಶೇಷತೆ ನಿಮಗೆ ಗೊತ್ತಾ

0

ಅಹಮದಾಬಾದ್ : ಭಾರತ ನಾಳೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಗುಜರಾತ್ ನ ಅಹಮದಾಬಾದ್ ನಲ್ಲಿ ನಿರ್ಮಾಣಗೊಂಡಿರೋ ವಿಶ್ವದ ಅತೀ ದೊಡ್ಡ ಮೊಟೆರಾ ಕ್ರಿಕೆಟ್ ಸ್ಟೇಡಿಯಂ ಲೋಕಾರ್ಪಣೆಗೊಳ್ಳಲಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೋಕಾರ್ಪಣೆ ಮಾಡಲಿರೋ ಮೊಟೆರಾ ಸರ್ದಾರ್ ವಲಭಬಾಯಿ ಪಟೇಲ್ ಕ್ರೀಡಾಂಗಣದ ವಿಶೇಷತೆ ಏನು ಅಂತಾ ನಿಮಗೆ ಗೊತ್ತಾ ?

ಇಷ್ಟು ದಿನ ಆಸ್ಟ್ರೇಲಿಯಾ ಮೇಲ್ಬೋರ್ನ ಸ್ಟೇಡಿಂಯನ್ನು ವಿಶ್ವದ ಅತೀ ದೊಡ್ಡ ಹಾಗೂ ಕೊಲ್ಕತ್ತಾದಲ್ಲಿರೋ ಈಡನ್ ಗಾರ್ಡನ್ ಸ್ಟೇಡಿಯಂ ಅನ್ನು ದೇಶದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಂತಾ ಕರೆಯಲಾಗುತ್ತಿತ್ತು. ಆದ್ರೆ ಇನ್ಮುಂದೆ ಅಹಮದಾಬಾದ್ ನಲ್ಲಿರುವ ಮೊಟೆರಾ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣ ದೇಶದಲ್ಲೇ ಅತೀ ದೊಡ್ಡದು ಮಾತ್ರವಲ್ಲ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅನ್ನೋ ಖ್ಯಾತಿಗೆ ಪಾತ್ರವಾಗಲಿದೆ.

ಈ ಹಿಂದೆ ಸುಮಾರು 40,000 ಆಸನ ವ್ಯವಸ್ಥೆಯನ್ನು ಹೊಂದಿದ್ದ ಮೊಟೆರಾದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಕ್ರೀಡಾಂಗಣವನ್ನು ನವೀಕರಣಗೊಳಿಸಲು ಗುಜರಾತ್ ಸರಕಾರ ಮುಂದಾಗಿತ್ತು. 2017ರಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ಎಲ್ & ಟಿ ಕಂಪೆನಿ ಗುತ್ತಿಗೆಯನ್ನು ಪಡೆದು ಕಾಮಗಾರಿ ಆರಂಭಿಸಿತ್ತು. ಕೇವಲ ಮೂರೇ ಮೂರು ವರ್ಷಗಳಲ್ಲಿ ವಿಶ್ವದ ಅತೀ ದೊಡ್ಡ ಕ್ರೀಡಾಂಗಣವನ್ನು ನಿರ್ಮಿಸಿದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣವನ್ನು ವಿನ್ಯಾಸ ಮಾಡಿದ್ದ ತಂಡವೇ ಮೊಟೆರಾ ಕ್ರೀಡಾಂಗಣಕ್ಕೂ ವಿನ್ಯಾಸ ಮಾಡಿ ನಿರ್ಮಾಣದ ಉಸ್ತುವಾರಿಯನ್ನು ನೋಡಿಕೊಂಡಿದೆ. ಕ್ರಿಕೆಟ್ ಇತಿಹಾಸದಲ್ಲಿಯೇ ಇದು ವಿಶ್ವದ ಮೊದಲ ಅತೀದೊಡ್ಡ ಕ್ರೀಡಾಂಗಣ, ಆದರೆ ಕ್ರೀಡಾಂಗಣಕ್ಕೆ ಹೋಲಿಸಿದ್ರೆ ಉತ್ತರ ಕೋರಿಯಾದ ಮೇ ಡೆ ಸ್ಟೇಡಿಯಂ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಮೇ ಡೆ ಕ್ರೀಡಾಂಗಣದಲ್ಲಿ 1.50 ಲಕ್ಷ ಜನ ಕುಳಿತುಕೊಳ್ಳುವ ಆಸನದ ವ್ಯವಸ್ಥೆಯಿದೆ.

ಹೇಗಿದೆ ಗೊತ್ತಾ ಕ್ರೀಡಾಂಗಣ
ವಿಶ್ವದ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಮೊಟೆರಾ ಕ್ರೀಡಾಂಗಣದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ಕ್ರೀಡಾಂಗಣದಲ್ಲಿ ಏಕಕಾಲದಲ್ಲಿಯೇ 1.10 ಲಕ್ಷ ಮಂದಿ ಕುಳಿತು ಕ್ರಿಕೆಟ್ ನೋಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಇದ್ದ 40,000 ಮಂದಿ ಕುಳಿತುಕೊಳ್ಳುತ್ತಿದ್ದ ಸಾಮರ್ಥ್ಯವನ್ನು ಹೆಚ್ಚಿಸಿರುವುದು ಮಾತ್ರವಲ್ಲ ಹಲವು ಅನುಕೂಲತೆಗಳನ್ನೂ ಕಲ್ಪಿಸಲಾಗಿದೆ.

64 ಎಕರೆ ವಿಸ್ತೀರ್ಣವಾದ ಜಾಗದಲ್ಲಿ ನಿರ್ಮಾಣಗೊಂಡಿರೋ ಮೊಟೆರಾ ಸರ್ದಾರ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದಲ್ಲಿ 76 ಕಾರ್ಪೋರೇಟ್ ಬಾಕ್ಸ್, 4 ಡ್ರೆಸ್ಸಿಂಗ್ ರೂಮ್ ನಿರ್ಮಾಣ ಮಾಡಲಾಗಿದೆ. ಕ್ರಿಕೆಟ್ ಆಟಗಾರರಿಗೆ ಅಭ್ಯಾಸ ನಡೆಸಲು ಪ್ರತ್ಯೇಕವಾಗಿ 3 ಮೈದಾನ ನಿರ್ಮಾಣವಾಗಿದೆ.

ಮೊಟೆರಾ ಕ್ರೀಡಾಂಗಣದ ಪಿಚ್ ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಕೆಂಪು ಹಾಗೂ ಕಪ್ಪು ಮಣ್ಣನ್ನು ಪಿಚ್ ಗೆ ಬಳಕೆ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಒಟ್ಟು ಮೂರು ಪಿಚ್ ಗಳಿದ್ದು ಒಂದು ಕಪ್ಪು, ಒಂದು ಕೆಂಪು ಹಾಗೂ ಇನ್ನೊಂದು ಪಿಚ್ ನ್ನು ಕಂಪು ಮತ್ತು ಕಪ್ಪು ಮಣ್ಣು ಬಳಸಿ ತಯಾರಿಸಲಾಗಿದೆ. ಅಲ್ಲದೇ ಮೈದಾನಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಂತೆ ಸಬ್ ಏರ್ ಸಿಸ್ಟಂ ತಂತ್ರಜ್ಞಾನ ಅಳವಡಿಸಲಾಗಿದೆ. ಹೀಗಾಗಿ ಎಷ್ಟೇ ಮಳೆ ಬಂದರೂ ಕೂಡ ಮಳೆ ನಿಂತ ಅರ್ಧಗಂಟೆಯಲ್ಲಿ ಮೈದಾನ ಒಣಗುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೈದಾನಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಎಲ್ ಇಡಿ ಬಳಕೆ ಮಾಡಲಾಗಿದೆ. ಈ ಎಲ್ ಇಡಿ ಸುಮಾರು 30 ಮೀಟರ್ ವರೆಗಿನ ದೂರ ಪ್ರದೇಶದ ವರೆಗೂ ಕವರ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ.


ಇನ್ನು ಕ್ರಿಕೆಟ್ ವೀಕ್ಷಣೆಗೆ ಬರುವ ಕ್ರಿಕೆಟ್ ಪ್ರೇಮಿಗಳ ಅನುಕೂಲಕ್ಕಾಗಿ ಬರೋಬ್ಬರಿ 3,000 ಕಾರ್ ಗಳನ್ನು ಪಾರ್ಕ್ ಮಾಡಲು ಹಾಗೂ 10,000 ಬೈಕ್ ಪಾರ್ಕ್ ಮಾಡಲು ಬೇಕಾದ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಷ್ಟೇ ಅಲ್ಲಾ ಕ್ರೀಡಾಂಗಣವನ್ನು ಒಳಗೊಂಡಿರುವ ಸುಮಾರು 64 ಎಕರೆ ಜಾಗದಲ್ಲಿ ಈಜುಕೊಳ, ಸ್ಕ್ವ್ಯಾಷ್ ಏರಿಯಾ ಹಾಗೂ ಟೇಬಲ್ ಟೆನ್ನಿಸ್ ಏರಿಯಾಗಳನ್ನು ನಿರ್ಮಿಸಲಾಗಿದೆ. ಮಾತ್ರವಲ್ಲ ಕ್ರೀಡಾಂಗಣದಿಂದ ಕೇವಲ 300 ಮೀಟರ್ ದೂರದಲ್ಲಿಯೇ ಮೆಟ್ರೋ ನಿಲ್ದಾಣವನ್ನೂ ನಿರ್ಮಿಸಲಾಗಿದೆ.

ಗುಜರಾತ್ ಅಹಮದಾಬಾದ್ ನಗರದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ. 24ರಂದು ಉದ್ಘಾಟಿಸಲಿದ್ದಾರೆ. ಟ್ರಂಪ್ ಹಾಗೂ ಅವರ ಹೆಂಡತಿ ಮಲೇನಿಯಾ ಟ್ರಂಪ್ ಭಾಗವಹಿಸುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೂಲಕ ಗುಜರಾತ್ ವಲ್ಲಭಬಾಯಿ ಪಟೇಲ್ ಅವರಿಗೆ ಏಕತಾ ಪ್ರತಿಮೆಯ ಜೊತೆಗೆ ಮೊಟೆರಾ ಕ್ರೀಡಾಂಗಣದ ಮೂಲಕವೂ ವಿಶ್ವಮಟ್ಟಕ್ಕೆ ಕೊಂಡೊಯ್ಯುತ್ತಿದೆ.

Leave A Reply

Your email address will not be published.