ನಾವು ಕಾಳಿಕಾದೇವಿಯ ಮಕ್ಕಳು.. ಮಸಣ ರುದ್ರಿಯ ಒಕ್ಕಲು ಅಂತ ಚೀರಿದ್ದ… ನನ್ನ ಗೆಳೆಯ ಬೆಚ್ಚಿಬಿದ್ದಿದ್ದ..!ಭಾಗ-9

0

ನನ್ನ ಎದುರಿಗೆ ಮಂದವಾದ ಜ್ಯೋತಿಗಳ ಬೆಳಕಿನಲ್ಲಿ ರೌದ್ರವಾಗಿ ಕಾಣುವ ಕಾಳಿಕಾ ದೇವಿ ತನ್ನ ಕೆಂಪು ನಾಲಿಗೆಯನ್ನು ಹೊರ ಚಾಚಿಕೊಂಡು ಭೀಕರವಾಗಿ ಕಾಣಿಸುತ್ತಿದ್ಲು. ಆಕೆಯ ವಿಗ್ರಹವನ್ನು ನೋಡಿದ್ದ ನಾನೇ ಒಮ್ಮೆ ಬೆಚ್ಚಿದ್ದೆ…

ಇನ್ನು ಮಾಂತ್ರಿಕ ಕೃಷ್ಣಪ್ಪ ಸಾಮ್ರಾಣಿ ಹೊಗೆ ಹಾಕಿ ಮತ್ತಷ್ಟು ರೌದ್ರವಾಗಿ ಕಾಣುವಂತೆ ಮಾಡುತ್ತಿದ್ದ..ಜೊತೆ ಜೊತೆಯಲ್ಲಿ ತನ್ನ ಬಾಯಲ್ಲಿ ಗಟ್ಟಿಯಾಗಿ ಹಾಂ..ಹ್ರಿಂ..ಕ್ಲಿಂ…ಎಂಬ ಮಂತ್ರವನ್ನು ಉಚ್ಚರಿಸುತ್ತಿದ್ದ…ಮೊದಲೇ ಅವನು ರೌದ್ರ ವಾಗಿದ್ದ.. ಇನ್ನು ಆ ದೀಪಗಳ ಬೆಳಕು ಮತ್ತು ಸಾಂಬ್ರಾಣಿ ಹೊಗೆಯಲ್ಲಿ ಮತ್ತಷ್ಟು ವಿಕಾರವಾಗಿ ಕಾಣುತ್ತಿದ್ದ..ನನ್ನ ಸಮಸ್ಯೆ ಕೇಳಿ ಪೂಜೆ ಶುರು ಮಾಡಿದವನೇ ಕಾಳಿಕಾ ದೇವಿಗೆ ಕರ್ಪೂರದಾರತಿ ಎತ್ತಿ ತನ್ನ ಪರಿಕರಗಳಿಗೆ ಅಂದ್ರೆ ದೇವಿಯ ಎಡ ಬಲದಲ್ಲಿ ಇಟ್ಟುಕೊಂಡಿರುವ ಎಲುಬು ಗಳಿಗೆ ಪೂಜೆ ಮಾಡಿದ್ದ..ನಿಮ್ಮ ಕಷ್ಟ ಪರಿಹಾರ ಆಗ್ಬೇಕು ಅಂದ್ರೆ ಹತ್ತಾರು ರೀತಿ ಪೂಜೆ ಮಾಡಬೇಕು ಅದಕ್ಕೆ ಮೊದಲಿಗೆ ಹೋಮ ಹವನ ಬಲಿ ನಡೆಯಬೇಕು ಎಂದು ಹೇಳಿ ಕಾಸು ಕೇಳೋಕೆ ಸಜ್ಜಾಗಿದ್ದ…
ಅಂದಹಾಗೆ ನಾವು ನೀವು ಮೊದಲ ಬಾರಿ ಮಾಂತ್ರಿಕನನ್ನ ಭೇಟಿಯಾದ ತಕ್ಷಣ ಆತ ನಿಮ್ಮ ಕಷ್ಟ ಪರಿಹಾರ ಆಯ್ತು ಹೋಗಿ ಅಂತ ಹೇಳೋದಿಲ್ಲ..ಮೂರು ಅಮಾವಾಸ್ಯೆ ಮೂರು ಹುಣ್ಣಿಮೆಯಾದರೂ ಅವನನ್ನು ಭೇಟಿಯಾಗಲೇ ಬೇಕು…ಈ ರೀತಿ ಪದೇ ಪದೇ ಹೋದಾಗ ತಾನೇ ಕಾಸು ಕೇಳೋಕೆ ಸಾಧ್ಯ..!

ನನಗೆ ಅವನು ಎಲ್ಲವೂ ಬುರುಡೆ ಅನ್ನೋದು ಗೊತ್ತಿತ್ತಲ್ಲ…ಹೀಗಾಗಿ ನನಗೆ ಮಾಹಿತಿ ಸಂಗ್ರಹಿಸುವ ಹುಚ್ಚು..ಅವನಿಗೆ ನನ್ನ ಕಷ್ಟ ಪರಿಹಾರ ಮಾಡ್ತಿದ್ದೀನಿ ಅಂತ ಹೇಳಿ ಕಾಸು ಕೀಳುವ ಆಸೆ..ಅವುಗಳ ನಡುವೆಯೇ ನಾನೊಂದು ಪ್ರಶ್ನೆ ಎಸೆದಿದ್ದೆ.. ಅದು ಅವನ ಬಳಿ ಇರುವ ತಲೆಬುರುಡೆ ಬಗ್ಗೆ..ಅಷ್ಟೇ ಪ್ರಶ್ನೆ ಕೇಳಿದ್ದೇ ತಡ ಅದಕ್ಕೊಂದು ಕಥೆ ಶುರು ಮಾಡಿಬಿಟ್ಟ.ಹೇಗೆ ಅಘೋರಿಗಳು ನಾವು ಶಿವನ ಮಕ್ಕಳು ಎಂದು ಹೇಳಿ ಮೈ ಮುಖಕ್ಕೆ ಸುಟ್ಟ ಚಿತಾಭಸ್ಮವನ್ನು ಲೇಪಿಸಿಕೊಂಡು ಕಾಲಭೈರವನ ಮಕ್ಕಳು ಅಂತ ಚಿತ್ಕಾರ ಹಾಕ್ತಾರೋ..ಹಾಗೆಯೇ ಈತ ಕೂಡಾ ನಾವು ಕಾಳಿಕಾ ದೇವಿಯ ಮಕ್ಕಳು.. ಮಸಣ ರುದ್ರಿ ಒಕ್ಕಲು ಅಂತ ಹೇಳಿ ಚೀತ್ಕರಿಸಿದ್ದ..ಅವನ ಚಿತ್ಕಾರಕ್ಕೆ ನನ್ನ ಪಕ್ಕದಲ್ಲಿ ಕೂತಿದ್ದ ಗೆಳೆಯ ಬಸಂತ್ ಬೆಚ್ಚಿ ಬಿದ್ದಿದ್ದ…ಅಘೋರಿಗಳು ಅಖಂಡ ಬ್ರಹ್ಮಚಾರಿಗಳಾದ್ರೆ ಈ ಮಾಂತ್ರಿಕರು ಅಪ್ಪಟ ಸಂಸಾರಿಗಳು…

ಒಬ್ಬರಲ್ಲ ಅಂತ ಕೃಷ್ಣಪ್ಪನಿಗೆ ಇಬ್ಬರು ಹೆಂಡತಿಯರು..ನಾಲ್ಕು ಮಕ್ಕಳು..ಅದಿರಲಿ, ಏನಪ್ಪಾ ಈ ಮೂಳೆಗಳ ಕಥೆ ಅಂತ ಹೇಳಿದ್ರೆ ಆತ ಅಮಾವಾಸ್ಯೆ ಪೌರ್ಣಮಿ ದಿನದಂದು ಸ್ಮಶಾನಕ್ಕೆ ಹೋಗ್ತಾನಂತೆ…ಮಾಂತ್ರಿಕ ಶಕ್ತಿ ಒಲಿಯಬೇಕು ಅಂದ್ರೆ 5 ನಿಗ್ರಾಣ ಶಕ್ತಿಗಳು ಒಲಿಯಬೇಕಂತೆ..ಆ 5 ನಿಗ್ರಾಣ ಶಕ್ತಿಗಳನ್ನು ವಶಪಡಿಸಿಕೊಳ್ಳಬೇಕು ಅಂದ್ರೆ ಈ ಮೂಳೆಗಳು ಅತ್ಯವಶ್ಯಕವಂತೆ. ಕಾಳಿಕಾ ದೇವಿಯನ್ನು ಆರಾಧ್ಯ ದೇವಿ ಎಂದುಕೊಂಡು ಉಗ್ರ ಪೂಜೆ ಕೈಗೊಳ್ಳುವ ಸಮಯದಲ್ಲಿ ಅಡೆತಡೆಗಳು ಉಂಟಾಗುತ್ತವೆ ಅಂತಲೂ ಹೇಳ್ತಾನೆ..ಅವುಗಳಲ್ಲಿ ಈ ಐದು ನಿಗ್ರಾಣ ಶಕ್ತಿಗಳು ಅತಿ ಕ್ರೂರ ವಂತೆ..
1.ಅಪಸ್ಮರಿ ಶಕ್ತಿ
2.ತೂಸ್ಮಂಡ ಶಕ್ತಿ
3.ಕರ್ಣ ಮಧ್ಯಸ್ಥ ಶಕ್ತಿ
4.ಭಾವುಕ ಶಕ್ತಿ
5.ನೀಲಕಂಠ ಶಕ್ತಿ

ಈ ಐದು ಶಕ್ತಿಗಳು ಮಾಂತ್ರಿಕ ಸ್ಮಶಾನದೊಳಗೆ ಕೂತು ದೈವಶಕ್ತಿಯನ್ನು ಒಲಿಸಿಕೊಳ್ಳಬೇಕಾದರೆ ಅಡೆತಡೆ ಉಂಟು ಮಾಡುತ್ತವಂತೆ..ಯಾಮಾರಿದರೆ ಸಾವು ಕಟ್ಟಿಟ್ಟ ಬುತ್ತಿಯಂತೆ..ಇವುಗಳನ್ನು ಶಾಂತಗೊಳಿಸಲೆಂದೇ ಕೋಳಿ ಕುರಿ ಮೇಕೆ ಕೋಣ ಕೊನೆಗೆ ಮುಗ್ಧ ಮಗುವಿನ ಬಲಿ ಕೊಟ್ಟರೆ ಉಗ್ರ ಪೂಜೆ ಫಲಿಸುತ್ತದಂತೆ…ಅಘೋರವಾದ ಮಂತ್ರಶಕ್ತಿ ಲಭಿಸುತ್ತದದ್ದಂತೆ…ಈ ಶಕ್ತಿಗಳನ್ನ ನಿಗ್ರಹಿಸಲೆಂದೇ ಸತ್ತ ಗರ್ಭಿಣಿಯ ತಲೆಬುರುಡೆಗೆ ಅಘೋರ ನೀಲಕಂಠ ಶಕ್ತಿ ತುಂಬಿ ತಮ್ಮ ಬಳಿಯಲ್ಲಿ ಇರಿಸಿಕೊಂಡಿರ್ತಾರಂತೆ..ಆ ಶಕ್ತಿ ತುಂಬುವ ಪೂಜೆ ಹೇಗಿರುತ್ತೆ ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ…

(ಮುಂದುವರಿಯುತ್ತದೆ….)

  • ಕೆ.ಆರ್.ಬಾಬು
Leave A Reply

Your email address will not be published.