Virat Kohli 1000 days without Century: ಶತಕವಿಲ್ಲದೆ ಸಾವಿರ ದಿನ ಕಳೆದ ವಿರಾಟ್ ಕೊಹ್ಲಿ

ಬೆಂಗಳೂರು: (Virat Kohli Century) ಒಂದು ಕಾಲದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ್ರೆ ಸಾಕು, ಶತಕ ಕಟ್ಟಿಟ್ಟ ಬುತ್ತಿ. ಸೆಂಚುರಿಗಳ ಮೇಲೆ ಸೆಂಚುರಿಗಳನ್ನು ಬಾರಿಸಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ದ ಆಧುನಿಕ ಕ್ರಿಕೆಟ್’ನ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಈಗ ಶತಕದ ಬರ ಎದುರಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸಿ ಬರೋಬ್ಬರಿ ಸಾವಿರ ದಿನಗಳೇ ಕಳೆದು ಹೋಗಿವೆ. ಬಾಂಗ್ಲಾದೇಶ ವಿರುದ್ಧ 2019ರ ನವೆಂಬರ್ ತಿಂಗಳಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದ್ದೇ ಕೊನೆ. ನಂತರ ಕಿಂಗ್ ಕೊಹ್ಲಿಯ ಬ್ಯಾಟ್’ನಿಂದ ಶತಕ ಸಿಡಿದಿಲ್ಲ.

ಕೊನೆಯ ಬಾರಿ ಶತಕ ಬಾರಿಸಿದ ನಂತರ ವಿರಾಟ್ ಕೊಹ್ಲಿ 18 ಟೆಸ್ಟ್ ಪಂದ್ಯಗಳನ್ನಾಡಿದ್ದು 32 ಇನಿಂಗ್ಸ್’ಗಳಿಂದ 27.25ರ ಸರಾಸರಿಯಲ್ಲಿ 872 ರನ್ ಗಳಿಸಿದ್ದಾರೆ. ಈ ವೇಳೆ ಕೊಹ್ಲಿ ಆರು ಬಾರಿ ಅರ್ಧಶತಕದ ಗಡಿ ದಾಟಿದ್ರೂ ಶತಕ ಮಾತ್ರ ಒಲಿದಿಲ್ಲ.

70ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ಬಳಿಕ ವಿರಾಟ್ ಕೊಹ್ಲಿ 23 ಏಕದಿನ ಪಂದ್ಯಗಳನ್ನಾಡಿದ್ದು, 10 ಅರ್ಧಶತಗಳ ಸಹಿತ 35.82ರ ಸರಾಸರಿಯಲ್ಲಿ 824 ರನ್ ಕಲೆ ಹಾಕಿದ್ದಾರೆ. ಇದೇ ವೇಳೆ ಆಡಿದ 27 ಟಿ20 ಪಂದ್ಯಗಳಿಂದ 42.90 ಸರಾಸರಿಯಲ್ಲಿ 858 ರನ್ ಗಳಿಸಿದ್ದು ಅಜೇಯ 94 ರನ್ ಬೆಸ್ಟ್ ಸ್ಕೋರ್, ಇದೇ ಸಂದರ್ಭದಲ್ಲಿ ಕೊಹ್ಲಿ 8 ಟಿ20 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊನೆಯ ಶತಕ ಬಾರಿಸಿದ ನಂತರ ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿ 68 ಪಂದ್ಯಗಳನ್ನಾಡಿದ್ದು 82 ಇನ್ನಿಂಗ್ಸ್’ ಗಳಿಂದ 34.05ರ ಸರಾಸರಿಯಲ್ಲಿ 2,554 ರನ್ ಗಳಿಸಿದ್ದಾರೆ. ಈ ವೇಳೆ ಒಟ್ಟು 24 ಬಾರಿ ಅರ್ಧಶತಕದ ಗಡಿ ದಾಟಿದ್ರೂ, ಶತಕ ಮಾತ್ರ ಮರೀಚಿಕೆಯಾಗಿಯೇ ಉಳಿದು ಬಿಟ್ಟಿದೆ.

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ಬಿಡುವು ಪಡೆದಿರುವ ವಿರಾಟ್ ಕೊಹ್ಲಿ, ಏಷ್ಯಾ ಕಪ್ ಟಿ20 ಟೂರ್ನಿಯೊಂದಿಗೆ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ. ಏಷ್ಯಾ ಕಪ್ ಟೂರ್ನಿ ಆಗಸ್ಟ್ 17ರಂದು ಯುಎಇನಲ್ಲಿ ಆರಂಭವಾಗಲಿದ್ದು, ಆಗಸ್ಟ್ 28ರಂದು ದುಬೈನಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : KL Rahul Zimbabwe player : ಕೆ.ಎಲ್ ರಾಹುಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಬಂದ ಜಿಂಬಾಬ್ವೆ ಆಟಗಾರ

ಇದನ್ನೂ ಓದಿ : Virat Kohli Scooter Ride: ಪತ್ನಿಯನ್ನು ಕೂರಿಸಿಕೊಂಡು ಅಜ್ಞಾತ ವೇಷದಲ್ಲಿ ಸ್ಕೂಟರ್ ಓಡಿಸಿದ ವಿರಾಟ್ ಕೊಹ್ಲಿ

Virat Kohli 1000 days without Century

Comments are closed.