Gavi Gangadhareshwara : ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ: ಕೌತುಕಕ್ಕೆ ಸಾಕ್ಷಿಯಾಯ್ತು ಕರುನಾಡು

ಬೆಂಗಳೂರು : ಮಕರ ಸಂಕ್ರಮಣದ ಪರ್ವಕಾಲದಲ್ಲಿ ಕೌತುಕವೊಂದಕ್ಕೆ ರಾಜ್ಯ ರಾಜಧಾನಿ ಸಾಕ್ಷಿಯಾಗಿದ್ದು, ಪ್ರತಿವರ್ಷದಂತೆ ಬೆಂಗಳೂರಿನ ಗವಿ ಗಂಗಾಧರೇಶ್ವರ (Gavi Gangadhareshwara )ದೇವಾಲಯವನ್ನು ಪ್ರವೇಶಿಸಿದ ಸೂರ್ಯರಶ್ಮಿ ಗವಿಗಂಗಾಧರೇಶ್ವರ ಪಾದವನ್ನು ಸ್ಪರ್ಶಿಸಿದೆ. ಈ ದೃಶ್ಯವನ್ನು ಆಸ್ತಿಕರು ಕಣ್ತುಂಬಿಕೊಂಡಿದ್ದು ಪವಾಡದಂತಹ ಈ ಘಟನೆಗೆ ಅರ್ಚಕರು, ಭಕ್ತರು ಸಾಕ್ಷಿಯಾಗಿದ್ದಾರೆ. ಪ್ರತಿ ವರ್ಷ ಮಕರ ಸಂಕ್ರಮಣದ ಪರ್ವಕಾಲದಲ್ಲಿ ಪ್ರತಿವರ್ಷವೂ ಸೂರ್ಯ ರಶ್ಮಿ ಒಮ್ಮೇ ಗವಿಗಂಗಾಧರೇಶ್ವನನ್ನು ಸ್ಪರ್ಶಿಸೋದು ಒಂದು ಕೌತುಕದ ಸಂಗತಿ. ಇದು ನಮ್ಮ ಹಿರಿದಾದ ವಾಸ್ತುಶಿಲ್ಪದ ವೈಶಿಷ್ಟ್ಯತೆಯನ್ನು ಸಾರುವಂತಹ ಸಂಗತಿಯಾಗಿದೆ.

ಈ ವರ್ಷವೂ ಕೂಡ ಈ ಅಲೌಕಿಕವಾದ ಸಂಗತಿಗೆ ಗವಿಗಂಗಾಧರೇಶ್ವರ ದೇವಾಲಯ ಸಾಕ್ಷಿಯಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕೇವಲ ಅರ್ಚಕರು ಹಾಗೂ ದೇಗುಲದ ಸಿಬ್ಬಂದಿಗೆ ಮಾತ್ರ ಈ ದೇವಾಲಯಕ್ಕೆ ಹಾಗೂ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. 5.16 ನಿಮಿಷದಿಂದ ಆರಂಭವಾದ ಸೂರ್ಯ ರಶ್ಮಿ ಯ ಪ್ರವೇಶ ಪ್ರಕ್ರಿಯೆ 5.27 ರ ವೇಳೆಗೆ ಪೂರ್ಣಗೊಂಡಿತು. ದೇವಾಲಯದ ಪ್ರವೇಶದ್ವಾರ ದಿಂದ ಆರಂಭವಾದ ಸೂರ್ಯ ರಶ್ಮಿ ಪ್ರವೇಶ ಬಳಿಕ ನಂದಿಯ ಮುಖೇನ ಹಾದು ನಂದಿಯ ಕೊಂಬಿನ ಮೂಲಕ ಗರ್ಭಗುಡಿಗೆ ಪ್ರವೇಶಿಸಿತು.

ಗರ್ಭಗುಡಿ ಪ್ರವೇಶಿಸಿದ ಸೂರ್ಯ ರಶ್ಮಿಯು ಶಿವಲಿಂಗದ ಪಾದದಿಂದ ಆರಂಭಿಸಿ ಲಿಂಗದ ಶಿರೋಭಾಗವನ್ನು ಸ್ಪರ್ಶಿಸಿ ಧನ್ಯವಾಯಿತು. ಈ ಕೌತುಕವನ್ನು ಮಾಧ್ಯಮದ ಮೂಲಕ ನಾಡಿನ ಭಕ್ತರು ಕಣ್ತುಂಬಿಕೊಂಡು ಸಂಭ್ರಮಿಸಿದರು. ಸೂರ್ಯರಶ್ಮಿ ಸ್ಪರ್ಶಿಸಿದ ಈ ಕೌತುಕದ ಬಳಿಕ ಶಿವನಿಗೆ ಕ್ಷೀರ ಸೇರಿದಂತೆ ವಿವಿಧ ಪವಿತ್ರ ವಸ್ತುಗಳಿಂದ ಅಭಿಷೇಕ ನೆರವೇರಿಸಲಾಯಿತು. ಸೂರ್ಯರಶ್ಮಿ ಪ್ರವೇಶದ ಬಳಿಕ ಗಂಗಾಧರನಿಗೆ ಉಷ್ಣವಾಗೋದರಿಂದ ತಂಪುಗೊಳಿಸಲು ವಿವಿಧ ಬಗೆಯ ಅಭಿಷೇಕ ನಡೆಸೋದು ವಾಡಿಕೆ.

ಈ ವರ್ಷ ಎರಡು ನಿಮಿಷ 13 ಸೆಕೆಂಡ್ ಗಳ ಕಾಲ ಸೂರ್ಯರಶ್ಮಿ ಗವಿಗಂಗಾಧರೇಶ್ವರನ ಮೇಲೆ ತನ್ನ ಕಿರಣಗಳನ್ನು ಬೀರಿದ್ದು ಈ ಸುಂದರ ದೃಶ್ಯ ನೋಡುಗರನ್ನು ಸೆಳೆಯಿತು. ಈ ಕೌತುಕದ ಬಗ್ಗೆ ಮಾಹಿತಿ‌ನೀಡಿದ ಗವಿಗಂಗಾಧರೇಶ್ವರ ದೇವಾಲಯದ ಅರ್ಚಕರಾದ ಸೋಮ ಸುಂದರ್ ದೀಕ್ಷಿತರು, ಹೋದ ವರ್ಷ ಮೋಡದಿಂದಾಗಿ ಸೂರ್ಯ ರಶ್ಮಿ ಸಂಪೂರ್ಣ ಸ್ಪರ್ಶ ಆಗಿರಲಿಲ್ಲ. ಇದರಿಂದಾಗಿ ಏನೆಲ್ಲ ಅವಘಡಗಳಾಯ್ತು ಅನ್ನೋದನ್ನು ನಾವು ನೋಡಿದ್ದೇವೆ.

ಆದರೆ ಈ ವರ್ಷ ಸಂಪೂರ್ಣ ಸೂರ್ಯರಶ್ಮಿ ಸ್ಪರ್ಶವಾಗಿದೆ. ಈ ವರ್ಷ ಸೋಮಸೂತ್ರದ ಪಾರ್ವತಿಯನ್ನು ಮೊದಲು ಸ್ಪರ್ಶ ಮಾಡಿ ನಂತರ ಶಿವಲಿಂಗವನ್ನು ರಶ್ಮಿ ಸ್ಪರ್ಶಿಸಿದೆ. ಈ ವರ್ಷ ಪೂರ್ಣ ಪ್ರಮಾಣದಲ್ಲಿ ಸೂರ್ಯರಶ್ಮಿ ಸ್ಪರ್ಶದೊಂದಿಗೆ ನಾವು ಉತ್ತರಾಯಣ ಪ್ರವೇಶ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ವರ್ಷ ಶುಭವಾಗಲಿದೆ. ಈ ಕೊರೋನಾ ಪೀಡೆ ಅಲೆ ಅಲೆಯಾಗಿ ಸಂಪೂರ್ಣವಾಗಿ ತೊಲಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕೊರೋನಾ, ಓಮೈಕ್ರಾನ್ ಹಾಟ್ ಸ್ಪಾಟ್ : ಅಪಾರ್ಟ್ಮೆಂಟ್ ಗಳಿಗೆ ಪ್ರತ್ಯೇಕ ಮಾರ್ಗಸೂಚಿ

ಇದನ್ನೂ ಓದಿ : ನೈಟ್ ಕರ್ಪ್ಯೂ ಸಡಿಲಿಸದಿದ್ದರೇ ನಾವು ವ್ಯಾಪಾರ ಬಂದ್ ಮಾಡಲ್ಲ: ಸರ್ಕಾರಕ್ಕೆ ಹೊಟೇಲ್,ಬಾರ್ ಮಾಲೀಕರ ಎಚ್ಚರಿಕೆ

(Gavi Gangadhareshwara temple celebrate Makar Sankranti)

Comments are closed.