Beary Koota in Bengaluru: ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ನೆಲೆಸಿರುವ ಕರಾವಳಿಯ ಬ್ಯಾರಿ ಜನಾಂಗದ ಜನರು ಸೇರಿಕೊಂಡು ಎರಡನೇ ವರ್ಷದ ʼಬ್ಯಾರಿ ಕೂಟ 2026ʼ ಅನ್ನು ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದೆ. ಕಳೆದ ವರ್ಷ ಮೊದಲ ʼಬ್ಯಾರಿ ಕೂಟʼದ ಯಶಸ್ವಿಯ ನಂತರ ಎರಡನೇ ಬಾರಿಗೆ ನಡೆಸುತ್ತಿರುವ ಈ ಸಂಭ್ರಮಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಕಾರ್ಯಕ್ರಮವು ಫೆಬ್ರವರಿ 1 ರ ಭಾನುವಾರ ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಅತಿಥಿಗಳಾಗಿ ಬ್ಯಾರಿ ಸಮುದಾಯದ ವಿವಿಧ ಸಾಧಕರು, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಏನೆಲ್ಲ ಕಾರ್ಯಕ್ರಮಗಳು?
ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು (ರಿ.) ಫೆಬ್ರವರಿ 1 ರಂದು ಆಯೋಜಿಸಿರುವ ಬ್ಯಾರಿ ಕೂಟವು ಅಂದು ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣಗೊಳ್ಳಲಿದೆ. ಅನಂತರ ಹಲವು ಬಗೆಯ ಕಾರ್ಯಕ್ರಮಗಳು ಹಂತ ಹಂತವಾಗಿ ಅರಮನೆ ಮೈದಾನದಲ್ಲಿ ನಡೆಯಲಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ಯುವಕರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬ್ಯಾರಿ ಕ್ರೀಡೆ, ಬ್ಯಾರಿ ಒಪ್ಪಣೆ ಹಾಡು, ಕಲಾ ಪ್ರದರ್ಶನ, ಮಕ್ಕಳ ಆಟೋಟ ಸ್ಪರ್ಧೆ, ಬಿಝ್‌ಟೆಕ್ ಮೀಟ್, ಬ್ಯಾರಿ ಎಕ್ಸ್‌ಪೋ, ಕಿರು ನಾಟಕ, ಬ್ಯಾರಿ ಕವಿಗೋಷ್ಠಿ, ವಿಚಾರಗೋಷ್ಠಿ, ಆಹಾರ ಮೇಳ, ಆರೋಗ್ಯ ಶಿಬಿರ, ಬ್ಯಾರಿ ಚುಟುಕು ಮತ್ತು ಹಾಡುಗಳು, ಬೆಂಕಿ ರಹಿತ ಅಡುಗೆ (ಕುಕ್ಕಿಂಗ್ ವಿಥೌಟ್ ಫೈರ್) ಹಾಗೂ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇನ್ನು ಬ್ಯಾರಿ ಕೂಟಕ್ಕೆ ಪೂರ್ವಭಾವಿಯಾಗಿ ಪ್ರಚಾರಾರ್ಥವಾಗಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ, ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಮಾರ್ಚ್ 2026ರೊಳಗೆ ₹500 ನೋಟು ಅಮಾನ್ಯೀಕರಣ? ಕೇಂದ್ರ ಸರ್ಕಾರ- ಆರ್‌ಬಿಐ ನೀಡಿದ ಸ್ಪಷ್ಟನೆ ಇಲ್ಲಿದೆ
ಬ್ಯಾರಿ ಕೂಟದಲ್ಲಿ ಖ್ಯಾತ ವಸ್ತು ಸಂಗ್ರಾಹಕ ಯಾಸಿರ್ ಕಲ್ಲಡ್ಕ ಅವರ ಸಹಕಾರದೊಂದಿಗೆ ಬ್ಯಾರಿ ಎಕ್ಸ್‌ಪೋ, ಉದ್ಯಮ ಹಾಗೂ ಸ್ಟಾರ್ಟ್ ಅಪ್ ಕನಸು ಕಾಣುತ್ತಿರುವ ಯುವ ಪೀಳಿಗೆಗಾಗಿ ಬಿಝ್‌ಟೆಕ್ ಮೀಟ್ ಅನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಬ್ಯಾರಿ ಸಮುದಾಯದ ಉದ್ಯಮಿಗಳು, ತಾಂತ್ರಿಕ ಜ್ಞಾನ ಹೊಂದಿರುವ ಯುವ ಮಾರ್ಗದರ್ಶಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ, ಆಹಾರ ಮೇಳ, ಪುಸ್ತಕ ಮೇಳಕ್ಕೂ ಅವಕಾಶ ಒದಗಿಸಲಾಗಿದೆ.
ಬ್ಯಾರಿ ಅಂದರೆ ಯಾರು?
ಬ್ಯಾರಿ ಅಂದರೆ ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ವಾಸಿಸುತ್ತಿರುವ ಬ್ಯಾರಿ ಭಾಷೆಯನ್ನು ಮಾತನಾಡುವ ಜನಾಂಗವಾಗಿದೆ. ಬಹುತೇಕ ಈ ಭಾಷೆಯು ಕರಾವಳಿಯ ಮುಸ್ಲಿಮರ ಮಾತೃಭಾಷೆಯಾಗಿದೆ. ಉದ್ಯೋಗದ ಕಾರಣಕ್ಕಾಗಿ ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅಂತೆಯೇ, ಇತ್ತೀಚಿನ ಕೆಲ ದಶಕಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಉದ್ದಿಮೆ ಅಥವಾ ನೌಕರರಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಬ್ಯಾರಿ ಜನಾಂಗದ ಮಂದಿ ಸೇರಿ ಎರಡು ವರ್ಷಗಳ ಹಿಂದೆ ಸ್ಥಾಪಿಸಿದ ಸಂಸ್ಥೆಯಾಗಿದೆ ʼಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು (ರಿ.)ʼ, ಪ್ರಸ್ತುತ ಇದರ ಎರಡನೇ ಅವಧಿಗೂ ಶಬೀರ್ ಬ್ರಿಗೇಡ್ ಅವರು ಅಧ್ಯಕ್ಷರಾಗಿದ್ದಾರೆ.



