ಮೈಸೂರು ಅರಮನೆ ಬಳಿ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

Explodes Near Mysuru Palace latest news: ಗುರುವಾರ (ಡಿಸೆಂಬರ್ 25) ಕ್ರಿಸ್‌ಮಸ್ ರಜೆ ಮತ್ತು ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಅರಮನೆ ನೋಡಲು ಸಾವಿರಾರು ಪ್ರವಾಸಿಗರು ಜಮಾಯಿಸಿದ್ದರು. ರಾತ್ರಿ ಸುಮಾರು 8:30 ರಿಂದ 8:45 ರ ಸಮಯದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದ (ಗೇಟ್) ಬಳಿ ಈ ದುರ್ಘಟನೆ ಸಂಭವಿಸಿದೆ.

Mysuru Blast

Explodes Near Mysuru Palace updates: ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಆವರಣದ ಬಳಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರು ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುರುವಾರ (ಡಿಸೆಂಬರ್ 25) ಕ್ರಿಸ್‌ಮಸ್ ರಜೆ ಮತ್ತು ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಅರಮನೆ ನೋಡಲು ಸಾವಿರಾರು ಪ್ರವಾಸಿಗರು ಜಮಾಯಿಸಿದ್ದರು. ರಾತ್ರಿ ಸುಮಾರು 8:30 ರಿಂದ 8:45 ರ ಸಮಯದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದ (ಗೇಟ್) ಬಳಿ ಈ ದುರ್ಘಟನೆ ಸಂಭವಿಸಿದೆ. ಬಲೂನ್ ಮಾರಾಟಗಾರನೊಬ್ಬ ಸೈಕಲ್‌ನಲ್ಲಿಟ್ಟುಕೊಂಡಿದ್ದ ಗ್ಯಾಸ್ ಸಿಲಿಂಡರ್ ಮೂಲಕ ಬಲೂನ್‌ಗಳಿಗೆ ಗ್ಯಾಸ್ ತುಂಬಿಸುತ್ತಿದ್ದಾಗ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡಿದೆ.

ಸಾವಿನ ವಿವರ:
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಿಲಿಂಡರ್ ಛಿದ್ರಗೊಂಡಿದ್ದು, ಬಲೂನ್ ಮಾರಾಟ ಮಾಡುತ್ತಿದ್ದ ಸುಮಾರು 40 ವರ್ಷದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟದ ರಭಸಕ್ಕೆ ವ್ಯಕ್ತಿಯ ದೇಹವೂ ಛಿದ್ರಗೊಂಡಿದೆ ಎಂದು ವರದಿಯಾಗಿದೆ.

ಗಾಯಾಳುಗಳ ವಿವರ:
ಸ್ಫೋಟ ಸಂಭವಿಸಿದ ಜಾಗದಲ್ಲಿದ್ದ ನಾಲ್ವರು ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಲಕ್ಷ್ಮಿ: ಬೆಂಗಳೂರು ಮೂಲದವರು (ಸ್ಥಿತಿ ಗಂಭೀರ)

ಮಂಜುಳಾ: ನಂಜನಗೂಡು ನಿವಾಸಿ

ಶಾಹೀನ್ ಶಬ್ಬೀರ್: ಕೋಲ್ಕತ್ತಾ ಮೂಲದವರು

ಕೊಟ್ರೇಶಿ: ರಾಣೆಬೆನ್ನೂರು ನಿವಾಸಿ

ಇದನ್ನೂ ಓದಿ: ದಕ್ಷಿಣ ಕನ್ನಡದ ಈ 140 ಕೋಟಿಗೆ ಹಿಂದೆ ಮುಂದೆ ಯಾರೂ ಇಲ್ಲ! ಕರ್ನಾಟಕದ ಬ್ಯಾಂಕ್‌ಗಳಲ್ಲಿ ಕ್ಲೇಮ್‌ ಮಾಡದ ಹಣ 3,400 ಕೋಟಿ

ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ, ಶ್ವಾನ ದಳ ಮತ್ತು ಸ್ಫೋಟಕ ತಜ್ಞರು ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸುತ್ತಿದ್ದಾರೆ. ಇದು ಅಪ್ಪಟ ಅಪಘಾತವಾಗಿದ್ದು, ಬಲೂನ್ ತುಂಬಿಸಲು ಬಳಸುವ ನೈಟ್ರೋಜನ್ ಅಥವಾ ಹೀಲಿಯಂ ಗ್ಯಾಸ್ ಸಿಲಿಂಡರ್‌ನಲ್ಲಿದ್ದ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಜನದಟ್ಟಣೆ ಹೆಚ್ಚಿದ್ದ ಸಮಯದಲ್ಲಿ ನಡೆದ ಈ ಸ್ಫೋಟದಿಂದಾಗಿ ಪ್ರವಾಸಿಗರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಜನರು ಪ್ರಾಣಭಯದಿಂದ ಓಡಾಟ ನಡೆಸಿದ್ದರಿಂದ ಗೊಂದಲದ ಪರಿಸ್ಥಿತಿ ಉಂಟಾಗಿತ್ತು.

Scroll to Top