Krishnamurthy Acharya : ಡಿಕೆಶಿಯ ರಾಜಿ ಸಂಧಾನಕ್ಕೆ ಒಪ್ಪುವರೇ ಕೃಷ್ಣಮೂರ್ತಿ ಆಚಾರ್ಯ ?

ಉಡುಪಿ : (Kannada Newsnext Desk) ಕರ್ನಾಟಕ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಕಾಂಗ್ರೆಸ್‌ ಕನಸಿಗೆ ಇದೀಗ ಸ್ವಪಕ್ಷೀಯರೇ ಮಗ್ಗುಲ ಮುಳ್ಳಾಗಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ಸಿಗದೇ ಕಾಂಗ್ರೆಸ್‌ ಪಕ್ಷದ ವಿರುದ್ದ ಮುನಿಸಿಕೊಂಡಿರುವ ಕೃಷ್ಣಮೂರ್ತಿ ಆಚಾರ್ಯ (Krishnamurthy Acharya) ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಶತಾಯಗತಾಯ ಮನವೊಲಿಕೆಗೆ ಪ್ರಯತ್ನಗಳು ನಡೆಯುತ್ತಿದ್ದರೂ ಕೂಡ ಯಶಸ್ಸು ಮಾತ್ರ ಧಕ್ಕಿಲ್ಲ. ಇದೀಗ ಸಂಧಾನಕ್ಕೆ ಡಿಕೆ ಬಾಸ್‌ ಎಂಟ್ರಿ ಕೊಟ್ಟಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ರಮೇಶ್‌ ಕಾಂಚನ್‌, ಕೃಷ್ಣಮೂರ್ತಿ ಆಚಾರ್ಯ, ಅಮೃತ್‌ ಶೆಣೈ ಹಾಗೂ ಪ್ರಸಾದ್‌ ರಾಜ್‌ ಕಾಂಗ್ರೆಸ್‌ ಆಕಾಂಕ್ಷಿಗಳಾಗಿದ್ದರು. ಈ ಪೈಕಿ ಅಂತಿಮ ಹಂತದಲ್ಲಿ ಕಾಂಗ್ರೆಸ್‌ ಪಕ್ಷ ಪ್ರಸಾದ್‌ ರಾಜ್‌ ಕಾಂಚನ್‌ ಅವರಿಗೆ ಜೈ ಎಂದಿದೆ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವ ರಮೇಶ್‌ ಕಾಂಚನ್‌ ಹಾಗೂ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ನಿರಾಸೆಯಾಗಿತ್ತು. ಆರಂಭದಲ್ಲಿ ಅಸಮಾಧಾನಗೊಂಡಿದ್ದ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ಹಾಗೂ ಅಮೃತ್‌ ಶೆಣೈ ನೋವನ್ನು ಮರೆತು ಚುನಾವಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಕೃಷ್ಣಮೂರ್ತಿ ಆಚಾರ್ಯ ತಮ್ಮ ಬೆಂಬಲಿಗರ ಸಭೆಯನ್ನು ಕರೆದು ಅಭಿಪ್ರಾಯವನ್ನು ಸಂಗ್ರಹಿಸಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕೃಷ್ಣಮೂರ್ತಿ ಆಚಾರ್ಯ ಅವರ ಸ್ಪರ್ಧೆಯಿಂದ ಕಾಂಗ್ರೆಸ್‌ ಮತಗಳು ವಿಭಜನೆ ಆಗುವುದು ಪಕ್ಕಾ. ಕಳೆದ ಹಲವು ವರ್ಷಗಳಿಂದಲೂ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ಪ್ರತಿನಿಧಿಸುತ್ತಿದ್ದರು. ಸದ್ಯ ರಘುಪತಿ ಭಟ್‌ ಕೂಡ ಬ್ರಾಹ್ಮಣ ಸಮುದಾಯದವರು. ರಘುಪತಿ ಭಟ್‌ ಅವರಿಗೆ ಟಿಕೆಟ್‌ ಕೈತಪ್ಪಿದೆ. ಹಾಲಿ ಶಾಸಕರು ಕಣ್ಣೀರು ಹಾಕಿರುವುದು ಬ್ರಾಹ್ಮಣ ಸಮುದಾಯಕ್ಕೆ ಬೇಸರ ಮೂಡಿಸಿದೆ ಎನ್ನಲಾಗುತ್ತಿದ್ದು, ಹೀಗಾಗಿ ಬ್ರಾಹ್ಮಣ ಸಮುದಾಯದ ಮತಗಳು ಕೃಷ್ಣಮೂರ್ತಿ ಆಚಾರ್ಯ ಅವರ ಕೈ ಹಿಡಿಯಲಿದೆ ಅನ್ನೋದು ಸದ್ಯದ ಲೆಕ್ಕಾಚಾರ. ಕೃಷ್ಣಮೂರ್ತಿ ಆಚಾರ್ಯ ಅವರು ಕಣಕ್ಕೆ ಇಳಿದಿರುವುದು ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳಿಗೆ ಆತಂಕ ಮೂಡಿಸಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಹಲವು ವರ್ಷಗಳಿಂದಲೂ ಗುರುತಿಸಿಕೊಂಡಿರುವ ಕೃಷ್ಣಮೂರ್ತಿ ಆಚಾರ್ಯ ಉಡುಪಿ ನಗರ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲಿಯೂ ಮತಗಳನ್ನು ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ನಾಯಕರು ಕೃಷ್ಣಮೂರ್ತಿ ಆಚಾರ್ಯ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ನಾಮಪತ್ರ ಸಲ್ಲಿಕೆಯ ದಿನದಿಂದಲೂ ಟಿಕೆಟ್‌ ಸಿಗದೇ ಅಸಮಾಧಾನಗೊಂಡಿರುವ ನಾಯಕರ ಮನವೊಲಿಕೆ ಕಸರತ್ತು ನಡೆಸಿದ್ದರು. ಹಲವು ಬಾರಿ ರಾಜಿ ಸಂಧಾನ ನಡೆಸಿದ್ದರೂ ಕೂಡ ಕೃಷ್ಣಮೂರ್ತಿ ಆಚಾರ್ಯ ಅವರ ಮನವೊಲಿಕೆ ಪ್ರಯೋಜನವಾಗಿರಲಿಲ್ಲ. ಕೃಷ್ಣಮೂರ್ತಿ ಆಚಾರ್ಯ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಉನ್ನತ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರಂತೆ. ಆದರೆ ಸದ್ಯಕ್ಕೆ ಈ ಹುದ್ದೆಯನ್ನು ನೀಡಲು ಕಾಂಗ್ರೆಸ್‌ ವರಿಷ್ಠರು ಸಿದ್ದರಿಲ್ಲ. ಒಂದೊಮ್ಮೆ ಕೃಷ್ಣಮೂರ್ತಿ ಆಚಾರ್ಯ ಅವರು ಕಣದಲ್ಲಿ ಉಳಿದ್ರೆ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತವಾಗುವುದು ಖಚಿತ. ಇದೇ ಕಾರಣಕ್ಕೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಂಟ್ರಿ ಕೊಟ್ಟಿದ್ದಾರೆ. ಇಂದು ಉಡುಪಿಗೆ ಆಗಮಿಸಿ ಪಾದಯಾತ್ರೆ ನಡೆಸಲಿರುವ ಡಿಕೆಶಿ ಕೃಷ್ಣಮೂರ್ತಿ ಆಚಾರ್ಯ ಅವರ ಜೊತೆಗೆ ರಾಜಿ ಸಂಧಾನ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : Modi Surname Case : ಮೇ 15ರವರೆಗೆ ಕಾಂಗ್ರೆಸ್‌ ರಾಹುಲ್ ಗಾಂಧಿಗೆ ರಿಲೀಫ್ ನೀಡಿದ ಪಾಟ್ನಾ ಹೈಕೋರ್ಟ್

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಸಮುದಾಯದ ಅಭ್ಯರ್ಥಿಗಳು ಎರಡೂ ಪಕ್ಷಗಳಿಂದ ಕಣಕ್ಕೆ ಇಳಿದಿರುವುದು ಇದೇ ಮೊದಲೇ. ಮೊಗವೀರ ಸಮುದಾಯ ಮತಗಳು ವಿಭಜನೆ ಆಗುವುದು ಖಚಿತ. ಹೀಗಾಗಿ ಇತರ ಸಮುದಾಯದ ಮತಗಳನ್ನು ಪಡೆಯಬಹುದು ಅನ್ನೋ ಲೆಕ್ಕಾಚಾರ ಕೃಷ್ಣಮೂರ್ತಿ ಆಚಾರ್ಯ ಅವರದ್ದು. ಒಂದು ಮೂಲಗಳ ಪ್ರಕಾರ ಕೃಷ್ಣಮೂರ್ತಿ ಆಚಾರ್ಯ ಅವರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ತೀರಾ ಕಡಿಮೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಒಂದೊಮ್ಮೆ ಡಿಕೆಶಿ ರಾಜಿ ಸಂಧಾನಕ್ಕೂ ಕೃಷ್ಣಮೂರ್ತಿ ಆಚಾರ್ಯ ಒಪ್ಪದೇ ಇದ್ರೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತ. ಇದನ್ನೂ ಓದಿ : ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ : ಅಕ್ರಮ ಆಸ್ತಿ ಎಷ್ಟು ಗೊತ್ತೆ ?

Comments are closed.