ಬಿಸಿಲಿನ ಬೇಗೆಗೆ ತತ್ತರಿಸಿದ ಕರಾವಳಿ ಕರ್ನಾಟಕ : ಹವಾಮಾನ ಇಲಾಖೆಯಿಂದ ಉಷ್ಣ ಅಲೆ ಎಚ್ಚರಿಕೆ
ರಾಜ್ಯಾದ್ಯಂತ ಜನತೆ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದಾರೆ. ಏಪ್ರಿಲ್ ಮಧ್ಯದಲ್ಲಿ ಇರುವಾಗಲೇ ಬಿಸಿಲ ಬೇಗೆ ಜನರನ್ನು ಹೈರಾಣಾಗಿಸಿದೆ. ಇನ್ನು ಕರಾವಳಿ ಕರ್ನಾಟಕ ಭಾಗದಲ್ಲಂತೂ ಬೇಸಿಗೆಯ ಧಗೆ ಮಿತಿಮೀರಿ ಹೋಗಿದ್ದು, ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಈ ಭಾಗದ ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗಳವರೆಗೂ ಏರಿಕೆ ಕಾಣಬಹುದು ಎಂದು ಐಎಂಡಿ ಮಾಹಿತಿ ನೀಡಿದೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಾಪಮಾನ ಏರಿಕೆ ಕಾಣುತ್ತಲೇ ಇದ್ದು, ತಾಪಮಾನ ಇಂದು 42 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಐಎಂಡಿ ತಿಳಿಸಿದೆ. ಹೀಗಾಗಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಅಗತ್ಯ ಚಟುವಟಿಕೆಗಳು ಇದ್ದಲ್ಲಿ ಮಾತ್ರ ಮನೆಯಿಂದ ಹೊರಬರುವಂತೆ ಸೂಚನೆ ನೀಡಲಾಗಿದೆ. ಇನ್ನುಳಿದಂತೆ ಭಾರತೀಯ ಹವಾಮಾನ ಇಲಾಖೆಯು ವಿಜಯಪುರ, ಕಲಬುರ್ಗಿ, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿಯೂ ಹೀಟ್ ವೇವ್ ಅಲರ್ಟ್ ನೀಡಿದೆ.
ಇದನ್ನೂ ಓದಿ: ಚಾರಣಕ್ಕೆ ತೆರಳುವವರಿಗೆ ಹೊಸ ನಿಯಮ..! ನೇಚರ್ ಗೈಡ್ ಇಲ್ಲದೇ ಟ್ರೆಕ್ಕಿಂಗ್ಗೆ ಇಲ್ಲ ಅವಕಾಶ
ಬೇಸಿಗೆ ರಜೆ ಬೇರೆ ಇರುವುದರಿಂದ ಮಕ್ಕಳನ್ನು ಬಿಸಿಲ ಧಗೆ ಮಿತಿಮೀರಿದ ಹೊತ್ತಿನಲ್ಲಿ ಹೊರಗೆ ಆಟಕ್ಕೆ ಕಳುಹಿಸದಂತೆ ಸೂಚನೆ ನೀಡಲಾಗಿದೆ. ಹೀಟ್ ವೇವ್ನಿಂದಾಗಿ ಸನ್ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಮಕ್ಕಳನ್ನು ಒಳಾಂಗಣ ಆಟಗಳಿಗೆ ಸೀಮಿತವಾಗಿಸುವಂತೆ ಸಲಹೆ ನೀಡಲಾಗಿದೆ. ಆದಷ್ಟು ಎಳನೀರು, ಮಜ್ಜಿಗೆ , ಹಣ್ಣಿನ ರಸಗಳನ್ನೇ ಬಳಸಿ ತಯಾರಿಸಿದ ತಂಪು ಪಾನೀಯಗಳನ್ನು ಸೇವಿಸಿ. ಹತ್ತಿ ಬಟ್ಟೆಯನ್ನು ಧರಿಸುವಂತೆ ಹಾಗೂ ಮನೆಯಿಂದ ಹೊರಬರುವಾಗ ಕ್ಯಾಪ್ ಹಾಗೂ ಛತ್ರಿಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.



