ಉತ್ತರ ಕರ್ನಾಟಕದಲ್ಲಿ ಬಿಸಿಲ ಆರ್ಭಟ..! ರಾಜಧಾನಿಯಲ್ಲಿ ತಂಪಾದ ವಾತಾವರಣ
ಉತ್ತರ ಕರ್ನಾಟಕದಲ್ಲಿ ಬಿಸಿಲ ತಾಪ ಜನರನ್ನು ಹೈರಾಣಾಗಿಸಿದರೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾರವಣ ನಿರ್ಮಾಣವಾಗಿದೆ.
ರಾಜ್ಯದ ಹವಾಮಾನದಲ್ಲಿ ಭಾರೀ ಏರುಪೇರು ಉಂಟಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಸಿಂಚನವಾದರೆ, ಮತ್ತೊಂದೆಡೆ ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಬಿಸಿಲ ತಾಪ ಜನರನ್ನು ಹೈರಾಣಾಗಿಸಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾರವಣ ನಿರ್ಮಾಣವಾಗಿದ್ದು ಮಳೆಯ ಲಕ್ಷಣ ಕಡಿಮೆಯಿದೆ.
ಸಮುದ್ರ ತೀರದಲ್ಲಿ ಆರ್ದ್ರತೆ ಗಣನೀಯ ಹೆಚ್ಚಿದ್ದು, ವಿಪರೀತ ಸೆಖೆಯ ಅನುಭವವಾಗಿದೆ. ಗಾಳಿಯಲ್ಲಿ ತೇವಾಂಶ ಹೆಚ್ಚಿರುವ ಕಾರಣ ಜನರು ಬೆವರಿನಿಂದ ತತ್ತರಿಸುತ್ತಿದ್ದು, ಉಷ್ಣಾಂಶವು ಸರಾಸರಿಗಿಂತ ಹೆಚ್ಚಾಗಿಯೇ ದಾಖಲಾಗುತ್ತಿದೆ. ಕಡಲತೀರದ ಜಿಲ್ಲೆಗಳಲ್ಲಿ ರಾತ್ರಿ ವೇಳೆಯೂ ಸೆಖೆಯ ತೀವ್ರತೆ ಕಡಿಮೆಯಾಗುತ್ತಿಲ್ಲ.
ಇದನ್ನೂ ಓದಿ: ಸೆಖೆಯಿಂದ ಕಂಗಾಲಾದವರಿಗೆ ವರುಣನ ಸಿಂಚನ : ಉತ್ತರ ಕರ್ನಾಟಕದಿಂದ ಕರಾವಳಿಯವರೆಗೆ ಇರಲಿದೆ ಮಳೆರಾಯನ ದರ್ಬಾರ್
ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹವಾಮಾನ ಕೊಂಚ ತಂಪಾಗಿ ಇರಲಿದೆ. ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುವ ಮುನ್ಸೂಚನೆ ಇದೆ. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಧೂಳು ಮಿಶ್ರಿತ ಗಾಳಿ ಬೀಸುತ್ತಿದ್ದು, ಸಂಜೆ ವೇಳೆಗೆ ಸ್ವಲ್ಪ ಮೋಡಕವಿದ ವಾತಾವರಣ ಕಂಡುಬರಬಹುದು.



