ರಾಜ್ಯದಲ್ಲೂ ಶೀಘ್ರದಲ್ಲೇ ಬರಲಿದ್ಯಾ ಮಹಾರಾಷ್ಟ್ರ ಮಾದರಿ ರೂಲ್ಸ್: ‘ಕನ್ನಡ್ ಗೊತ್ತಿಲ್ಲ’ ಎನ್ನುವವರ ಡಿಎಲ್ ರದ್ದು..!?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಗೊತ್ತಿಲ್ಲದ ಕ್ಯಾಬ್ ಚಾಲಕರಿಗೆ ಕೊರತೆಯಿಲ್ಲ. ಆದರೆ ಇದೀಗ ಕನ್ನಡ ಬಾರದ ಕ್ಯಾಬ್ ಹಾಗೂ ಆಟೋ ಚಾಲಕರಿಗೆ ಹೊಸ ಸಂಕಷ್ಟವೊಂದು ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮಹಾರಾಷ್ಟ್ರದಲ್ಲಿ ಮರಾಠಿ ಬಾರದ ಕ್ಯಾಬ್ ಚಾಲಕರ ಲೈಸೆನ್ಸ್ ರದ್ದು ಮಾಡಿದ ರೀತಿಯಲ್ಲಿಯೇ ಕರ್ನಾಟಕದಲ್ಲಿಯೂ ಕನ್ನಡ ಬಾರದ ಕ್ಯಾಬ್ ಚಾಲಕರಿಗೆ ನಿಯಮಾವಳಿ ರೂಪಿಸಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಕನ್ನಡ ಬಾರದ ಕ್ಯಾಬ್ ಚಾಲಕರು ಹಾಗೂ ಅನ್ಯ ಭಾಷೆ ಅರಿಯದ ಕನ್ನಡಿಗ ಪ್ರಯಾಣಿಕರ ನಡುವೆ ನಿತ್ಯ ಉಂಟಾಗುತ್ತಿರುವ ಕಿರಿಕಿರಿ ತಪ್ಪಿಸಲು ಇಂತಹ ಪರಿಣಾಮಕಾರಿ ನಿರ್ಣಯ ಕೈಗೊಳ್ಳಬೇಕು ಎಂದು ಸಾರಿಗೆ ಸಂಘಟನೆಗಳ ಒಕ್ಕೂಟವು ಆಗ್ರಹಿಸಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯರಿಗೂ ಪತ್ರ ಬರೆಯಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರವು ಮೇ 1 ರಂದು ಮಹಾರಾಷ್ಟ್ರ ದಿನಾಚರಣೆಯ ಪ್ರಯುಕ್ತ ಈ ನೂತನ ನಿಯಮ ಜಾರಿಗೆ ತರುತ್ತಿದೆ. ಇಲ್ಲಿನ ಸಾರಿಗೆ ಇಲಾಕೆಯು ಮರಾಠಿ ಓದಲು, ಬರೆಯಲು ಹಾಗೂ ಮಾತನಾಡಲು ಬಾರದ ಆಟೋ ಹಾಗೂ ಕ್ಯಾಬ್ ಚಾಲಕರ ಡಿಎಲ್ ರದ್ದುಗೊಳಿಸಲಿದೆ. ಈ ಮೂಲಕ ವಲಸಿಗ ಚಾಲಕರೂ ಮರಾಠಿ ಕಲಿಯಬೇಕು ಹಾಗೂ ಮರಾಠಿ ಬಾರದ ಚಾಲಕರಿಂದ ಉಂಟಾಗುವ ಕಿರಿಕಿರಿ ತಪ್ಪಿಸುವುದು ಈ ನಿಯಮಾವಳಿಯ ಉದ್ದೇಶವಾಗಿದೆ .
ಇನ್ನು ಈ ವಿಚಾರವಾಗಿ ಮಾತನಾಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ಈ ಸಂಬಂಧ ನಾವು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಿಗೆ ಶೀಘ್ರದಲ್ಲೇ ಪತ್ರ ಬರೆಯಲಿದ್ದೇವೆ. ತಮಿಳುನಾಡಿನಲ್ಲಿಯೂ ವಾಹನ ಪರವಾನಗಿ ನೀಡುವ ಸಂದರ್ಭದಲ್ಲಿ ತಮಿಳು ಜ್ಞಾನದ ಬಗ್ಗೆ ಪರೀಕ್ಷಿಸಲಾಗುತ್ತದೆ. ಇತ್ತ ಮಹಾರಾಷ್ಟ್ರದಲ್ಲಿಯೂ ನೂತನ ನಿಯಮ ಜಾರಿಗೆ ಬರುತ್ತಿದೆ.
ಇದನ್ನೂ ಓದಿ: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್..! ಪ್ರತಿ ಯುನಿಟ್ಗೆ 56 ಪೈಸೆ ಹೈಕ್
ಹೀಗಾಗಿ ಕರ್ನಾಟಕದಲ್ಲಿಯೂ ಕನ್ನಡ ಭಾಷೆಯ ಅಸ್ಮಿತೆ ಕಾಪಾಡುವ ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವ ಅನ್ಯಭಾಷಿಕ ಚಾಲಕರ ಹಾವಳಿ ತಪ್ಪಿಸಲು ಈ ನಿಯಮ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.



