Kannada Rajyotsava 2022: ಕರುನಾಡಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ 8 ರಾಷ್ಟ್ರ ಕವಿಗಳು ಇವರು

Kannada Rajyotsava 2022: ಕರುನಾಡು.. ಕಲೆಗಳ ತವರೂರು.. ಹಚ್ಚ ಹಸುರಿನ ನಡುವೆ ಕಂಗೊಳಿಸುವ ಈ ಗಂಧದ ನಾಡಲ್ಲಿ ಅವೆಷ್ಟೋ ಕಲಾವಿದರು ಬಾಳಿ ಬದುಕಿ ತಮ್ಮ ಕಲೆಗಳ ಮೂಲಕ ನಾಡಿಗೆ ಹಿರಿಮೆಯ ಗರಿಯನ್ನು ತಂದಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಾಡಿನ ಕೀರ್ತಿಯನ್ನು ಪಸರಿಸಿದ ಕಲಾವಿದರು ನಮ್ಮಲ್ಲಿದ್ದಾರೆ. ಅದರಲ್ಲಿ ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ 8 ಮಂದಿ ಸಾಹಿತಿಗಳ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ತಿಳಿದುಕೊಳ್ಳಲೇಬೇಕಿದೆ. ಅದಕ್ಕೂ ಮುನ್ನ ಜ್ಞಾನಪೀಠ ಪ್ರಶಸ್ತಿ ಬಗ್ಗೆ ಒಂದಿಷ್ಟು ಮಾಹಿತಿಗಳು ಇಲ್ಲಿವೆ.

ಜ್ಞಾನಪೀಠ ಬಗ್ಗೆ ನಿಮಗೆಷ್ಟು ಗೊತ್ತು?
ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೀಡಲಾಗುವ ಭಾರತದ ಅತ್ಯುನ್ನತ ಗೌರವವೇ ಜ್ಞಾನಪೀಠ ಪ್ರಶಸ್ತಿ. 1961ರಲ್ಲಿ ಭಾರತದ ಜ್ಞಾನಪೀಠ ಸಂಸ್ಥೆಯು ಜ್ಞಾನಪೀಠ ಪ್ರಶಸ್ತಿಯನ್ನು ಪರಿಚಯಿಸಿತು. 1965ರಲ್ಲಿ ಮಲಯಾಳಂ ಲೇಖಕ ಜಿ.ಶಂಕರ್ ಕುರುಪ್ ಅವರು ತಮ್ಮ ಒಡಕ್ಕುಝಲ್ (ಬಿದಿರಿನ ಕೊಳಲು) ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿ ಪಡೆದರು. ಈ ಮೂಲಕ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ : Namma Metro QR Code : ಪ್ರಯಾಣಿಕರಿಗೆ ರಾಜ್ಯೋತ್ಸವ ಕೊಡುಗೆ: ಕ್ಯೂ ಆರ್ ಕೋಡ್ ಜಾರಿಗೆ ತಂದ ನಮ್ಮ ಮೆಟ್ರೋ

ಜ್ಞಾನಪೀಠ ಪ್ರಶಸ್ತಿಯ ವಿಶೇಷತೆಗಳೇನು..?
* ಜ್ಞಾನಪೀಠ ಪ್ರಶಸ್ತಿಯು ಸಾಹಿತಿಗಳಿಗೆ ನೀಡುವ ಭಾರತದ ಅತ್ಯುನ್ನತ್ತ ಪ್ರಶಸ್ತಿಗಳಲ್ಲಿ ಅಗ್ರಸ್ಥಾನದಲ್ಲಿದೆ.
* 1944ರಲ್ಲಿ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ಸಾಹು ಶಾಂತಿ ಪ್ರಸಾದ್ ಜೈನ್ ಅವರು ಈ ಪ್ರಶಸ್ತಿಯನ್ನು ನೀಡುವ ಸಂಸ್ಥೆಯನ್ನು ಸ್ಥಾಪಿಸಿದರು.
* 8ನೇ ಶೆಡ್ಯೂಲ್ ನಲ್ಲಿ ಪಟ್ಟಿ ಮಾಡಲಾದ ಭಾರತದ 22 ಭಾಷೆಗಳಲ್ಲಿ ಯಾವುದಾದರೊಂದು ಭಾಷೆಯಲ್ಲಿ ಬರೆಯುವ ಭಾರತದ ಯಾವುದೇ ನಾಗರಿಕರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
* 1965ರಿಂದ ಕಳೆದ 2021ರವರೆಗೆ 8 ಮಂದಿ ಕನ್ನಡಿಗರು ಸೇರಿ 57 ಮಂದಿ ಭಾರತದ ಸಾಹಿತಿಗಳು ಈ ಪ್ರಶಸ್ತಿಗೆ ಬಾಜನರಾಗಿದ್ದಾರೆ.
* ದೇಶದ 22 ಭಾಷೆಗಳಲ್ಲಿ ಅತ್ಯದ್ಭುತ ಸಾಹಿತ್ಯವನ್ನು ರಚಿಸಿದವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
* 49ನೇ ಜ್ಞಾನಪೀಠ ಪ್ರಶಸ್ತಿ ಬಳಿಕ ಇಂಗ್ಲಿಷ್ ಭಾಷೆ ಕೂಡಾ ಇದಕ್ಕೆ ಸೇರ್ಪಡೆ ಮಾಡಲಾಯಿತು. ಲೇಖಕ ಅಮಿತಾವ್ ಘೋಷ್ ಇಂಗ್ಲಿಷ್ ಕಾದಂಬರಿಗೆ ಈ ಪ್ರಶಸ್ತಿಯನ್ನು ಪಡೆದ ಮೊದಲ ಸಾಹಿತಿ.
* ಜ್ಞಾನಪೀಠ ಪ್ರಶಸ್ತಿಯನ್ನು ಪ್ರತಿವರ್ಷ ನೀಡಲಾಗುತ್ತದೆ. ಒಮ್ಮೆ ಒಂದು ಭಾಷೆಗೆ ಈ ಪ್ರಶಸ್ತಿ ಬಂದರೆ, ಇನ್ನೆರಡು ವರ್ಷಗಳ ಕಾಲ ಆ ಭಾಷೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
* ಜ್ಞಾನಪೀಠ ಪ್ರಶಸ್ತಿಯು 11 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಮತ್ತು ವಾಗ್ದೇವಿಯ ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ.
* 1965ರಲ್ಲಿ 1 ಲಕ್ಷ ರೂ. ಬಹುಮಾನದೊಂದಿಗೆ ಪ್ರಶಸ್ತಿ ಪ್ರದಾನ ಆರಂಭಗೊಂಡಿತ್ತು. 2005ರಲ್ಲಿ ಅದರ ಮೌಲ್ಯವನ್ನು 7ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಪ್ರಸ್ತುತ 11 ಲಕ್ಷ ರೂ. ನಗದು ನೀಡಲಾಗುತ್ತಿದೆ.
* 1976ರಲ್ಲಿ ಬಂಗಾಳಿಯ ಆಶಾಪೂರ್ಣದೇವಿ ಈ ಪ್ರಶಸ್ತಿಗೆ ಬಾಜನರಾಗಿ, ಮೊದಲ ಮಹಿಳಾ ಜ್ಞಾನಪೀಠ ಪ್ರಶಸ್ತಿ ಪುರಸ್ಕøತೆ ಎನಿಸಿಕೊಂಡರು.
* ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುವುದಿಲ್ಲ.
* 11 ಜ್ಞಾನಪೀಠ ಪ್ರಶಸ್ತಿಯನ್ನು ಬಾಚಿಕೊಂಡ ರಾಷ್ಟ್ರೀಯ ಭಾಷೆ ಹಿಂದಿ ಮೊದಲ ಸ್ಥಾನದಲ್ಲಿದ್ದರೆ, 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕನ್ನಡ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ : Kannada Rajyotsava 2022: ಚೆಲುವ ಕನ್ನಡ ನಾಡನ್ನು ಬಣ್ಣಸಿದ್ದ ಹುಯಿಲಗೋಳ ನಾರಾಯಣರಾವ್ ಅವರ ಬದುಕೇ ಒಂದು ರೋಚಕ..!

ಜ್ಞಾನಪೀಠ ಪ್ರಶಸ್ತಿಗೆ ಬಾಜನರಾದ ಕನ್ನಡಿಗರು ಮತ್ತು ಅವರ ಕೃತಿಗಳ ಮಾಹಿತಿ ಇಂತಿದೆ.
ಕೆ.ವಿ.ಪುಟ್ಟಪ್ಪ (ಶ್ರೀ ರಾಮಾಯಣ ದರ್ಶನಂ)- 1967
ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ನಾಕುತಂತಿ)- 1973
ಕೆ.ಶಿವರಾಮ ಕಾರಂತ(ಮೂಕಜ್ಜಿಯ ಕನಸುಗಳು)- 1977
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಚಿಕ್ಕವೀರ ರಾಜೇಂದ್ರ) – 1983
ವಿ.ಕೃ, ಗೋಕಾಕ್ (ಭಾರತ ಸಿಧು ರಶ್ಮಿ) – 1990
ಯು.ಆರ್.ಅನಂತಮೂರ್ತಿ (ಸಮಗ್ರ ಸಾಹಿತ್ಯ)- 1994
ಗಿರೀಶ್ ಕಾರ್ನಾಡ್ (ಸಮಗ್ರ ಸಾಹಿತ್ಯ)- 1998
ಚಂದ್ರಶೇಖರ ಕಂಬಾರ (ಸಮಗ್ರ ಸಾಹಿತ್ಯ)- 2010

ಈ ಹಿರಿಯ ಕವಿಗಳು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಕನ್ನಡ ನಾಡಿನ ಕೀರ್ತಿಯನ್ನು ಜಗದಗಲ ಪಸರಿಸಿದ್ದಾರೆ. ಕನ್ನಡ ನಾಡಿಗೆ ಅಪಾರ ಕೊಡುಗೆಯನ್ನು ನೀಡಿರುವ ಇವರನ್ನು ಎಷ್ಟು ಸ್ಮರಿಸಿದರೂ ಸಾಲದು.

Kannada Rajyotsava 2022: These are the 8 national poets who brought the Jnanpith award to Karnataka

Comments are closed.