Lady Goshen Hospital : ಲೇಡಿಗೋಷನ್ ಆಸ್ಪತ್ರೆ ಇನ್ಮುಂದೆ ರಾಣಿ ಅಬ್ಬಕ್ಕ ಹಾಸ್ಪಿಟಲ್: ಅಧಿಕೃತ ಘೋಷಣೆಯೊಂದೇ ಬಾಕಿ

ಮಂಗಳೂರು : ಕರಾವಳಿ ಭಾಗದಲ್ಲಿ ಹೆರಿಗೆಗೆ ಪ್ರಸಿದ್ಧಿ ಗಳಿಸಿದ ಮಂಗಳೂರಿನ ಲೇಡಿ ಘೋಷನ್ ಹಾಸ್ಪಿಟಲ್ ( Lady Goshen Hospital) ಸದ್ಯದಲ್ಲೇ ತನ್ನ ಹೆಸರು ಬದಲಿಸಿಕೊಳ್ಳಲಿದೆ. ಎಂದೋ ಯಾರೋ ಬಿಟ್ಟು ಹೋದ ಹೆಸರನ್ನು ಮುಂದುವರೆಸುವುದು ಬೇಡ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಲೇಡಿಗೋಷನ್ ಹಾಸ್ಪಿಟಲ್ ಹೆಸರನ್ನು ರಾಣಿ ಅಬ್ಬಕ್ಕ ಆಸ್ಪತ್ರೆ (Rani Abbakka Hospital) ಎಂದು ಬದಲಾಯಿಸಲು ನಿರ್ಧರಿಸಿದೆ.

ಬ್ರಿಟಿಷ್ ಕಾಲದಲ್ಲಿ ಈ ಅಸ್ಪತ್ರೆಗೆ ಲೇಡಿ ಗೋಷನ್ ಹಾಸ್ಪಿಟಲ್ (Lady Goshen Hospital) ಎಂದು ಹೆಸರಿಡಲಾಗಿತ್ತು. ಬಳಿಕ ಅದೇ ಹೆಸರಿನಲ್ಲಿ ಮುಂದುವರೆದ ಈ ಹಾಸ್ಪಿಟಲ್ ‌ನಲ್ಲಿ ಮಂಗಳೂರು, ಉಡುಪಿ ಸೇರಿದಂತೆ ಸುತ್ತ ಮುತ್ತಲಿನ ಐದು ಜಿಲ್ಲೆಗಳ ಹೆಂಗಳೆಯರು ಹೆರಿಗೆಗಾಗಿ ದಾಖಲಾಗುತ್ತಾರೆ. ಪ್ರತಿನಿತ್ಯ ಇಲ್ಲಿ ನೂರಕ್ಕೂ ಹೆಚ್ಚು ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗುತ್ತದೆ. ಇಂಥ ಆಸ್ಪತ್ರೆಗೆ ಪೋರ್ಚುಗೀಸರ್ ರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರಾಣಿ ಅಬ್ಬಕ್ಕ ದೇವಿ (Rani Abbakka Hospital) ಹೆಸರಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ವಿಚಾರವನ್ನು ರಾಜ್ಯ ಸರ್ಜಾರದ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುನೀಲ್ ಕುಮಾರ್, ಬ್ರಿಟಿಷರು ಬಿಟ್ಟು ಹೋದ ಹೆಸರನ್ನು ಬದಲಾಯಿಸಿ ನಮ್ಮ ಹೆಮ್ಮೆಯ ಅಬ್ಬಕ್ಕ ದೇವಿ ಹೆಸರಿಡಲು ನಿರ್ಧರಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಮಗುವು ರಾಣಿ ಅಬ್ಬಕ್ಕನ ಪ್ರೇರಣೆಯನ್ನು ಪಡೆದು ಅವರ ರೀತಿಯೇ ಮುಂದೇ ಧೀರೆಯರಾಗಲಿ ಎಂದು ಸುನೀಲ್ ಕುಮಾರ್ ಹಾರೈಸಿದ್ದಾರೆ. ಅಷ್ಟೇ ಅಲ್ಲ ರಾಣಿ ಅಬ್ಬಕ್ಕ ಹೆಸರಿಗೆ ಯಾರು ವಿರೋಧಿಸುತ್ತಾರೋ ಅವಾಗ ನೋಡೋಣ ಎನ್ನುವ ಮೂಲಕ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಬರಲಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಇನ್ನೊಂದೆಡೆ ಈ ವಿಚಾರ ಕೇಳುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಚಿವ ಹಾಗೂ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಲೇಡಿಗೋಷನ್ ಆಸ್ಪತ್ರೆಗೆ ಅದರ ಹೆಸರಿಗೆ ಅದರದ್ದೇ ಆದ ಇತಿಹಾಸವಿದೆ. ಜನರಿಗೆ ಬೇಕಿರುವುದು ಹೆಸರು ಬದಲಾವಣೆ ಅಲ್ಲ. ಮೂಲಭೂತ ಸೌಲಭ್ಯ. ಅಲ್ಲಿ ದಿನವೊಂದಕ್ಕೆ ಎಷ್ಟು ಡೆಲಿವರಿಯಾಗುತ್ತೇ ಅನ್ನೋದರ ಬಗ್ಗೆ ಸಚಿವರು ಮಾಹಿತಿ ಪಡೆಯಲಿ. ಬಿಜೆಪಿ ಸರ್ಕಾರ ಬಂದ ಮೇಲೆ ಅಲ್ಲಿ ಒಂದು ಬೆಡ್ ಕೂಡ ಜಾಸ್ತಿಯಾಗಿಲ್ಲ.‌ನರ್ಸ್ ವೆಂಟಿಲೇಟರ್ ಸೇರಿದಂತೆ ಯಾವ ಸೌಲಭ್ಯಗಳನ್ನು ಹೆಚ್ಚಿಸಲಾಗಿಲ್ಲ.

ಆಸ್ಪತ್ರೆಗೆ ಹೆಚ್ಚುವರಿ ಕಟ್ಟಡ ಹಾಗೂ ಬೆಡ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಗತ್ಯವಿದೆ. ಅದನ್ನು ಮೊದಲು ಹೆಚ್ಚಿಸಿ ಬಳಿಕ ಹೆಸರು ಬದಲಾಯಿಸಲಿ ಎಂದು ಯು.ಟಿ.ಖಾದರ್ ಟೀಕಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಂದು ಹೆಸರು ಬದಲಾವಣೆ ಸಂಘರ್ಷ ಮುನ್ನಲೆಗೆ ಬಂದಂತಾಗಿದೆ. ಇದಕ್ಕೂ ಮೊದಲು ಮಂಗಳೂರು ಏರ್ಪೋರ್ಟ್ ಗೆ ಕೋಟಿಚೆನ್ನಯ್ಯ ಹೆಸರಿಡಬೇಕೆಂಬ ಪ್ರಸ್ತಾಪ ವಾದ ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ : ಕುಂದಾಪುರದಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ರವಾನೆ : ಖಾಸಗಿ ಕಾಲೇಜು PRO ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳು

ಇದನ್ನೂ ಓದಿ : ಕೂದಲಿನ ಸಮಸ್ಯೆಗಳಿಗೆ ಅದ್ಭುತ ಪವಾಡ ಬೀರುವ ಈ 4 ಎಣ್ಣೆಗಳನ್ನು ಟ್ರೈ ಮಾಡಿ ನೋಡಿ

(Lady Goshen Hospital name Change to Rani Abbakka Hospital)

Comments are closed.