SC Internal Reservation: ರಾಜ್ಯದಲ್ಲಿ ಒಳಮೀಸಲಾತಿ ಕಗ್ಗಂಟು ಅಂತ್ಯ; ಯಾರಿಗೆ ಎಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಲಾದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಮೂಲಕ ಸುದೀರ್ಘ 35 ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದಂತಾಗಿದೆ.

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹಂಚಿಕೆ ಕಗ್ಗಂಟನ್ನು ಬಗೆಹರಿಸುವಲ್ಲಿ ಕೊನೆಗೂ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಈ ಮೂಲಕ ಒಳಮೀಸಲಾತಿ ಹಂಚಿಕೆಗೆ ತಾರ್ಕಿಕ ಅಂತ್ಯ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಲಾದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಮೂಲಕ ಸುದೀರ್ಘ 35 ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದಂತಾಗಿದೆ.
ಸುಪ್ರೀಂ ಕೋರ್ಟಿನ 7 ನ್ಯಾಯಾಧೀಶರ ಪೀಠವು ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಕಲ್ಪಿಸುವ ಅಧಿಕಾರ ನೀಡಿದ ಬೆನ್ನಲ್ಲೇ, ರಾಜ್ಯ ಸರ್ಕಾರವು ಎ.ಜೆ. ಸದಾಶಿವ ಆಯೋಗದ ಶಿಫಾರಸು ಮತ್ತು ಪ್ರಸ್ತುತ ಜನಸಂಖ್ಯೆಯ ಅಂಕಿಅಂಶಗಳನ್ನು ಆಧರಿಸಿ ಹೊಸ ವರ್ಗೀಕರಣ ಮಾಡಿದೆ. ಒಟ್ಟು ಶೇ. 15ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 7 ದಿನದ ಗುಡುಗು ಸಹಿತ ಭಾರಿ ಮಳೆ : ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಒಳಮೀಸಲಾತಿ ಜಾರಿಗಾಗಿ ಸುದೀರ್ಘ ಕಾಲದಿಂದ ಅತೀ ಹೆಚ್ಚು ಹೋರಾಟ ನಡೆಸಿದ ಎಡಗೈ ಸಮುದಾಯವಾದ ಮಾದಿಗ ಮತ್ತು ತತ್ಸಮಾನದ 29 ಸಮುದಾಯಗಳಿಗೆ ಶೇಕಡಾ 5.25ರಷ್ಟು ಮೀಸಲಾತಿ ನೀಡಲಾಗಿದೆ. ಇನ್ನು ಬಲಗೈ ಸಮುದಾಯಕ್ಕೆ ಸೇರಿದ ಹೊಲೆಯ ಮತ್ತು ತತ್ಸಮಾನ 25 ಸಮುದಾಯಗಳಿಗೆ ಶೇ. 5.25 ರಷ್ಟು ಮೀಸಲಾತಿ ನೀಡಲಾಗಿದೆ.
ಲಂಬಾಣಿ, ಭೋವಿ, ಕೊರಚ, ಕೊರಮ ಸೇರಿದಂತೆ 47 ಇತರ ಸ್ಪೃಶ್ಯ ಮತ್ತು ಅಲೆಮಾರಿ ಸಮುದಾಯಗಳಿಗೆ ಒಟ್ಟಾಗಿ ಶೇ. 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿ ನಿರ್ಣಯ ಹೊರಡಿಸಲಾಗಿದೆ.
ಒಳಮೀಸಲಾತಿ ಗೊಂದಲದಿಂದಾಗಿ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಸಂಪುಟ ನಿರ್ಧಾರದಿಂದಾಗಿ ತಡೆಹಿಡಿಯಲಾಗಿದ್ದ ಸುಮಾರು 56,000 ಹುದ್ದೆಗಳ ನೇಮಕಾತಿಗೆ ಈ ನಿರ್ಣಯದ ಬಳಿಕ ಚಾಲನೆ ಸಿಗಲಿದೆ.
ಇದನ್ನೂ ಓದಿ : ಕರ್ನಾಟಕಕ್ಕೆ ಮಳೆಯ ಸಿಹಿ ಸುದ್ದಿ: ಮುಂದಿನ 5 ದಿನ ಎಲ್ಲೆಲ್ಲಿ ಮಳೆ ? ಅತ್ತ ಸುಡುತ್ತಿರುವ ಬಿಸಿಲಿಗೆ ಸಿಗಲಿದೆಯೇ ಮುಕ್ತಿ
ಇನ್ನು ಮುಂದೆ ಹೊರಬರುವ ಕೆಪಿಎಸ್ಸಿ ಸೇರಿದಂತೆ ಎಲ್ಲಾ ಇಲಾಖಾ ಅಧಿಸೂಚನೆಗಳಲ್ಲಿ ಈ ಹೊಸ ಮೀಸಲಾತಿ ಸೂತ್ರವೇ ಅನ್ವಯವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸರ್ಕಾರವು ನೇಮಕಾತಿಯಲ್ಲಿ ಗೊಂದಲ ಉಂಟಾಗದಂತೆ ಹೊಸ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಿದೆ.ಒಂದೇ ಒಂದು ಹುದ್ದೆ ಇದ್ದಾಗ ಅದನ್ನು ವರ್ಗೀಕರಣ ಮಾಡದೆ ‘ಎಸ್ಸಿ ಸಾಮಾನ್ಯ’ ಎಂದು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಹುದ್ದೆಗಳಿದ್ದಾಗ ಮಾತ್ರ ಹೊಸ 5.25 : 5.25 : 4.5 ಅನುಪಾತ ಅನ್ವಯವಾಗುತ್ತದೆ.
ಈ ನಿರ್ಧಾರವು ಕೇವಲ ಆಡಳಿತಾತ್ಮಕವಲ್ಲದೆ ರಾಜಕೀಯವಾಗಿಯೂ ದೊಡ್ಡ ಸಂಚಲನ ಮೂಡಿಸಿದೆ. ಎಡಗೈ ಸಮುದಾಯದ ದಶಕಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರವು ‘ಅಹಿಂದ’ ಮತ್ತು ಸಾಮಾಜಿಕ ನ್ಯಾಯದ ಪರವಾದ ತನ್ನ ಬದ್ಧತೆಯನ್ನು ಸಾಬೀತುಪಡಿಸಿದೆ. ಅದೇ ಸಮಯದಲ್ಲಿ ಸ್ಪೃಶ್ಯ ಸಮುದಾಯಗಳಾದ ಲಂಬಾಣಿ ಮತ್ತು ಭೋವಿ ಸಮುದಾಯಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಪ್ರಯತ್ನವನ್ನೂ ಮಾಡಲಾಗಿದೆ.
sc internal reservation karnataka cabinet decision siddaramaiah govt jobs reservation formula kannada news



