Sigandur Bridge : ಭರದಿಂದ ಸಾಗುತ್ತಿದೆ ಸಿಗಂಧೂರು ಸೇತುವೆ ಕಾಮಗಾರಿ : 2023ಕ್ಕೆ ಸಂಚಾರ ಮುಕ್ತವಾಗಲಿದೆ ರಾಜ್ಯದ ಮೊದಲ ಕೇಬಲ್ ಸ್ಲೈಡ್ ಸೇತುವೆ

ಶಿವಮೊಗ್ಗ: ರಾಜ್ಯದ ಪ್ರಸಿದ್ದ ಪುಣ್ಯಕ್ಷೇತ್ರಗಳಲ್ಲೊಂದಾಗಿರುವ ಸಿಗಂಧೂರು ಚೌಡೇಶ್ವರಿ ದೇವಿಯ ಸನ್ನಿಧಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. 2023ಕ್ಕೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿ – ಅಂಬಾರಗೊಡ್ಲುವಿಗೆ ಭೇಟಿ ನೀಡಿದ ಸಚಿವರು ಸಿಗಂಧೂರು ಸೇತುವೆ ನಿರ್ಮಾಣ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಲಾಂಚ್‌ನಲ್ಲಿ ಸಂಚರಿಸಿ ಖುದ್ದು ಸೇತುವೆಯ ಕಾಮಗಾರಿಯನ್ನೂ ಪರಿಶೀಲಿಸಿದ್ದಾರೆ. ಶೇ.30ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದರೆ ಭಾರೀ ಮಳೆಯಿಂದಾಗಿ ಹಿನ್ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಕಾಮಗಾರಿ ನಡೆಸಲು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸಿ, ನೀರಿನ ಮಟ್ಟವನ್ನು ತಗ್ಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ನಡೆಸಲಾಗುತ್ತಿದೆ. ಸೇತುವೆ ನಿರ್ಮಾಣದ ಬಳಿ ಈ ಭಾಗ ಹಲವು ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ. ಇನ್ನೊಂದೆಡೆಯಲ್ಲಿ ಸಾಗರ, ಕೊಲ್ಲೂರು ಹಾಗೂ ಉಡುಪಿ, ಮಂಗಳೂರಿಗೆ ನೇರ ಸಂಪರ್ಕವನ್ನು ಈ ಸೇತುವೆ ಕಲ್ಪಿಸಲಿದೆ. 2023ಕ್ಕೆ ಸೇತುವೆ ಲೋಕಾರ್ಪಣೆಗೊಳಲಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಸಾಗರ ಶಾಸಕ ಹರತಾಳು ಹಾಲಪ್ಪ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್‌ ಪೀರ್‌ ಪಾಷಾ, ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ, ಯೋಜನಾ ಆಯೋಗದ ಸದಸ್ಯ ಪ್ರಸನ್ನಕೆರೆಕೈ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್‌ ಸೇರಿದಂತೆ ಹಲವು ಸಚಿವರಿಗೆ ಸಾಥ್‌ ನೀಡಿದ್ದರು.

ಸಿಗಂಧೂರು ಸೇತುವೆ ವಿಶೇಷತೆ ನಿಮಗೆ ಗೊತ್ತಾ ?
ಅಂಬಾರಗೊಡ್ಲು ಹಾಗೂ ಕಳಸವಳ್ಳಿ ಗ್ರಾಮಗಳ ನಡುವಿನ ಸೇತುವೆ ನಿರ್ಮಾಣವಾಗಬೇಕು ಅನ್ನೋದು ಬಹು ವರ್ಷದ ಬೇಡಿಕೆ. ಆದರೆ ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣ ಮಾಡೋದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಹಲವು ಬಾರಿ ಸೇತುವೆ ನಿರ್ಮಾಣದ ಕಾರ್ಯ ಫಲಕೊಟ್ಟಿರಲಿಲ್ಲ. ಇದೀಗ 2.14 ಕಿಲೋ ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ಇದೀಗ 423 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವನ್ನೂ ಹೊಂದಲಾಗಿದೆ.

ಸಿಗಂಧೂರು ಸೇತುವೆಯನ್ನು ಕೇಬಲ್ ಸ್ಲೈಡ್ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ತಂತ್ರಜ್ಞಾನವನ್ನು ಅಳವಡಿಸಿ ಸಿದ್ದವಾಗುತ್ತಿರುವ ರಾಜ್ಯದ ಮೊದಲ ಸೇತುವೆ ಹಾಗೂ ದೇಶದ ಮೂರನೇ ಸೇತುವೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೊಂದೆಡೆ ಸಿಗಂಧೂರು ಸೇತುವೆ ನಿರ್ಮಾಣವಾದ ಬಳಿಕ ರಾಜ್ಯದ ಎರಡನೇ ಉದ್ದದ ಸೇತುವೆ ಎನಿಸಿಕೊಳ್ಳಲಿದೆ. ವಿಜಯಪುರದ ಕೃಷ್ಣಾ ನದಿಗೆ ಅಡ್ಡಲಾಗಿರುವ ಮೂರು ಕಿಲೋಮೀಟರ್ ಉದ್ದದ ಕೊರ್ತಿ-ಕೊಲ್ಹಾರ್ ಸೇತುವೆ ರಾಜ್ಯದ ಅತೀ ಉದ್ದದ ಸೇತುವೆ ಅನ್ನೋ ಖ್ಯಾತಿಗೆ ಪಾತ್ರವಾಗಿದೆ.

ಸಿಗಂಧೂರು ಚೌಡೇಶ್ವರಿ ದೇವಿಯ ಸನ್ನಿಧಾನಕ್ಕೆ ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಸದ್ಯ ಲಾಂಚ್‌ ಮೂಲಕವೇ ಸಂಚಾರ ಕಾರ್ಯ ನಡೆಯುತ್ತಿದೆ. ಒಂದೊಮ್ಮೆ ಸಿಗಂಧೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸೇತುವೆ ನಿರ್ಮಾಣವಾದ್ರೆ ಧಾರ್ಮಿಕ ಕ್ಷೇತ್ರವಾಗಿಯಷ್ಟೇ ಅಲ್ಲಾ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಅಭಿವೃದ್ದಿ ಸಾಧ್ಯವಾಗಲಿದೆ.

ಇದನ್ನೂ ಓದಿ : ಸಿಗಂಧೂರು ದೇವಸ್ಥಾನದ ವಿವಾದ ಕೊನೆಗೂ ಸುಖಾಂತ್ಯ

ಇದನ್ನೂ ಓದಿ : ಸಿಗಂಧೂರು ಚೌಡೇಶ್ವರಿ ಸನ್ನಿಧಿಯಲ್ಲಿ ಪಟ್ಟಕ್ಕಾಗಿ ಕಿತ್ತಾಟ : ಅಷ್ಟಕ್ಕೂ ವಿವಾದ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ ?

ಇದನ್ನೂ ಓದಿ : Shivamogga : ಪ್ರೀತಿಗೆ ನಿರಾಕರಿಸಿದ ವಿದ್ಯಾರ್ಥಿನಿ : ಕಾಡಿಗೆ ಕರೆದೊಯ್ದು ಯುವಕ ಮಾಡಿದ್ದ ಘೋರ ಕೃತ್ಯ

Comments are closed.