Mullayanagiri : ಮಂಜಿನ ಓಟ ಹಚ್ಚ ಹಸಿರ ವನರಾಶಿ : ಇದು ಭೂಲೋಕದ ಸ್ವರ್ಗ ಮುಳ್ಳಯ್ಯನಗಿರಿ

0

ಚೆಲುವನ್ನೇ ಮೈಗೆತ್ತಿಕೊಂಡಿರೋ ಗಿರಿಶಿಖರಗಳು, ಹಚ್ಚ ಹಸಿರಿನಿಂದ ನಳನಳಿಸುತ್ತಿರೋ ಚಂದ್ರದ್ರೋಣ ಪರ್ವತಗಳ ಸಾಲು. ದಾರಿಯುದ್ದಕ್ಕೂ ಸ್ವಾಗತ ಕೋರುತ್ತಿರೋ ಪುಷ್ಪಗಳ ರಾಶಿ. ರಸ್ತೆಯ ತುಂಬೆಲ್ಲಾ ಮಂಜಿನದ್ದೇ ಆಟ. ಭೂಲೋಕದ ಸ್ವರ್ಗವೆನಿಸಿಕೊಂಡಿರೋ ಮುಳ್ಳಯ್ಯನಗಿರಿ ( Mullayanagiri) ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಬೇಸಿಗೆಯ ಬಿಸಿಲಿನ ಝಳಕ್ಕೆ ಕಾದ ಕಾವಲೆಯಂತಾಗುವ ಮಲೆನಾಡು, ಮಳೆಗಾಲ ಆರಂಭವಾದ ಕೂಡಲೇ ತಂಪೇರುತ್ತೆ. ಮಲೆನಾಡಿನ ತುಂಬೆಲ್ಲಾ ಚುಮುಚುಮು ಚಳಿ ಆವರಿಸಿಕೊಳ್ಳುತ್ತೆ. ಕಾಡ್ಗಿಚ್ಚಿನಿಂದಾಗಿ ಸುಟ್ಟು ಕರಕಲಾಗಿದ್ದ ಗಿರಿಶಿಖರಗಳಲ್ಲಿನ ಹುಲ್ಲುಗಳು, ಗಿಡ ಮರಗಳು ಚಿಗುರೊಡೆದು ಹಚ್ಚ ಹಸಿರಿನಿಂದ ನಳನಳಿಸೋಕೆ ಶುರುವಾಗುತ್ತೆ. ಅದರಲ್ಲೂ ಮಲೆನಾಡಿನ ಚಿಕ್ಕಮಗಳೂರಂತೂ ಪ್ರವಾಸಿಗರ ಪಾಲಿಗಂತೂ ಸ್ವರ್ಗವೆನಿಸಿ ಬಿಡುತ್ತೆ. ಕಾಫಿನಾಡು ಚಿಕ್ಕಮಗಳೂರಲ್ಲಿ (Chikmagalur) ಕುದುರೆಮುಖ, ಕೆಮ್ಮಣ್ಣುಗುಂಡಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿವೆ. ಅದರಲ್ಲೂ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರೋ ಮುಳ್ಳಯ್ಯನಗಿರಿಗೆ (Mullayanagiri ) ಅಗ್ರಸ್ಥಾನ.

ಚಿಕ್ಕಮಗಳೂರು (Chikmagalur)ನಗರದಿಂದ ಕೇವಲ 18 ಕಿಲೋ ಮೀಟರ್ ದೂರದಲ್ಲಿರೋ ಮುಳ್ಳಯ್ಯನಗಿರಿಗೆ ಸಾಗೋದೆ ಒಂದು ರೋಚಕ ಅನುಭವ. ಕಾಫಿತೋಟಗಳ ನಡುವೆ ಕಾಫಿಯ ಸುಹಾಸನೆಯನ್ನು ಸವಿಯುತ್ತಾ ಸಾಗುವಾಗ, ತಂಪನೆಯ ವಾತಾವರಣ ಮನಸಿಗೆ ಮುದವನ್ನು ನೀಡುತ್ತೆ. ವರುಣನ ಸ್ಪರ್ಶಕ್ಕೆ ಗಿಡಗಂಟೆಗಳಲ್ಲಿ ಮೂಡಿರೋ ಚಿಗುರು, ಗಿಡಗಳಲ್ಲಿ ಅರಳಿನಿಂತಿರೋ ಬಣ್ಣ ಬಣ್ಣ ಹೂವುಗಳು ಸ್ವಾಗತವನ್ನು ಕೋರುತ್ತವೆ. ಕಿರಿದಾದ ತಿರುವು ಮುರುವು ರಸ್ತೆಗಳು ಒಂದಿಷ್ಟು ಸಮಯ ಭಯಾನಕತೆಯನ್ನು ಹುಟ್ಟು ಹಾಕುತ್ತವೆ. ಆದರೆ ಇಲ್ಲಿನ ವಿಶಿಷ್ಟ ವಾತಾವರಣ ಮನಸಿಗೆ ಮುದವನ್ನು ನೀಡುವುದರ ಮೂಲಕ ಜರ್ನಿಗೆ ಸಂತಸವನ್ನು ತರುತ್ತದೆ. ಚಿಕ್ಕಮಗಳೂರು ನಗರದಿಂದ ಬಾಬಾಬುಡನ್‌ಗಿರಿಗೆ ಸಾಗೋ ಮಾರ್ಗದಲ್ಲಿ ಎಡಕ್ಕೆ ತಿರುಗಿ ಸುಮಾರು 8 ಕಿಲೋ ಮೀಟರ್ ಸಾಗಿದರೆ ಮುಳ್ಳಯ್ಯನಗಿರಿ ಸಿಗುತ್ತೆ. ದೂರ ಕಡಿಮೆಯಾದರೂ ಕೂಡ ಸಾಗೋ ಮಾರ್ಗ ಮಾತ್ರ ಬಲು ಕಠಿಣ. ಇಲ್ಲಿ ಕೊಂಚ ಯಾಮಾರಿದ್ರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ.

ಸೃಷ್ಟಿಯ ಸೊಬಗು ನಿಜಕ್ಕೂ ಅತ್ಯದ್ಬುತ. ಅಂತಹ ನೈಸರ್ಗಿಕ ಸೊಬಗನ್ನೆ ತನ್ನ ಮೈಯಲೆಲ್ಲಾ ಮೆತ್ತಿಕೊಂಡಿರೋ ಮುಳ್ಳಯ್ಯನಗಿರಿ ಎಲ್ಲರನ್ನೂ ತನ್ನ ಕೈಬೀಸಿ ಕರೆಯುತ್ತಿದೆ. ಸಮುದ್ರ ಮಟ್ಟದಿಂದ ಸುಮಾರು 6,318 ಅಡಿ ಎತ್ತರದಲ್ಲಿರೋ ಮುಳ್ಳಯ್ಯನಗಿರಿ (Mullayanagiri ) ರಾಜ್ಯದ ಎತ್ತರದ (Karnataka Highest Peak) ಗಿರಿಶಿಖರಗಳಲ್ಲೊಂದು. ಇಲ್ಲಿನ ನಿಸರ್ಗದ ಸವಿಯನ್ನು ಸವಿಯಲು ಗಿರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಮುಳ್ಳಯ್ಯನಗಿರಿ ತುತ್ತತುದಿಯನ್ನು ಏರಿದ ಕೂಡಲೇ ಪ್ರತಿಯೊಬ್ಬರಿಗೂ ಪ್ರಕೃತಿಯ ನೈಜ ಸೊಬಗು ಅನಾವರಣಗೊಳ್ಳುತ್ತೆ. ಸಮುದ್ರಮಟ್ಟದಿಂದ ಸುಮಾರು 6,318ಅಡಿಗಳಷ್ಟು ಎತ್ತರದಲ್ಲಿರೋ ಮುಳ್ಳಯ್ಯನಗಿರಿ ರಾಜ್ಯದ ಅತ್ಯಂತ ಎತ್ತರದ ಗಿರಿಶಿಖರವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಎತ್ತ ನೋಡಿದರೂ ಕೂಡ ಗುಡ್ಡಬೆಟ್ಟಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತವೆ. ಗಿರಿಶಿಖರಗಳು ಆಕಾಶವನ್ನೇ ಚುಂಬಿಸುವಂತೆ ಬಾವವಾಗುತ್ತವೆ. ಇನ್ನು ತಲೆಯ ಮೇಲೆಯೇ ಸಾಗಿ ಹೋಗೋ ಮಂಜಿನ ಸಾಲು ಮೈಯಲ್ಲಿ ಚಳಿಯನ್ನು ಹುಟ್ಟಿಸಿದರೆ, ರಭಸವಾಗಿ ಬೀಸೋ ಗಾಳಿ ರೋಮಾಂಚನಗೊಳ್ಳಿಸುತ್ತೆ. ಶಿಖರದ ತುತ್ತತುದಿಯಲ್ಲಿ ನಿಂತು ಎರಡೂ ಕೈಗಳನ್ನು ಮೇಲಕ್ಕೆತ್ತಿ ಗಾಳಿಗೆ ಎದುರಾಗಿ ನಿಂತು ಕೂಗಿದರೆ ಮೈಜುಮ್ಮೆನಿಸುತ್ತದೆ. ಅದರಿಂದಾಗಿ ಇಲ್ಲಿಗೆ ಬರೋ ಪ್ರವಾಸಿಗರು ಕೈಯನ್ನ ಮೇಲಕ್ಕೆತ್ತಿ ನಿಲ್ಲುವುದರ ಮೂಲಕ ಸಂಭ್ರಮಿಸುತ್ತಾರೆ. ಅದರಲ್ಲೂ ಇಲ್ಲಿನ ಸಣ್ಣ ಸಣ್ಣ ಗಿರಿಶಿಖರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಗಿರಿಶಿಖರವನ್ನೇರಿದ ಕೂಡಲೇ ಹಲವರು ತಮ್ಮ ಮೊಬೈಲ್ ಹಾಗೂ ಕ್ಯಾಮರಾಗಳಲ್ಲಿ ಇಲ್ಲಿನ ಪ್ರಕೃತಿಯ ಐಸಿರಿಯನ್ನು ಸೆರೆಹಿಡಿದುಕೊಳ್ಳುತ್ತಾರೆ. ಇನ್ನು ನವವಧುವರರಿಗೆ ಹಾಗೂ ಪ್ರೇಮಿಗಳಂತೂ ಭೂಲೋಕದ ಸ್ವರ್ಗವೇ ಸರಿ. ಕೊರೆಯುವ ಚಳಿಯಲ್ಲಿ ಜೋಡಿ ಜೋಡಿಯಾಗಿ ಕೈಕೈ ಹಿಡಿದುಕೊಂಡೇ ಸಾಗುತ್ತಾರೆ. ಜೊತೆಗೆ ತಮ್ಮ ತಮ್ಮ ಪೋಟೋಗಳನ್ನು ಸೆರೆಹಿಡಿದು, ಕ್ಯಾಮರದಲ್ಲಿ ಮೂಡಿರೋ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ತಾರೆ. ಒಂದಕ್ಕಿಂತ ಒಂದು ಪ್ರದೇಶ ವಿಶೇಷವೆನಿಸುವುದರಿಂದ ಪ್ರತೀ ಪೋಟೋವು ಸ್ಪೆಷಲ್ ಆಗಿ ಮೂಡಿಬರಬೇಕೆಂತ ಬೇರೆ ಬೇರೆ ಸ್ಥಳಗಳಲ್ಲಿ, ವಿಶೇಷ ಬಂಗಿಗಳಲ್ಲಿ ನಿಂತು ಪೋಟೋಗಳನ್ನು ಕ್ಲಿಕ್ಕಿಸಿಕೊಳ್ತಾರೆ. ಒಂದು ದಿನದ ಪ್ರವಾಸಕ್ಕೆ ಮುಳ್ಳಯನಗಿರಿ ಹೇಳಿ ಮಾಡಿಸಿದ ಸ್ಪಾಟ್. ಅದರಲ್ಲೂ ಗೆಳೆಯರೊಂದಿಗೆ ವಿಕೆಂಡ್‌ನಲ್ಲಿ ಮಜಾವನ್ನು ಕಳೆಯಲು ವಯಸ್ಸಿನ ಬೇಧ ಮರೆತು ಪ್ರವಾಸಿಗರು ಮುಳ್ಳಯ್ಯನಗಿರಿಗೆ ಆಗಮಿಸಿ ಸಂತಸ ಪಡುತ್ತಾರೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮಹಾನಗರಗಳು ಮಾಲಿನ್ಯದ ಗೂಡಾಗುತ್ತಿವೆ. ಇಂತಹ ಕಾಂಕ್ರೀಟ್ ಕಾಡುಗಳಲ್ಲಿ, ಕಶ್ಮಲ ಹೊಗೆಯನ್ನು ಕುಡಿದುಕೊಂಡು ಜಂಜಾಟದ ಬದುಕನ್ನು ಸಾಗುತ್ತಿರೋ ಮಂದಿ ಕೊಂಚ ರಿಲ್ಯಾಕ್ಸ್ ಪಡೆಯೋಕೆ ಮುಳ್ಳಯ್ಯನಗಿರಿಗೆ ಆಗಮಿಸುತ್ತಿದ್ದಾರೆ. ಮುಳ್ಳಯ್ಯನಗಿರಿಗೆ ಸಾಗುವಾಗ ಗಿರಿಯನ್ನು ತಲುಪುವುದಕ್ಕಿಂತ ಮೊದಲು ಸೀತಾಳಯ್ಯನಗಿರಿ ಸಿಗುತ್ತದೆ. ದೊಡ್ಡದೊಡ್ಡ ವಾಹನಗಳು ಕಿರಿದಾದ ರಸ್ತೆಯನ್ನು ಸಾಗೋದು ಅಸಾಧ್ಯವಾದ್ದರಿಂದ ಮುಳ್ಳಯ್ಯನಗಿರಿಗೆ ಸಾಗೋ ಪ್ರವಾಸಿಗರು ಸೀತಾಳಯ್ಯನ ಗಿರಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಸೀತಾಳಗಿರಿಯಲ್ಲಿರೋ ಸೀತಾಳ ಮಲ್ಲಿಕಾರ್ಜುನನ ದರ್ಶನವನ್ನು ನಡೆದುಕೊಂಡೇ ಸಾಗುತ್ತಾರೆ. ಕೆಲವರಿಗೆ ಇಲ್ಲಿನ ವಾತಾವರಣ ವಿಶೇಷವೆನಿಸುವುದರಿಂದ ಚಿಕ್ಕಮಗಳೂರಿ (Chikmagalur)ನಿಂದ ಮುಳ್ಳಯ್ಯನಗರಿಗೆ ಟ್ರಕ್ಕಿಂಗ್ ಮಾಡುವುದರ ಮೂಲಕ ವಿಶೇಷ ವಾತಾವರಣದ ಅನುಭವವನ್ನು ಪಡೆಯುತ್ತಾರೆ.

ಒಂದೆಡೆ ಕಾಡುಗಳ ನಾಶದಿಂದಾಗಿ ಪರಿಸರ ಮಾಲಿನ್ಯದ ಗೂಡಾಗುತ್ತಿದ್ದರೆ, ಇನ್ನೊಂದೆಡೆ ಗಣಿಗಾರಿಕೆಯಿಂದ ಹಚ್ಚಹಸಿರಿನ ಗಿರಿಶಿಖರ, ಪರ್ವತಗಳು ನಾಶವಾಗುತ್ತಿವೆ. ಇದರಿಂದಾಗಿ ಪ್ರತಿಯೊಬ್ಬರು ಕೂಡ ವರ್ಷದಲ್ಲೊಮ್ಮೆಯಾದ್ರೂ ಸ್ವಚ್ಚ, ಶುದ್ದ ಪರಿಸರವನ್ನರಿಸಿಕೊಂಡು ಸಾಗುತ್ತಾರೆ. ಅದಕ್ಕಾಗಿಯೇ ನಿತ್ಯವೂ ಸಾವಿರಾರು ಮಂದಿ ಕುಟುಂಬ ಸಮೇತರಾಗಿ ಮುಳ್ಳಯ್ಯನಗಿರಿಗೆ ಆಗಮಿಸಿ ಸ್ವಚ್ಚಂದ ಪರಿಸರದಲ್ಲಿ ವಿಹರಿಸುತ್ತಾರೆ. ಸದಾ ಕಾಲ ನಗರದಲ್ಲಿನ ಕಶ್ಮಲಯುಕ್ತ ಬದುಕಿನಿಂದ, ಕೆಲಸದ ಜಂಜಾಟದಿಂದ ಮುಕ್ತರಾಗೋಕೆ ಮುಳ್ಳಯ್ಯನಗಿರಿ ಹೇಳಿ ಮಾಡಿಸಿದ ಜಾಗ. ಇಲ್ಲಿನ ಗಿರಿಯಲ್ಲಿ ವಿಹರಿಸಿದರೆ ಮನದೊಳಗಿನ ನೋವೆಲ್ಲಾ ಪರಿಹಾರವಾಗುತ್ತದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿರೋ ಮುಳ್ಳಯ್ಯನಗಿರಿ ಯನ್ನು ಚಂದ್ರದ್ರೋಣ ಪರ್ವತ, ಬುಡಮೇಲು ಪರ್ವತವೆಂದು ಕರೆಯುತ್ತಾರೆ. ರಾಜ್ಯದ ಅತ್ಯಂತ ಎತ್ತರದ ಶಿಖರವೆಂಬ ಖ್ಯಾತಿಗೆ ಪಾತ್ರವಾಗಿರೋ ಈ ಮುಳ್ಳಯ್ಯನ ಗಿರಿ ಶಿಖರ ರಾಮಾಯಣದೊಂದಿಗೆ ತಳಕು ಹಾಕಿಕೊಂಡಿದೆ. ಮುಳ್ಳಯ್ಯನಗಿರಿಯ ತುತ್ತತುದಿಯನ್ನೇರಿದಾಗ ಮುಳ್ಳೇಶ್ವರ ಸ್ವಾಮಿಯ ಮಠ ಸಿಗುತ್ತೆ. ಗಿರಿಗೆ ಆಗಮಿಸೋ ಸಾಕಷ್ಟು ಪ್ರವಾಸಿಗರು ಪ್ರಕೃತಿಯ ಸೊಬಗವನ್ನು ಇನ್ನಷ್ಟು ಸವಿಯಲು ನೂರಾರು ಮೆಟ್ಟಿಲುಗಳನ್ನು ಏರಿ ಮುಳ್ಳೇಶ್ವರ ಸನ್ನಿಧಿಗೆ ತೆರಳುತ್ತಾರೆ. ಮೆಟ್ಟಿಲುಗಳನ್ನು ಏರುವಾಗ ಬೀಸುವ ಗಾಳಿಯ ರಭಸವನ್ನು ತಾಳಲಾರದೆ ಒಂದಿಷ್ಟು ಮೆಟ್ಟಿಲುಗಳಲ್ಲಿಯೇ ಸಮಯ ಸುಮ್ಮನೇ ಕೂರುತ್ತಾರೆ. ಇನ್ನೂ ಕೆಲವರು ಮೆಟ್ಟಿಲುಗಳನ್ನು ಹಿಡಿಕೊಂಡೇ ಮೇಲಕ್ಕೆ ಸಾಗಿದರೆ, ಉಳಿದವರು ಗಾಳಿಯ ತೀರ್ವ್ರತೆ ಕಡಿಮೆಯಾದ ಮೇಲೆ ಮೆಟ್ಟಿಲೇರುತ್ತಾರೆ.

ಮುಳ್ಳಯ್ಯನಗಿರಿಯನ್ನು (Mullayanagiri ) ಬುಡಮೇಲು ಪರ್ವತ ಎನ್ನುತ್ತಾರೆ !

ಮುಳ್ಳಯ್ಯನಗಿರಿ ಶಿಖರವನ್ನು (Mullayanagiri Peak) ಚಂದ್ರದ್ರೋಣ ಪರ್ವತ, ಬುಡಮೇಲು ಪರ್ವತವೆಂದು ಕರೆಯಲಾಗುತ್ತದೆ. ಈ ಗಿರಿಶಿಖರ ಪ್ರಕೃತಿಯ ಸೊಬಗನಿಂದ ಕಂಗೊಳಿಸುವುದು ಮಾತ್ರವಲ್ಲ, ಇದಕ್ಕೆ ರಾಮಾಯಣದ ನಂಟಿರುವುದು ಇನ್ನೊಂದು ವಿಶೇಷ. ಯುದ್ದದ ಸಂದರ್ಭದಲ್ಲಿ ಲಕ್ಷ್ಮಣ ಗಾಯಗೊಂಡು ಮೂರ್ಚೆ ಹೋಗುತ್ತಾನೆ. ಆಗ ರಾಮ ಆಂಜನೇಯನಲ್ಲಿ ಸಂಜೀವಿನಿ ಪರ್ವತದಿಂದ ಸಂಜೀವಿನಿ ಹೂವನ್ನು ತರುವಂತೆ ಆಜ್ಞಾಪಿಸುತ್ತಾನೆ. ಸಂಜೀವಿನಿ ಪರ್ವತಕ್ಕೆ ತೆರಳಿದ ಆಂಜನೇಯನಿಗೆ ಯಾವ ಹೂವೆಂದು ಅರಿಯದೇ ಇಡೀ ಸಂಜೀವಿನ ಪರ್ವತ ವನ್ನೇ ಕೈಯಲ್ಲಿ ಹೊತ್ತು ತರುತ್ತಾನೆ. ಸಂಜೀವಿನಿ ಹೂವಿನಿಂದಾಗಿ ಲಕ್ಷ್ಮಣನಿಗೆ ಪ್ರಜ್ಞೆ ಮರಳುತ್ತದೆ. ನಂತರ ರಾಮ ಸಂಜೀವಿನಿ ಪರ್ವತವನ್ನು ಮರಳಿ ಇಟ್ಟುಬರುವಂತೆ ತಿಳಿಸುತ್ತಾನೆ. ಆದರೆ ಇದಕ್ಕೆ ಮನಸ್ಸು ಮಾಡದ ಆಂಜನೇಯ ತಾನು ನಿಂತಿರುವಲ್ಲಿಂದಲೇ ಪರ್ವತವನ್ನು ಎಸೆಯುತ್ತಾನೆ. ಆಗ ಪರ್ವತ ಬುಡಮೇಲಾಗಿ ಚಂದ್ರಾಕಾರದಲ್ಲಿ ಬೀಳುತ್ತದೆ. ಇದಕ್ಕಾಗಿಯೇ ಈ ಗಿರಿಯನ್ನು ಬುಡಮೇಲು ಪರ್ವತ, ಚಂದ್ರದ್ರೋಣ ಪರ್ವತವೆಂದು ಕರೆಯಲಾಗುತ್ತದೆ. ಮುಳ್ಳಯ್ಯನಗಿರಿಯ ಇನ್ನೊಂದು ವಿಶೇಷವೇ ಇಲ್ಲಿನ ವಿಶಿಷ್ಟವಾದ ವಾತಾವರಣ. ಗಿರಿಗೆ ಸಾಗುವಲ್ಲಿನಿಂದ ಹಿಡಿದು ಗಿರಿಯ ತುತ್ತ ತುದಿಗೆ ಏರಿದಾಗಲೂ ವಾತಾವರಣ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಸಾಗುತ್ತದೆ. ಒಂದಿಷ್ಟು ಸಮಯ ಬಿಸಿಲು, ನಂತರ ಚಳಿ, ಇನ್ನೋ ಸ್ವಲ್ಪ ಹೊತ್ತು ಬಿಟ್ಟರೆ ಮಳೆ. ಹೀಗೆ ಈ ವಿಶಿಷ್ಟವೆನಿಸೋ ಇಲ್ಲಿನ ಹವಾಗುಣವನ್ನು ಅನುಭವಿಸೋದೆ ಒಂದು ಖುಷಿ.

ಚಿಕ್ಕಮಗಳೂರಿನಿಂದ (Chikmagalur) ಸಾಗುವಾಗ ಕೈಮರದ ಬಳಿಯಲ್ಲಿ ಎಡಕ್ಕೆ ತಿರುಗಿದಾಗ ಸಿಗೋ ಮಾರ್ಗದಲ್ಲಿ ಸಂಚರಿಸುತ್ತಿದ್ದರೆ, ತಂಗಾಳಿ ಮನಸಿಗೆ ಸಂತಸವನ್ನು ನೀಡುತ್ತದೆ. ಮುಂದೆ ಮುಂದೆ ಸಾಗುತ್ತಿದ್ದರೆ ಇಲ್ಲಿನ ವಾತಾವರಣ ಬದಲಾಗುತ್ತಾ ಸಾಗುತ್ತದೆ. ಸ್ವಲ್ಪ ಸಮಯದ ಮಳೆ ಸುರಿದರೆ,ತಟ್ಟನೆ ಬಿಸಿಲು ಬರುತ್ತೆ, ಮತ್ತೆ ಒಂದಿಷ್ಟು ಹೊತ್ತು ಗಾಢ ಚಳಿ ಆವರಿಸಿ ಬಿಡುತ್ತದೆ. ಜೊತೆಗೆ ಪ್ರತೀ ಐದು ನಿಮಿಷಕ್ಕೆ ಇಲ್ಲಿನ ಸೊಬಗು ಬದಲಾಗುತ್ತಾ ಸಾಗುತ್ತದೆ. ಇನ್ನು ಗಿರಿಗಳ ನಡುವಿನಿಂದ ಸಾಗಿ ಬರೋ ಮಂಜಿನ ಸಾಲು ಒಂದಿಷ್ಟು ಸಮಯ ಗಾಢವಾಗಿ ಬೀಸಿ, ಇಲ್ಲಿನ ಗಿರಿ ಶಿಖರಗಳ ತುಂಬೆಲ್ಲಾ ಆವರಿಸಿಕೊಂಡು ಬಿಡುತ್ತದೆ. ಒಂದರ ಹಿಂದೊಂದರಂತೆ ಸಾಗಿಬರೋ ಮಂಜುಗಳ ಸಾಲು ಇಡೀ ಗುಡ್ಡವನ್ನೇ ನುಂಗಿ ಹಾಕುತ್ತವೆ. ಪ್ರತೀ ಐದು ನಿಮಿಷಕ್ಕೂ ಬದಲಾಗುವ ಇಲ್ಲಿನ ವಾತಾವರಣ ಕಣ್ಣಿಗೆ ಹಬ್ಬವನ್ನು ತರುತ್ತವೆ. ಎಲ್ಲೂ ಕಂಡುಬರದ ಪ್ರಕೃತಿಯ ಐರಿಸಿ ಮುಳ್ಳಯ್ಯನಗಿರಿಯಲ್ಲಿ ಅನಾವರಣಗೊಳ್ಳುತ್ತೆ. ಕ್ಷಣಕ್ಕೊಮ್ಮೆ ಬದಲಾಗೋ ವಿಶಿಷ್ಟ ಹವಾಗುಣ ಮೈಮನ ತಣಿಸುತ್ತೆ. ಇಲ್ಲಿನ ಪ್ರಕೃತಿಯ ಐಸಿರಿ ಪ್ರವಾಸಿಗರನ್ನು ಮೂಕವಿಸ್ಮತರನ್ನಾಗಿಸುತ್ತೆ. ಒಂದು ಕ್ಷಣ ಎಲ್ಲವನ್ನು ಮರೆತು ಜನರು ಪ್ರಕೃತಿಯ ಸೊಬಗವನ್ನು ಬಾವಪರವಶರಾಗಿ ವೀಕ್ಷಿಸುತ್ತಾರೆ. ಮುಳ್ಳಯ್ಯನಗಿರಿಗೆ (Mullayanagiri Peak)ಬರೋ ಪ್ರವಾಸಿಗರು ಬಾಬಾಬುಡನ್ ಗಿರಿ, ಗಾಳಿಕೆರೆ, ಕಲ್ಲತ್ತಿಫಾಲ್ಸ್, ಸಗೀರ್ ಫಾಲ್ಸ್, ಕೆಮ್ಮಣ್ಣುಗುಂಡಿ ಸೇರಿದಂತೆ ಹಲವು ಪ್ರವಾಸಿತಾಣಗಳಿಗೂ ಭೇಟಿಕೊಡಬಹುದು. ಒಂದು ದಿನದ ಪ್ರವಾಸಕ್ಕೆ ಮುಳ್ಳಯ್ಯನಗಿರಿ ಹೇಳಿ ಮಾಡಿಸಿ ತಾಣ.

ಇದನ್ನೂ ಓದಿ :  ಭಾರತದ “ನಯಾಗರ ಜಲಪಾತ” ಆದಿರಪ್ಪಳ್ಳಿ; ಬಾಹುಬಲಿ ಸಿನಿಮಾದಲ್ಲಿ ಇರೋದು ಇದೇ ಜಲಪಾತ!

ಇದನ್ನೂ ಓದಿ : ಯಾತ್ರಿಕರೇ ಗಮನಿಸಿ! ನಿಮ್ಮ ಟ್ರೈನ್‌ನ ಲೈವ್‌ ಸ್ಟೇಟಸ್‌ ತಿಳಿಯಲು ಗೂಗಲ್‌ ಮ್ಯಾಪ್‌ ಮೊರೆ ಹೋಗಿ

Karnataka Chikmagalur Mullayanagiri Peak

Leave A Reply

Your email address will not be published.