Agumbe Ghat : ಕರ್ನಾಟಕದ ಚಿರಾಪುಂಜಿ ಆಗುಂಬೆ ಘಾಟ್‌ ಜೀವ ವೈವಿದ್ಯತೆಯ ತಾಣ

ಮೇಘಾಲಯದ ಚಿರಪುಂಜಿ ನಂತರ ದೇಶದ ಎರಡನೇ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಈ ಆಗುಂಬೆ. ಆದ್ದರಿಂದ ಆಗುಂಬೆಯನ್ನು ಕರ್ನಾಟಕದ ಚಿರಾಪುಂಜಿ ಎಂದೂ ಕರೆಯಲಾಗುತ್ತದೆ. ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಬೆಸೆಯುವ ಸೇತುವೆ ಆಗುಂಬೆ ಘಾಟಿ. ಅತ್ಯಂತ ಕಡಿದಾದ ಹಾಗೂ ಕಿರುದಾದ ತಿರುವುಗಳನ್ನು ಒಳಗೊಂಡ ಆಗುಂಬೆ ಘಾಟಿಯಲ್ಲಿ ಒಟ್ಟು ಹದಿನಾಲ್ಕು ತಿರುವುಗಳಿದ್ದು, ಮೇಲ್ಭಾಗದ ಏಳು ಸುತ್ತುಗಳು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ, ಕೆಳಗಿನ ಏಳು ಸುತ್ತುಗಳು ಉಡುಪಿ ಜಿಲ್ಲಾ ವ್ಯಾಪ್ತಿಗೆ ಸೇರುತ್ತವೆ.

ಆಗುಂಬೆ ಘಾಟಿ ಅಪರೂಪದ ವನ್ಯಸಂಪತ್ತಿನ ತಾಣ. ಇಲ್ಲಿ ಹಲವು ಬಗೆಯ ಅಪರೂಪದ ಹಾಗೂ ಔಷಧೀಯ ಗುಣವುಳ್ಳ ಸಸ್ಯಗಳನ್ನು ಕಾಣಬಹುದು. ಆಗುಂಬೆ ಘಾಟಿಯ ಮೇಲ್ಭಾಗದಲ್ಲಿ ಸಂಜೆಯ ವೇಳೆ ನಿಂತರೆ ಸೂರ್ಯಾಸ್ತಮಾನದ ದೃಶ್ಯ ಕಾಣಬಹುದು. ಸೂರ್ಯಾಸ್ತಮಾನವನ್ನು ಸವಿಯಲು ಸೂಕ್ತ ಜಾಗವನ್ನು ನಿರ್ಮಿಸಲಾಗಿದ್ದು ಯಾವುದೇ ಪ್ರವೇಶ ಶುಲ್ಕವಿಲ್ಲದೇ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಿ ಸಂಪೂರ್ಣ ಮಂಜು ಕವಿಯುವ ಕಾರಣ ಜೂನ್‌ನಿಂದ ಅಕ್ಟೋಬರ್ ತಿಂಗಳ ತನಕ ಸೂರ್ಯಾಸ್ತದ ದೃಶ್ಯ ಕಾಣುವುದು ಕಷ್ಟಸಾಧ್ಯ.

ಇದನ್ನೂ ಓದಿ: ಕೊಡಗಿನ ನಿಸರ್ಗದ ಸೌಂದರ್ಯ ರಾಣಿ ಮಂದಲ್ ಪಟ್ಟಿ

ಆಗುಂಬೆ ಘಾಟಿಯಲ್ಲಿ ನಿಂತರೆ ಹಸಿರು ಹೊದ್ದ ಪರ್ವತ ಶ್ರೇಣಿಯಿಂದ ಹಿಡಿದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳ ಪಕ್ಷಿನೋಟವನ್ನು ಕಾಣಬಹುದು. ಆಗುಂಬೆ ಘಾಟಿಯ ಮೂರನೇ ಸುತ್ತಿನಲ್ಲಿ (ಕೆಳಗಿನಿಂದ) ಆನೆಕಲ್ಲು ಎಂದು ಗುರುತಿಸಲಾದ ರಸ್ತೆಗೆ ಚಾಚಿಕೊಂಡಿರುವ ಬೃಹದಾಕಾರದ ಬಂಡೆಕಲ್ಲು ಸಿಗುತ್ತದೆ. ದೂರದಿಂದ ನೋಡಲು ಆನೆಯ ಮುಖದ ಆಕಾರವಿರುವ ಕಾರಣ ಆ ಬಂಡೆಗೆ ಆನೆಕಲ್ಲು ಎಂಬ ಹೆಸರು ಬಂತೆಂಬ ಪ್ರತೀತಿ ಇದೆ. ಹಾಗೂ ಆನೆಕಲ್ಲು ಭೂಮಿಯ ಒಳಗೂ ಚಾಚಿಕೊಂಡಿದ್ದು ಬಂಡೆಯನ್ನು ತೆರವುಗೊಳಿಸಿದರೆ ರಸ್ತೆ ಕುಸಿತ ಉಂಟಾಗಬಹುದೆಂಬ ಕಾರಣಕ್ಕೆ ಅದನ್ನು ಹಾಗೆಯೇ ಬಿಡಲಾಗಿದೆ.

ಘಾಟಿ ಆರಂಭವಾಗುವ ಮೊದಲು ಮೇಲ್ಭಾಗದಲ್ಲಿ ಈಜು ಕೊಳವಿದ್ದು ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಗುಂಬೆಯ ಸೂರ್ಯಸ್ತಮಾನ, ಅಧಿಕ ಮಳೆ, ದಟ್ಟ ಮಂಜು, ಚಳಿ ಇವಿಷ್ಟನ್ನೇ ತಿಳಿದ ಪ್ರವಾಸಿಗರಿಗೆ ಆಗುಂಬೆಗೆ ಬಂದರೆ ಇನ್ನಷ್ಟು ಅಚ್ಚರಿಗಳು ತೆರೆದುಕೊಳ್ಳುತ್ತವೆ. ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಅಧ್ಯಯನ ಕೇಂದ್ರವೂ ಇದ್ದು, ದೇಶ, ವಿದೇಶಗಳಿಂದ ಆಗಮಿಸುವ ಉರಗಪ್ರಿಯರು ಇಲ್ಲಿ ಕಾಳಿಂಗ ಸರ್ಪಗಳ ಜೀವನಶೈಲಿ ಸೇರಿದಂತೆ ಹಲವು ವಿಶೇಷ ಮಾಹಿತಿಗಳನ್ನು ಪಡೆಯಬಹುದು. ಆಗುಂಬೆ ಘಾಟಿಯ ಸುತ್ತಮುತ್ತ ಇರುವ ಜಲಪಾತಗಳು ಸಹ ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ. ಒನಕೆ ಅಬ್ಬಿ, ಬರ್ಕಣ, ಜೋಗಿಗುಂಡಿ ಎಂಬ ಜಲಪಾತಗಳು ಆಗುಂಬೆಯ ಸುತ್ತಮುತ್ತಲಿವೆ.

ಇದನ್ನೂ ಓದಿ: ಮೈಸೂರಲ್ಲಿ ದಸರಾ ಸಂಭ್ರಮ : ಅರಮನೆಯಲ್ಲಿ ಅಂಬಾರಿಯಷ್ಟೇ ಅಲ್ಲಾ ಇನ್ನೂ ಇದೆ ಹಲವು ವಿಶೇಷತೆ

(Chirapunji Agumbe Ghat In Karnataka Is A Biodiversity Site)

Comments are closed.