ಉಡುಪಿ ಸಂತೆ ಮಾರ್ಕೆಟ್‌ನಲ್ಲಿ ಅಗ್ನಿ ಅವಘಡ: ಹಣ್ಣಿನ ಅಂಗಡಿ ಸಂಪೂರ್ಣ ಭಸ್ಮ, ಲಕ್ಷಾಂತರ ರೂ. ನಷ್ಟ!
ಉಡುಪಿ: ನಗರದ ಆದಿ ಉಡುಪಿ ಸಂತೆ ಮಾರ್ಕೆಟ್‌ನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಮಾರ್ಕೆಟ್‌ನಲ್ಲಿರುವ ಹಣ್ಣು-ಹಂಪಲು ಸಂಗ್ರಹದ ದೊಡ್ಡ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ.

ಉಡುಪಿ: ನಗರದ ಆದಿ ಉಡುಪಿ ಸಂತೆ ಮಾರ್ಕೆಟ್‌ನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಮಾರ್ಕೆಟ್‌ನಲ್ಲಿರುವ ಹಣ್ಣು-ಹಂಪಲು ಸಂಗ್ರಹದ ದೊಡ್ಡ ಅಂಗಡಿಯೊಂದಕ್ಕೆ (ಗೋಡೌನ್) ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಹಣ್ಣುಗಳು ಹಾಗೂ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.
ಅಂಗಡಿಯಲ್ಲಿ ಶೇಖರಿಸಿಡಲಾಗಿದ್ದ ಹಣ್ಣುಗಳ ಬಾಕ್ಸ್‌ಗಳಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ಪ್ಲಾಸ್ಟಿಕ್ ಹಾಗೂ ಕಾರ್ಡ್‌ಬೋರ್ಡ್ ಬಾಕ್ಸ್‌ಗಳು ಹೆಚ್ಚಾಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಅಂಗಡಿಯ ಒಳಭಾಗಕ್ಕೆ ವ್ಯಾಪಿಸಿದೆ. ದಟ್ಟವಾದ ಹೊಗೆ ಹಾಗೂ ಕೆನ್ನಾಲಿಗೆ ಚಾಚಿದ ಬೆಂಕಿಯ ಅಬ್ಬರಕ್ಕೆ ಗೋಡೌನ್‌ನಲ್ಲಿದ್ದ ಬಹುತೇಕ ಹಣ್ಣುಗಳು ಹಾಗೂ ಬೆಲೆಬಾಳುವ ಪೀಠೋಪಕರಣಗಳು ಸಂಪೂರ್ಣವಾಗಿ ಆಹುತಿಯಾಗಿವೆ.
ಇದನ್ನೂ ಓದಿ : ನೇರಳೆ ಹೆಚ್ಚಾದ್ರೆ ಬರಗಾಲ ಗ್ಯಾರಂಟಿನಾ? ಹಿರಿಯರ ಮಾತಿನ ಹಿಂದಿರುವ ಅಸಲಿ ಸತ್ಯ ಇಲ್ಲಿದೆ!
ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸಂತೆ ಮಾರ್ಕೆಟ್‌ನಲ್ಲಿ ನೂರಾರು ಅಂಗಡಿಗಳು ಪಕ್ಕಪಕ್ಕದಲ್ಲೇ ಇರುವುದರಿಂದ ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಪಕ್ಕದ ಇತರೆ ಅಂಗಡಿಗಳಿಗೆ ಬೆಂಕಿ ವ್ಯಾಪಿಸದಂತೆ ತಡೆಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ, ವ್ಯಾಪಾರಸ್ಥರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಅಗ್ನಿ ಅವಘಡಕ್ಕೆ ನಿಖರವಾದ ಕಾರಣವೇನು ಎಂಬುದರ ತನಿಖೆ ಮುಂದುವರಿದಿದೆ.



