ಅನ್ಯಧರ್ಮೀಯರಿಂದ ದೈವನರ್ತನ ಆರೋಪ : ಗಣೇಶ ಪಂಬದ ಕುಟುಂಬಸ್ಥರಿಂದ ದಾಖಲೆ ಸಮೇತ ಸ್ಪಷ್ಟನೆ

ಪಂಬದ ಸಮಾಜದ ಸಂಶೋಧಕಿ ಡಾ. ರತಿ ಅವರು, ಅನ್ಯಧರ್ಮೀಯ ವ್ಯಕ್ತಿ ದೈವನರ್ತನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.

Ganesh Pambada : ತುಳುನಾಡಿನ ಜೀವನಾಡಿ ಎನಿಸಿರುವ ದೈವನರ್ತನ ಸಂಸ್ಕೃತಿಗೆ ಅಪಮಾನವಾಗಿರುವ ವಿಚಾರ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಪಂಬದ ಸಮಾಜದ ಸಂಶೋಧಕಿ ಡಾ. ರತಿ ಅವರು, ಅನ್ಯಧರ್ಮೀಯ ವ್ಯಕ್ತಿ ದೈವನರ್ತನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಇದೀಗ ನೇಮ ಕಟ್ಟುವ ಜವಾಬ್ದಾರಿ ವಹಿಸಿದ್ದ ದೈವಸ್ಥಾನದ ಆಡಳಿತ ಮಂಡಳಿ ದೈವ ನರ್ತಕ ಗಣೇಶ್ ಪಂಬದ ದಾಖಲೆಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಶ್ರೀ ಜಾರಂದಾಯ ದೈವಕ್ಕೆ ಪಂಬದ ಸಮುದಾಯವೇ ನೇಮ ನಡೆಸಿಕೊಟ್ಟಿದ್ದರೂ ಸಹ ಬಂಟ ದೈವಕ್ಕೆ ನರ್ತನ ಮಾಡಿರುವ ಗಣೇಶ ಪಂಬದ ಅವರ ಪುತ್ರ ಸುಶಾಂತ್​ ಪಂಬದ ಕ್ರಿಶ್ಚಿಯನ್​ ಧರ್ಮಕ್ಕೆ ಸೇರಿದವರು ಎಂಬುದು ಡಾ. ರತಿ ಅವರ ಆರೋಪವಾಗಿದೆ. ಗಣೇಶ್​ ಪಂಬದ ಅವರು ಕ್ರಿಶ್ಚಿಯನ್​ ಸಮುದಾಯದ ಮಹಿಳೆಯನ್ನು ಮದುವೆಯಾಗಿದ್ದು, ಅಳಿಯ ಕಟ್ಟು ಸಂಪ್ರದಾಯ ಹೊಂದಿರುವ ಪಂಬದ ಸಮುದಾಯದಲ್ಲಿ ಮಗು ತಾಯಿಯ ಧರ್ಮಕ್ಕೆ ಸೇರುತ್ತದೆ. ಹೀಗಾಗಿ ಗಣೇಶ್​ ಪಂಬದ ಜೈವಿಕ ತಂದೆಯಾಗಿದ್ದರೂ ಸಹ ಸುಶಾಂತ್​ ಕ್ರಿಶ್ಚಿಯನ್​ ಧರ್ಮಕ್ಕೆ ಸೇರುತ್ತಾರೆ ಎಂಬುದು ಡಾ. ರತಿಯವರ ವಾದವಾಗಿತ್ತು.

ಇದನ್ನೂ ಓದಿ: ಗ್ಯಾಸ್ ಕೊರತೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ಎಸ್ಪಿ ಎಚ್ಚರಿಕೆ

ಈ ವಿಚಾರವಾಗಿ ಸುಶಾಂತ್​ ಪಂಬದರ ಜಾತಿ ಪ್ರಮಾಣಪತ್ರದೊಂದಿಗೆ ಸ್ಪಷ್ಟನೆ ನೀಡಿರುವ ಗಣೇಶ ಪಂಬದ, ಸುಶಾಂತ್​ ಕ್ರೈಸ್ತನಲ್ಲ. ಮದುವೆಯಾದ ಬಳಿಕ ಆತನ ತಾಯಿಯೂ ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾರೆ. ರತಿಯವರ ಕುಟುಂಬವೇ ಸುಶಾಂತ್​ ಸಹೋದರನಿಂದ ಹಲವು ಕಡೆ ದೈವ ನರ್ತನ ಮಾಡಿಸಿದೆ. ಆದರೆ ಇದೀಗ ಅವರಿಗೆ ಅದ್ಯಾಕೆ ಸಮಸ್ಯೆ ಕಾಣಿಸಿತೋ ನನಗೆ ತಿಳಿಯದು ಎಂದಿದ್ದಾರೆ.

ಆರೋಪ ಎದುರಿಸುತ್ತಿರುವ ದೈವ ನರ್ತಕ ಸುಶಾಂತ್​ ಪಂಬದ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಈ ಆರೋಪದಿಂದಾಗಿ ನನ್ನ ಜೀವನವೇ ಬದಲಾಗಿ ಹೋಯ್ತು. ನನಗೆ ಎಲ್ಲೂ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ನನ್ನ ಬಳಿ ಪಂಬದ ಜಾತಿ ಪ್ರಮಾಣಪತ್ರವಿದೆ. ನಾನೂ ಪಂಬದ ಜನಾಂಗದವನು ಎಂದಿದ್ದಾರೆ.

ಸುಶಾಂತ್​ ತಾಯಿ ಸವಿತಾ ಕೂಡ ಇದೇ ವೇಳೆ ಮಾತನಾಡಿ, ಮದುವೆಗೂ ಮುನ್ನ ನಾನು ಕ್ರಿಶ್ಚಿಯನ್​ ಧರ್ಮೀಯಳಾಗಿದ್ದು ನಿಜ. ಆದರೆ ಮದುವೆ ಬಳಿಕ ಹಿಂದೂ ಧರ್ಮವನ್ನೇ ಪಾಲಿಸುತ್ತಿರುವೆ. ಮಕ್ಕಳಿಗೂ ಹಿಂದೂ ಧರ್ಮವನ್ನೇ ಪಾಲಿಸುತ್ತಿರುವೆ. ನನ್ನ ಮಗ ಕ್ರಿಶ್ಚಿಯನ್​ ಎಂದು ಅವರು ಒಂದು ದಾಖಲೆ ತೋರಿಸಲಿ, ಆಗ ನಾನು ಅವನನ್ನು ದೈವನರ್ತನಕ್ಕೆ ಕಳಿಹಿಸುವುದನ್ನೇ ನಿಲ್ಲಿಸುವೆ ಎಂದಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories