ಕುಂದಾಪುರ: ಶುಕ್ರವಾರದ ನಮಾಜ್ ಮುಗಿಸಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, ಪ್ರಕರಣ ದಾಖಲು
Udupi News : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಲ್ವಾಡಿ ಮಸೀದಿ ಬಳಿ ನಡೆದ ಘಟನೆ. ಆರೋಪಿ ಮೊಹಮ್ಮದ್ ಸಿನಾನ್ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Udupi News : ಕುಂದಾಪುರ: ಶುಕ್ರವಾರದ ನಮಾಜ್ ಮುಗಿಸಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊರ್ವರನ್ನು ಅಡ್ಡಗಟ್ಟಿ, ಸ್ಕ್ರೂ ಡ್ರೈವರ್‌ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆಯೊಂದು ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಜಿ.ಎಮ್. ಮುನ್ನಾ ಅವರ ಬಾಡಿಗೆ ಮನೆಯ ನಿವಾಸಿ ಫಾರೂಕ್ ಮೊಹಮ್ಮದ್ (43 ವರ್ಷ) ಎಂಬವರೇ ಹಲ್ಲೆಗೊಳಗಾದ ವ್ಯಕ್ತಿ. ಮೇ 1 ರಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ.
ಫಾರೂಕ್ ಅವರು ಗುಲ್ವಾಡಿ ಮಸೀದಿಯಲ್ಲಿ ಶುಕ್ರವಾರದ ನಮಾಜ್ ಮುಗಿಸಿ ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದಾಗ, ಪರಿಚಿತನಾದ ಮೊಹಮ್ಮದ್ ಸಿನಾನ್ ಅಲಿಯಾಸ್ ಚಿನ್ನು ಎಂಬಾತ ಸ್ಕೂಟಿಯಲ್ಲಿ ಬಂದು ದಾರಿಗೆ ಅಡ್ಡಗಟ್ಟಿದ್ದಾನೆ. ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದ ಆರೋಪಿ ಸಿನಾನ್, ಕಾಲಿನಿಂದ ಬೈಕ್‌ಗೆ ಒದ್ದಿದ್ದಾನೆ. ಪರಿಣಾಮ ಫಾರೂಕ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ.
Also Read : ಮಲ್ಪೆ ಬಂದರಿನಲ್ಲಿ ಗಲಾಟೆ: ಪರಸ್ಪರ ದೂರು ದಾಖಲು
ನಂತರ ಕೆಳಗೆ ಬಿದ್ದ ಫಾರೂಕ್ ಅವರ ಹೊಟ್ಟೆ ಮತ್ತು ಬೆನ್ನಿಗೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಸ್ಕೂಟಿಯಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ಫಾರೂಕ್ ಅವರ ತಲೆಗೆ ಹೊಡೆದಿದ್ದಾನೆ. ಇದರಿಂದ ಫಾರೂಕ್ ಅವರ ತಲೆಗೆ ಗಂಭೀರ ರಕ್ತಗಾಯವಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಸೀದಿಯಿಂದ ಜನರು ಓಡಿ ಬರುತ್ತಿರುವುದನ್ನು ಗಮನಿಸಿದ ಆರೋಪಿ ಸಿನಾನ್, “ಇವತ್ತು ನೀನು ಬಚಾವಾದೆ, ಇನ್ನು ಮುಂದಕ್ಕೆ ನನ್ನ ಬಗ್ಗೆ ಮಾತಾಡಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
Also Read : “ಮೇ ತಿಂಗಳಲ್ಲಿ ಬರಲಿದ್ದಾನೆ ವರುಣ: ದಕ್ಷಿಣ ಒಳನಾಡಿನ ಜನರೇ ಎಚ್ಚರ!”
ಗಾಯಾಳು ಫಾರೂಕ್ ಮೊಹಮ್ಮದ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
kundapura gulvadi assault case 2026



