ನೀಟ್ ಪರೀಕ್ಷೆ ಭೀತಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಸಕಲೇಶಪುರದಲ್ಲಿ ಪತ್ತೆ
ಮೇ 3ರಂದು ಉಡುಪಿಯಲ್ಲಿ ನೀಟ್ ಪರೀಕ್ಷೆ ಬರೆದಿದ್ದ ಅಭಿಷೇಕ್, ಮೇ 4ರಂದು ಹಾಸನದಲ್ಲಿರುವ ತಾಯಿಗೆ ಕರೆ ಮಾಡಿ ಮನೆಯಿಂದ ಮಣಿಪಾಲಕ್ಕೆ ಹೋಗುವುದಾಗಿ ತಿಳಿಸಿದ್ದನು.

ಉಡುಪಿ : ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದೆಂಬ ಆತಂಕದಿಂದ ಮನೆ ಬಿಟ್ಟು ತೆರಳಿದ್ದ ವಿದ್ಯಾರ್ಥಿಯನ್ನು ಕೋಟ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಕಲೇಶಪುರದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ನಾಪತ್ತೆಯಾಗಿದ್ದ ವಿದ್ಯಾರ್ಥಿಯನ್ನು ಕೋಟ ಮೂರುಕೈ ನಿವಾಸಿ ಅಭಿಷೇಕ್ (17) ಎಂದು ಗುರುತಿಸಲಾಗಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಆತ ಹಾಸ್ಟೆಲ್ನಲ್ಲಿ ವಾಸವಾಗಿದ್ದನು. ಮೇ 3ರಂದು ಉಡುಪಿಯಲ್ಲಿ ನೀಟ್ ಪರೀಕ್ಷೆ ಬರೆದಿದ್ದ ಅಭಿಷೇಕ್, ಮೇ 4ರಂದು ಹಾಸನದಲ್ಲಿರುವ ತಾಯಿಗೆ ಕರೆ ಮಾಡಿ ಮನೆಯಿಂದ ಮಣಿಪಾಲಕ್ಕೆ ಹೋಗುವುದಾಗಿ ತಿಳಿಸಿದ್ದನು.
Also Read : ಕುಂದಾಪುರ : ಜಾಗದ ತಕರಾರು ನೆರೆಮನೆಯವನ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ
ಆದರೆ ಸಂಜೆಯಾದರೂ ಮನೆಗೆ ವಾಪಸ್ಸಾಗದೇ ಇದ್ದುದರಿಂದ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದರು. ಈ ವೇಳೆ ಮನೆಯಲ್ಲಿ ಅಭಿಷೇಕ್ ಬರೆದಿಟ್ಟಿದ್ದ ಪತ್ರ ಪತ್ತೆಯಾಗಿದ್ದು, ಅದರಲ್ಲಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದೆಂಬ ಭೀತಿಯನ್ನು ವ್ಯಕ್ತಪಡಿಸಿದ್ದಾನೆ ಎಂದು ತಿಳಿದುಬಂದಿದೆ.
Also Read : ಉಡುಪಿ: ಅಂದರ್-ಬಾಹರ್ ಜೂಜಾಟದ ಅಡ್ಡೆ ಮೇಲೆ ಪೊಲೀಸರ ಮಿಂಚಿನ ದಾಳಿ; ನಾಲ್ವರ ಬಂಧನ
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ಕೈಗೊಂಡರು. ತನಿಖೆ ವೇಳೆ ಅಭಿಷೇಕ್ ಧರ್ಮಸ್ಥಳದ ಮೂಲಕ ಸಕಲೇಶಪುರ ಕಡೆ ತೆರಳಿರುವ ಮಾಹಿತಿ ದೊರೆತಿದ್ದು, ಪೊಲೀಸರು ಆತನನ್ನು ಸುರಕ್ಷಿತವಾಗಿ ಪತ್ತೆ ಹಚ್ಚಿದ್ದಾರೆ. ನೀಟ್ ಪರೀಕ್ಷೆಯ ಫಲಿತಾಂಶದ ಭೀತಿಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆತ ಮನೆ ಬಿಟ್ಟು ಹೋಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
neet exam student found sakleshpur



