Udupi: ನಗರದ ಪ್ರಮುಖ ಸಂಚಾರ ಟ್ರಾಫಿಕ್ ನಿಂದ ಕೂಡಿದ ಪ್ರದೇಶಗಳಾದ ಅಂಬಾಗಿಲು ಹಾಗೂ ಬಲೈಪಾದೆ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿರುವ ಸಂಚಾರ ಸಿಗ್ನಲ್ ವ್ಯವಸ್ಥೆಗಳು ಇನ್ನೂ ಎರಡು ವಾರಗಳೊಳಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ತಿಳಿಸಿದ್ದಾರೆ.
ಉಡುಪಿ(Udupi) ನಗರಪಾಲಿಕೆ ಆಯುಕ್ತ ಮಹಾಂತೇಶ್ ಅವರೊಂದಿಗೆ ಅಂಬಾಗಿಲು ಹಾಗೂ ಬಲೈಪಾದೆ ಜಂಕ್ಷನ್‌ಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತೆ ದೃಷ್ಟಿಯಿಂದ ಈ ಸಿಗ್ನಲ್ ವ್ಯವಸ್ಥೆಗಳನ್ನು ಶೀಘ್ರ ಕಾರ್ಯಗತಗೊಳಿಸುವ ಉದ್ದೇಶವಿದೆ ಎಂದು ಹೇಳಿದರು.
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಜಂಕ್ಷನ್‌ಗಳ ಸುತ್ತಮುತ್ತ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ಹಾಗೂ ಸ್ಥಳೀಯರೊಂದಿಗೆ ಸಂವಾದ ನಡೆಸಿ, ಸಿಗ್ನಲ್ ಅಳವಡಿಕೆಯಿಂದ ಉಂಟಾಗಬಹುದಾದ ಸಮಸ್ಯೆಗಳು, ವಾಹನ ನಿಲುಗಡೆ, ಪಾದಚಾರಿಗಳ ಸಂಚಾರ ಹಾಗೂ ವ್ಯಾಪಾರ ಚಟುವಟಿಕೆಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ವ್ಯವಸ್ಥೆ ರೂಪಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಭರವಸೆ ನೀಡಿದರು.
Also Read: ಅವಸಾನದ ಅಂಚಿಗೆ ತಲುಪಿದ ಬೃಹತ್ ಶಿಲಾಯುಗದ ಶಿಲಾಗೋರಿಗಳು
ಅಂಬಾಗಿಲು ಮತ್ತು ಬಲೈಪಾದೆ ಜಂಕ್ಷನ್‌ಗಳು ಪ್ರತಿದಿನವೂ ಭಾರೀ ವಾಹನ ಸಂಚಾರ ಹೊಂದಿರುವ ಪ್ರದೇಶಗಳಾಗಿದ್ದು, ಸಿಗ್ನಲ್ ವ್ಯವಸ್ಥೆ ಕಾರ್ಯಾರಂಭವಾದ ಬಳಿಕ ಪಾರ್ಕಿಂಗ್, ಸಂಚಾರ ಗೊಂದಲ ಹಾಗೂ ಅಪಘಾತಗಳ ಪ್ರಮಾಣ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಸಿಗ್ನಲ್‌ಗಳ ಪರೀಕ್ಷಾ ಕಾರ್ಯ, ರಸ್ತೆ ಗುರುತುಗಳು, ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ ಉಳಿದ ತಾಂತ್ರಿಕ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸಹ ಸಂಚಾರ ನಿಯಮಗಳನ್ನು ಪಾಲಿಸಿ ಸಹಕರಿಸಬೇಕು ಎಂದು ಹರಿರಾಮ ಶಂಕರ್ ಅವರು ಮನವಿ ಮಾಡಿದ್ದಾರೆ.

